![](https://samagrasuddi.co.in/wp-content/uploads/2025/01/c1c2bed1-4292-4447-b8c0-2d9aa5e3c169.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 05 ಇತ್ತೀಚೆಗೆ ನಡೆದ ಮೂರು ವಿಧಾನಸಭೆ ಉಪ ಚುನಾವಣೆಗಳಲ್ಲಿ ಸೋಲಿನಿಂದ ಕಂಗೆಟ್ಟು ಹತಾಶರಾಗಿರುವ ಬಿಜೆಪಿ ರಾಜ್ಯ ಸರ್ಕಾರದ ಹಾಗೂ ಪ್ರಭಾವಿ ಸಚಿವ ಹಾಗೂ ಪ್ರಿಯಾಂಕ್ ಖರ್ಗೆ ಅವರ ವರ್ಚಸ್ಸು ಕುಗ್ಗಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಜಿಲ್ಲಾ
ಕಾಂಗ್ರೆಸ್‍ನ ಒಬಿಸಿ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಷ್ಟೇ ಅಲ್ಲ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ದುಃಸ್ವಪ್ನವಾಗಿ
ಕಾಡುತ್ತಿದ್ದಾರೆ. ಪಿಎಸ್‍ಐ ಹಗರಣ ಬಿಟ್ ಕಾಯಿನ್ ಹಗರಣ, 40% ಕಮೀಷನ್, ಕೋವಿಡ್ ಹಗರಣ ಸೇರಿದಂತೆ ವಿವಿಧ
ಹಗರಣಗಳನ್ನು ಬಯಲಿಗೆಳೆದು ಅವುಗಳನ್ನು ತನಿಖೆಯಾಗುವಂತೆ ಮಾಡಿ ಬಿಜೆಪಿಯ ಬಂಡವಾಳವನ್ನು ಬಯಲು ಮಾಡಿದ್ದರಿಂದ
ಆತಂಕಕ್ಕೊಳಗಾಗಿರುವ ನಾಯಕರು ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಚಿವರಾದ ಪ್ರಿಯಾಂಕ ಖರ್ಗೆ ಅವರ ತಲೆಗೆ ಕಟ್ಟುವ
ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ವಿರುದ್ಧ ನೀಡಿದ ಹೇಳಿಕೆಯಿಂದ ದೇಶಾದ್ಯಂತ ದಲಿತರು
ಆಕ್ರೋಶಗೊಂಡಿದ್ದಾರೆ. ರಾಜ್ಯದೆಲ್ಲೆಡೆ ದಲಿತರ ಪ್ರತಿಭಟನೆ ತೀವ್ರಗೊಂಡಿದೆ ವಿವಿಧೆಡೆ ಬಂದ್ ಆಚರಿಸಿ ತಮ್ಮ ಆಕ್ರೋಶ
ವ್ಯಕ್ತಪಡಿಸಿದ್ದಾರೆ.ಈ ಪ್ರತಿಭಟನೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಮುನ್ನೆಲೆಗೆ ತಂದು
ಅನಗತ್ಯವಾಗಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅವರಿಗೆ
ಯಶಸ್ಸು ಸಿಗುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಸಚಿನ್ ಆತ್ಮಹತ್ಯೆ ಕಾರಣ ತಿಳಿಯಲು ಸರ್ಕಾರ ಪ್ರಕರಣ ವನ್ನು ಸಿಐಡಿಗೆ ವಹಿಸಿದೆ. ಮುಖ್ಯಮಂತ್ರಿಗಳು ಈ ಪ್ರಕರಣ ದಲ್ಲಿ ಪ್ರಿಯಾಂಕ
ಖರ್ಗೆ ಅವರ ಪಾತ್ರ ಇಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಕೂಡ ಬಿಜೆಪಿಯವರು ಹಾದಿಬೀದಿಯಲ್ಲಿ ಬೊಬ್ಬೆ
ಹೊಡೆಯುತ್ತಾ ಸುಳ್ಳನ್ನು ಸತ್ಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ ಕೆ.ಎಸ್.ಈಶ್ವರಪ್ಪ ಪ್ರಕರಣದಲ್ಲಿ ಸ್ಪಷ್ಟ ದಾಖಲೆಗಳಿದ್ದವು. ಆದರೆ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ
ಪ್ರಿಯಾಂಕ ಖರ್ಗೆ ಅವರ ಮೇಲೆ ಆರೋಪಿಸುವಂತಹ ಯಾವುದೇ ಸ್ಪಷ್ಟ ದಾಖಲೆಗಳಿಲ್ಲ. ಆದರೂ ಬಿಜೆಪಿಯವರು ನಿರಂತರ
ಆರೋಪ, ಪ್ರತಿಭಟನೆ ಮಾಡುತ್ತಾ ಅವರ ವರ್ಚಸ್ಸು ಮತ್ತು ಪ್ರಭಾವವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿರುವ ಎನ್‍ಡಿ
ಕುಮಾರ್ ಈ ಮೂಲಕ ತಮ್ಮ ಹುಳುಕು ಗಳನ್ನು ಮುಚ್ಚಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿವೆ. ಹತ್ತಾರು ಬಣಗಳಾಗಿವೆ. ಪ್ರತಿಪಕ್ಷದ ನಾಯಕರಾಗಿರುವ ಆರ್.ಅಶೋಕ್, ಛಲವಾದಿ
ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಆಂತರಿಕ ಕಿತ್ತಾಟ
ತೀವ್ರಗೊಂಡಿದ್ದು, ಅದನ್ನು ಮರೆಮಾಚಲು ಪ್ರಿಯಾಂಕ ಖರ್ಗೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದನ್ನು
ಕಾಂಗ್ರೆಸ್‍ಪಕ್ಷ ಸಹಿಸುವುದಿಲ್ಲ ಎಂದು ಎನ್.ಡಿ.ಕುಮಾರ್ ಅವರು ಹೇಳಿದ್ದಾರೆ.