
ಹೊಸದಿಲ್ಲಿ: ಇಲ್ಲಿನ ಇಂದಿ ರಾಗಾಂಧಿ ಒಳಾಂಗಣ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಖೋ ಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತೀಯ ಪುರುಷರ ಮತ್ತು ಮಹಿಳಾ ತಂಡಗಳು ಅಜೇಯವಾಗಿ ಮುಂದುವರಿದಿವೆ. ಗುರುವಾರ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತದ ಪುರುಷರು ಭೂತಾನ್ ವಿರುದ್ಧದ 71-34 ಅಂತರದ ಗೆಲುವು ದಾಖಲಿಸಿದರು. ಭಾರತೀಯ ಮಹಿಳಾ ತಂಡ ಕೂಡ ಗುರುವಾರ ತನ್ನ ಕೊನೆಯ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 100-20 ಅಂತರದಿಂದ ಗೆದ್ದಿತು. ಇಲ್ಲಿಗೆ ಭಾರತೀಯ ಪುರುಷದ ಮತ್ತು ಮಹಿಳಾ ತಂಡಗಳೆರಡೂ ಈ ಪಂದ್ಯಾವಳಿಯಲ್ಲಿ ಅಜೇಯ ತಂಡವಾಗಿ ಮುನ್ನಡೆದಿವೆ. ಈಗಾಗಲೇ ಎರಡೂ ತಂಡಗಳೂ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿವೆ ಕೂಡ.
ಗ್ರೂಪ್ “ಎ’ಯಲ್ಲಿದ್ದ ಭಾರತಕ್ಕೆ ಭೂತಾನ್ ತಕ್ಕಮಟ್ಟಿನ ಪೈಪೋಟಿ ನೀಡಿತು. ಆದರೆ ಪಂದ್ಯ ಮುಂದುವರಿದಂತೆ ಭಾರತ ಮೇಲುಗೈ ಸಾಧಿಸಲಾರಂಭಿಸಿತು. ಅಂತಿಮವಾಗಿ ಭಾರತ ಪಂದ್ಯಗೆದ್ದು ಲೀಗ್ ಸ್ಪರ್ಧೆಗೆ ಕೊನೆ ಹಾಡಿತು.
ಭಾರತ ವನಿತೆಯರಿಗೆ 100-20 ಗೆಲುವು
ಮಹಿಳಾ ವಿಭಾಗದ ಗ್ರೂಪ್ “ಎ’ ಸ್ಪರ್ಧೆಯಲ್ಲಿ ಗುರುವಾರ ಭಾರತೀಯ ತಂಡ ಮಲೇಷ್ಯಾ ವಿರುದ್ಧ 100-20 ಅಂತರದ ಭರ್ಜರಿ ಜಯ ಗಳಿಸಿತು. ಇಲ್ಲಿ ಬರೋಬ್ಬರಿ 80 ಅಂಕಗಳ ಅಂತರದಿಂದ ಗೆದ್ದಿರುವ ಭಾರತೀಯ ವನಿತಾ ತಂಡ ಕೂಟದಲ್ಲಿ ಸತತ 3 ಪಂದ್ಯಗಳನ್ನು ಗೆದ್ದು ಅಜೇಯ ತಂಡವಾಗಿ ಮುಂದುವರಿದಿದೆ. ಆತಿಥೇಯ ಭಾರತ ಮಹಿಳಾ ತಂಡವಿನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.