ಕೆಎಎಸ್ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ನೋಂದಣಿ- ಓಎಂಆರ್ ಶೀಟ್​ ನಂಬರ್ ಅದಲು ಬದಲು.

ಕರ್ನಾಟಕ ಲೋಕಸೇವಾ ಆಯೋಗದ ಕೆಎಎಸ್​ ಗ್ರೂಪ್ ಎ ಮತ್ತು ಬಿ ಪರೀಕ್ಷೆಯಲ್ಲಿ ಭಾರೀ ಎಡವಟ್ಟು ನಡೆದಿದೆ. ವಿಜಯಪುರ ಮತ್ತು ಕೋಲಾರ ಪರೀಕ್ಷಾ ಕೇಂದ್ರಗಳಲ್ಲಿ ಓಎಂಆರ್ ಶೀಟ್​​ನಲ್ಲಿ ನೋಂದಣಿ ಸಂಖ್ಯೆಗಳ ತಪ್ಪುಗಳು ಕಂಡುಬಂದಿದ್ದು, ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನಿರಾಕರಿಸಿದ್ದಾರೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ ಮತ್ತು ಹೆಚ್ಚುವರಿ ಸಮಯ ನೀಡುವ ಭರವಸೆ ನೀಡಿದ್ದಾರೆ.

ವಿಜಯಪುರ, ಡಿಸೆಂಬರ್​​ 29: ಕರ್ನಾಕದಾದ್ಯಂತ ಕರ್ನಾಟಕ ಲೋಕ ಸೇವಾ ಆಯೋಗದಿಂದ (kpsc) ನಡೆಸುತ್ತಿದ್ದ ಕೆಎಎಸ್​​ ಶ್ರೇಣಿಯ ಗ್ರೂಪ್​ ಎ ಹಾಗೂ ಗ್ರೂಪ್​ ಬಿ ಹುದ್ದೆಗಳಿಗೆ ಇಂದು ನಡೆಸಲಾಗುತ್ತಿದ್ದ ಪರೀಕ್ಷೆಯಲ್ಲಿ ದೊಡ್ಡ ಎಡವಟ್ಟು ಉಂಟಾಗಿದೆ. ಓಎಂಆರ್ ಶೀಟ್​​ನಲ್ಲಿ ನೊಂದಣಿ ಸಂಖ್ಯೆ ಅದಲು ಬದಲು ಆರೋಪ ಕೇಳಿಬಂದಿದ್ದು, ಪರೀಕ್ಷೆ ಬರೆಯದೆ ಪರೀಕ್ಷಾರ್ಥಿಗಳು ಹೊರ ಬಂದಿದ್ದಾರೆ. ಈಗಾಗಲೇ ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು ಆಗಿದ್ದರಿಂದ ಕೆಪಿಎಎಸ್​​ ಮತ್ತೊಮ್ಮೆ ಪರೀಕ್ಷೆ ನಡೆಸುತಿತ್ತು. ಆದರೆ ಇದೀಗ ಮತ್ತೆ ಅದೇ ಎಡವಟ್ಟು ಮಾಡಿದೆ. ಇದರಿಂದ ಅಭ್ಯರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ 32 ಪರೀಕ್ಷಾ ಕೇಂದ್ರಗಳಲ್ಲಿ 12,741 ಪರೀಕ್ಷಾರ್ಥಿಗಳು ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್​​ ಎ ಹಾಗೂ ಬಿ ಹುದ್ದೆಗಳಿಗಾಗಿ ಪರೀಕ್ಷೆ ಬರೆಯುತ್ತಿದ್ದಾರೆ. ಈ ಪೈಕಿ ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಎರಡು ಪರೀಕ್ಷಾ ಕೇಂದ್ರಗಳು ಮರಾಠಿ ಮಹಾವಿದ್ಯಾಲಯ ಹಾಗೂ ವಿಕಾಸ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳ ನೋಂದಣಿ ಸಂಖ್ಯೆ ಹಾಗೂ ಓಎಂಆರ್ ಶೀಟ್​​ನಲ್ಲಿನ ನಂಬರ್ ಅದಲು ಬದಲಾಗಿರುವುದು ಕಂಡು ಬಂದಿದೆ. ಇದನ್ನು ವಿರೋಧಿಸಿ ಸಿಕ್ಯಾಬ್ ಸಂಸ್ಥೆಯ ಪರೀಕ್ಷಾ ಕೇಂದ್ರಗಳಲ್ಲಿನ ಹಲವಾರು ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯದೆ ಹೊರ ಬಂದಿದ್ದಾರೆ.

