ಮುಂದಿನ 4 ತಿಂಗಳಲ್ಲಿ 60,000 ರೈಲ್ವೆ ಹುದ್ದೆ ಭರ್ತಿ: ಕೇಂದ್ರ ಸಚಿವ ವಿ.ಸೋಮಣ್ಣ.

ಮುಂದಿನ ನಾಲ್ಕು ತಿಂಗಳಲ್ಲಿ 60 ಸಾವಿರ ಹುದ್ದೆಗಳನ್ನು ತುಂಬಲು ನಿರ್ಧರಿಸಿದ್ದು, ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಸದ್ಬಳಕೆ ಮಾಡಿಕೊಂಡು ಹೆಚ್ಚು ಮಂದಿ ಕನ್ನಡಿಗರು ಹುದ್ದೆಗಳನ್ನು ಪಡೆಯಬೇಕು. ಆಗ ನಮ್ಮೆಲ್ಲರ ಪ್ರಯತ್ನ ಮತ್ತು ಶ್ರಮ ಸಾರ್ಥಕವಾಗಲಿದೆ ಎಂದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ.

ಬೆಂಗಳೂರು(ಡಿ.29):  ಭಾರತೀಯ ರೈಲ್ವೆಯಲ್ಲಿ ಕನ್ನಡಿಗರು ಶೇ.25ರಿಂದ 30ರಷ್ಟು ಹುದ್ದೆಗಳನ್ನಾದರೂ ಪಡೆದರೆ ಕನ್ನಡದಲ್ಲಿ ರೈಲ್ವೆ ಪರೀಕ್ಷೆ ಬರೆಯುವಂತೆ ಅವಕಾಶ ಕೊಡಿಸಲು ನಾನು ಪಟ್ಟ ಶ್ರಮ ಹಾಗೂ ಪ್ರಯತ್ನ ಸಾರ್ಥಕವಾಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. 

ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಹೆಸರಾಯಿತು ಕರ್ನಾಟಕ 50’ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾನು ಮಂತ್ರಿಯಾಗಿ ರೈಲ್ವೆ ಖಾತೆ ವಹಿಸಿಕೊಂಡಾಗ ವಿನಯ್ ಗುರೂಜಿ, ಕನ್ನಡದಲ್ಲೂ ರೈಲ್ವೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ತಿಳಿಸಿದ್ದರು. ಈ ಕುರಿತು ನಾನು ಮೊದಲ ಸಭೆಯಲ್ಲೇ ಚರ್ಚಿಸಿ, ಪ್ರಯತ್ನ ಪಟ್ಟಿದ್ದೆ. ಮುಂದಿನ ನಾಲ್ಕು ತಿಂಗಳಲ್ಲಿ 60 ಸಾವಿರ ಹುದ್ದೆಗಳನ್ನು ತುಂಬಲು ನಿರ್ಧರಿಸಿದ್ದು, ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಸದ್ಬಳಕೆ ಮಾಡಿಕೊಂಡು ಹೆಚ್ಚು ಮಂದಿ ಕನ್ನಡಿಗರು ಹುದ್ದೆಗಳನ್ನು ಪಡೆಯಬೇಕು. ಆಗ ನಮ್ಮೆಲ್ಲರ ಪ್ರಯತ್ನ ಮತ್ತು ಶ್ರಮ ಸಾರ್ಥಕವಾಗಲಿದೆ ಎಂದು ಹೇಳಿದರು. 

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ಸಂಸತ್ತಿನ ಎರಡೂ ಮನೆಗಳಲ್ಲಿ ಕನ್ನಡ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಪ್ರಶ್ನೆ ಕೇಳುವ ಮತ್ತು ಉತ್ತರ ಪಡೆಯುವ ವ್ಯವಸ್ಥೆ ಜಾರಿಗೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ, ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಗದಗ ಜಿಲ್ಲೆಯ ಡಂಬಳದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಆ‌ರ್.ಕೆ.ನಲ್ಲೂರು ಪ್ರಸಾದ್‌ ಇದ್ದರು.

Source : https://kannada.asianetnews.com/central-government-jobs/60000-railway-posts-recruitment-in-next-4-months-says-union-minister-v-somanna-grg-sp8j2r

Leave a Reply

Your email address will not be published. Required fields are marked *