ಚಿತ್ರದುರ್ಗ|ಸುಣ್ಣದಗುಮ್ಮಿ ಸ್ಥಳಾಂತರ : ಬದಲಿ ಸೂಕ್ತ ಜಾಗ ಕಲ್ಪಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 17 : ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ಸುಣ್ಣದಗುಮ್ಮಿ ಸ್ಥಳಾಂತರ ಮಾಡಲು ನಗರಸಭೆ ನಿರ್ಧಾರ ಮಾಡಿದ್ದು ಇದರ ಬದಲಿಗೆ ಸೂಕ್ತ ಜಾಗ ಕಲ್ಪಿಸಿಕೊಡುವಂತೆ ಆಗ್ರಹಿಸಿ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸುಣ್ಣವನ್ನು ತಯಾರು ಮಾಡುವವರು
ಪ್ರತಿಭಟನೆಯನ್ನು ನಡೆಸಿದರು.

ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ. 5ನೇ ಕ್ರಾಸ್ ಪ್ರದೇಶದಲ್ಲಿ ಸುಮಾರು 20-30 ಸುಣ್ಣ ಸುಡುವ ಗುಮ್ಮಿಗಳಿದ್ದು ಸರಿ ಪ್ರದೇಶವು ಒಂದು ಕಾಲದಲ್ಲಿ ಊರಿನ ಹೊರಭಾಗದಲ್ಲಿದ್ದು ನಮ್ಮ ತಾತ-ಮುತ್ತಾನವರ ಕಾಲದಿಂದಲೂ ಸಹ ಸುಣ್ಣ ಸುಡುತ್ತಾ ಜೀವನ ಸಾಗಿಸುತ್ತಾ ಬಂದಿರುತ್ತಾರೆ. ನಾವುಗಳು ಸಹ ಇದೇ ಕಸುಬನ್ನು ಮುಂದುವರೆಸುತ್ತಾ ಸುಮಾರು 150 ಕುಟುಂಬಕ್ಕೆ ಜೀವನಕ್ಕೆ ಇದು
ಆಧಾರವಾಗಿರುತ್ತದೆ. ನಾವುಗಳು ಅವಿದ್ಯಾವಂತರಾಗಿದ್ದು ಈಗಾಗಲೇ ಅರ್ಧ ಜೀವನವನ್ನು ಮತ್ತು ವಯಸ್ಸನ್ನು ಕಳೆದಿರುತ್ತೇವೆ. ನಮಗೆ ಬೇರೆ ಕೆಲಸವನ್ನು ಮಾಡಲು ಸಹ ಕಷ್ಟಸಾಧ್ಯವಾಗಿರುತ್ತದೆ. ಈಗ ಊರು ಬೆಳೆದಂತೆ ಊರಿನ ಮಧ್ಯಭಾಗದಲ್ಲಿ ಸುಣ್ಣದ ಗುಮ್ಮಿಗಳು ಇರುತ್ತವೆ. ಈ ಮೊದಲೇ ನಾವುಗಳು ಸಾಕಷ್ಟು ಭಾರಿ ಜಿಲ್ಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಪರ್ಯಾಯ ಜಾಗವನ್ನು ಕಲ್ಪಸಿಕೊಡಲು ಅರ್ಜಿಯನ್ನು ಕೊಟ್ಟಿದ್ದರೂ ಸಹ ಯಾವುದೇ ಫಲಕಾರಿಯಾಗಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಶಾಸಕರು ಸಹ ನಮ್ಮ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸಮಸ್ಯೆಯನ್ನು ಆಲಿಸಿದ್ದಾರೆ. ಆದರೂ ಸಹಾ ನಗರಸಭೆಯ
ಪೌರಾಯುಕ್ತರು ಯಾವುದೇ ನಮಗೆ ನೋಟೀಸ್ ನೀಡದೆ ಏಕಾಏಕಿ ಜೆ.ಸಿ.ಬಿ. ಸಿಬ್ಬಂದಿ. ಮತ್ತು ಪೊಲೀಸ್ ಇಲಾಖೆಯ
ನೆರವಿನೊಂದಿಗೆ ಸುಣ್ಣದ ಗುಮ್ಮಿಗಳನ್ನು ಕೆಡವಲು ಮುಂದಾಗಿರುವುದು ಖಂಡನೀಯ ನಾವುಗಳು ಸುಣ್ಣದಗುಮ್ಮಿಯ ಸ್ಥಳಾಂತರ
ಮಾಡಲು ಸೂಕ್ತವಾದ ಜಾಗ ಮತ್ತು ಸೌಲಭ್ಯವನ್ನು ನೀಡಿದಲ್ಲಿ ಸ್ಥಳಾಂತರ ಮಾಡಲು ಯಾವುದೇ ತಂಟೆ ತಕರಾರು ಇರುವುದಿಲ್ಲ.