ಆಗ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಜಿಲ್ಲಾ ಪಂಚಾಯತಿ ಸಿಇಓ ರಿಶಿ ಆನಂದ ಪರೀಕ್ಷಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಪರೀಕ್ಷಾರ್ಥಿಗಳ ನೋಂದಣಿ ನಂಬರ್ ಹಾಗೂ ಓಎಂಆರ್ ಶೀಟ್​​ನಲ್ಲಿನ ನಂಬರ್ ಬದಲಾಗಿದೆ ಎಂದು ಕೆಪಿಎಸ್​ಸಿ ಅಧಿಕಾರಿಗಳ ಜೊತೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಜಿಲ್ಲಾ ಪಂಚಾಯತಿ ಸಿಇಓ ರಿಶಿ ಆನಂದ ಮಾತನಾಡಿದರು.

ಈ ವಿಚಾರವಾಗಿ ಪರೀಕ್ಷಾರ್ಥಿಗಳ ನೋಂದಣಿ ನಂಬರ್​ನ್ನು ಓಎಂಆರ್ ಶೀಟ್​ನಲ್ಲಿ ಪ್ರತ್ಯೇಕವಾಗಿ ನೋಂದಾಯಿಸಲು ಕೆಪಿಎಸ್​ಸಿ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಇದೇ ವಿಚಾರವನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಜಿಲ್ಲಾ ಪಂಚಾಯತಿ ಸಿಇಓ ರಿಶಿ ಆನಂದ ಪರೀಕ್ಷಾರ್ಥಿಗಳಿಗೆ ತಿಳಿ ಹೇಳಿದ್ದಾರೆ. ಓಎಂಆರ್ ಶೀಟ್​ನಲ್ಲಿ ಪರೀಕ್ಷಾರ್ಥಿಗಳ ನೋಂದಣಿ ನಂಬರ್​​ ನಮೂದಿಸಲು ಸೂಚನೆ ನೀಡಿ ಪರೀಕ್ಷೆ ಬರೆಯುವಂತೆ ಮನವೊಲಿಕೆ ಮಾಡಿದ್ದಾರೆ.

ಇನ್ನು ಪರೀಕ್ಷೆ ಬರೆಯದೇ ವಿಳಂಬವಾಗಿರುವ ಸಮಯವನ್ನು ಹೆಚ್ಚುವರಿ ನೀಡಲಾಗುತ್ತದೆ ಎಂದು ಸಹ ಭರವಸೆ ನೀಡಿದ್ದಾರೆ. ಅಧಿಕಾರಿಗಳು ಸಮಸ್ಯೆ ಬಗೆ ಹರಿಸಿದ ಬಳಿಕ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ತೆರಳಿದರು. ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಕೋಲಾರದಲ್ಲೂ ಎಡವಟ್ಟು

ಇನ್ನು ವಿಜಯಪುರ ಬಳಿಕ ಕೋಲಾರದ ಪರೀಕ್ಷಾ ಕೇಂದ್ರದಲ್ಲೂ ಇದೇ ಎಡವಟ್ಟಾಗಿದೆ. ಪ್ರವೇಶ ಪತ್ರದ ಸಂಖ್ಯೆ, ಓಎಂಆರ್​ ಸಂಖ್ಯೆ ಹೊಂದಾಣಿಕೆ ಆಗದ ಆರೋಪ ಕೇಳಿಬಂತು. ಹೀಗಾಗಿ ಪರೀಕ್ಷಾ ಕೇಂದ್ರದಿಂದ ಹೊರಬಂದು ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರವೇಶ ಪತ್ರ, ಓಎಂಆರ್​ ಶೀಟ್​​ನಲ್ಲಿ ಬೇರೆ ರಿಜಿಸ್ಟರ್​ ನಂಬರ್ ಇದೆ. ಬೇರೆ ಬೇರೆ ರಿಜಿಸ್ಟರ್ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪರೀಕ್ಷೆ ಬರೆಯಿರಿ ಇಲ್ಲವಾದರೆ ಬಿಡಿ ಎಂದು ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಪರೀಕ್ಷಾರ್ಥಿಗಳಿಗೆ ಧಮ್ಕಿ ಹಾಕಿದ ಆರೋಪ ಮಾಡಲಾಗಿದೆ.

Source : https://tv9kannada.com/employment/another-mistake-in-kas-exam-registration-omr-sheet-number-instead-of-it-karnataka-news-in-kannada-ggs-956450.html

Leave a Reply

Your email address will not be published. Required fields are marked *