ಹಿಂದೆ ಹೊಳಲ್ಕೆರೆ ರಸ್ತೆಯಲ್ಲಿರುವ ಮಂಡಕ್ಕಿ ಭಟ್ಟಿಗಳು ಸಹ ಊರಿನ ಮಧ್ಯಭಾಗದಲ್ಲಿದ್ದು ಅವುಗಳನ್ನು ಊರಿನ ಹೊರಭಾಗದ ಹಳೆ
ಬೆಂಗಳೂರು ರಸ್ತೆಗೆ ಸೂಕ್ತ ಮೂಲಭೂತ ಸೌಲಭ್ಯಗಳೊಂದಿಗೆ ಸ್ಥಳಾಂತರಿಸಲಾಗಿರುತ್ತದೆ. ಇದೇ ರೀತಿ ನಮ್ಮ ಸುಣ್ಣದ
ಗುಮ್ಮಿಗಳಿಗೂ ಸಹ ಮೂಲಭೂತ ಸೌಲಭ್ಯಗಳೊಂದಿಗೆ, ಸೂಕ್ತ ಜಾಗವನ್ನು ನೀಡಬೇಕಾಗಿ ಮನವಿ ಮಾಡಿದ್ದು, ಇಲ್ಲವಾದಲ್ಲಿ ನಾವು
ಬೀದಿಗೆ ಇಳಿದು ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪರ್ಯಾಯ ಜಾಗಕ್ಕೆ ಆಗ್ರಹಿಸಿ ಸುಣ್ಣವನ್ನು ತಯಾರು ಮಾಡುವವರು ತಹಶೀಲ್ದಾರ್ ಹಾಗೂ ನಗರಸಭೆಯ ಆಯುಕ್ತರಿಗೆ ಮನವಿ
ಸಲ್ಲಿಸಿದರು. ಈ ಪ್ರತಿಭಟನೆಯನ್ನು ನಗರಸಭೆಯ ಮಾಜಿ ಸದಸ್ಯರಾದ ಮಹೇಶ್ ನೇತೃತ್ವದಲ್ಲಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ
ಮುಖಂಡರಾದ ರಾಜಣ್ಣ, ಸಿದ್ದರಾಜು, ಗೋಪಿ, ನಾಗರಾಜು, ಶಿವು, ಬಸವರಾಜು, ನಿಂಗರಾಜು, ತಿಪ್ಪೇರುದ್ರಪ್ಪ, ರಾಘವೇಂದ್ರ,

ಜಯ್ಯಣ್ಣ, ರೇಖಾ, ಕರಿಬಸಮ್ಮ, ಸಿಂಧೂ, ರಾಧಮ್ಮ, ಜ್ಯೋತಿ, ಶೈಲಾ, ಕಮಲಮ್ಮ, ಕಾವೇರಿ, ಸುಮಕ್ಕ, ಭೂಮಿಕ ಸೇರಿದಂತೆ
ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *