ಮಂಗಳೂರಿನ ಬ್ಯಾಂಕ್​​ನಲ್ಲಿ ಗನ್​ ತೋರಿಸಿ ₹12 ಕೋಟಿ ಲೂಟಿ: ಮತ್ತೊಂದು ದರೋಡೆಯಿಂದ ಬೆಚ್ಚಿ ಬಿದ್ದ ರಾಜ್ಯ.

BANK LOOTED IN ULLAL : ಮುಸುಕುಧಾರಿಗಳ ತಂಡವೊಂದು ಪಿಸ್ತೂಲ್ ತೋರಿಸಿ ಉಳ್ಳಾಲದ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆ ನಡೆಸಿ ಪರಾರಿಯಾಗಿದೆ.

ಮಂಗಳೂರು: ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದ ಸಿಬ್ಬಂದಿಗೆ ಗುಂಡು ಹಾರಿಸಿ ಹಣ ದೋಚಿರುವ ಪ್ರಕರಣದ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದೆ.

ನಗರದ ಹೊರವಲಯದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಇಂದು ಹಾಡಹಗಲೇ ಮುಸುಕುಧಾರಿಗಳು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರ ನಡುವೆ ಶಸ್ತ್ರಸಜ್ಜಿತ ತಂಡದಿಂದ ದರೋಡೆ ನಡೆದಿದೆ.

ಸುಮಾರು 25 ರಿಂದ 35 ವರ್ಷ ವಯಸ್ಸಿನ ಐದಾರು ಜನರ ತಂಡ ಮುಖಕ್ಕೆ ಮಾಸ್ಕ್ ಧರಿಸಿ, ಪಿಸ್ತೂಲ್, ತಲ್ವಾರ್ ಮತ್ತು ಚಾಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬ್ಯಾಂಕ್‌ಗೆ ಪ್ರವೇಶಿಸಿದೆ. ಈ ವೇಳೆ ಐದು ಮಂದಿ ಉದ್ಯೋಗಿಗಳು ಬ್ಯಾಂಕಿನಲ್ಲಿದ್ದರು. ಆ ಬಳಿಕ ಬ್ಯಾಂಕ್ ಸಿಬ್ಬಂದಿಗಳನ್ನು ಬೆದರಿಸಿ ದರೋಡೆ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಪೊಲೀಸ್​ ಕಮಿಷನರ್​ ಹೇಳಿದ್ದೇನು?: ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು‌ ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, “ಹಿಂದಿಯಲ್ಲಿ ಮಾತನಾಡುತ್ತಿದ್ದ ಆರೋಪಿಗಳು, ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಕಪಾಟನ್ನು ತೆರೆಸಿ, ದರೋಡೆ ಮಾಡಿದ್ದಾರೆ. ಕದ್ದ ವಸ್ತುಗಳ ಮೌಲ್ಯ ಸುಮಾರು 10 ರಿಂದ 12 ಕೋಟಿಗಳಷ್ಟಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಆದರೂ ವಿವರವಾದ ಮೌಲ್ಯಮಾಪನಗಳು ನಡೆಯುತ್ತಿವೆ” ಎಂದು ತಿಳಿಸಿದ್ದಾರೆ.

“ಅಪರಾಧಿಗಳು ಕಪ್ಪು ಫಿಯೆಟ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಲಭ್ಯವಿರುವ ಸುಳಿವುಗಳು ಮತ್ತು ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ ಶಂಕಿತರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ” ಎಂದು‌ ಮಾಹಿತಿ ನೀಡಿದ್ದಾರೆ.

ಹಿಂದಿ, ಕನ್ನಡ ಮಾತನಾಡುತ್ತಿದ್ದ ದರೋಡೆಕೋರರು: ಬ್ಯಾಂಕ್ ಸಿಬ್ಬಂದಿ ಬೊಬ್ಬೆ ಕೇಳಿ ಕೆಳಭಾಗದಲ್ಲಿದ್ದ ವಿದ್ಯಾರ್ಥಿಗಳು ಮೊದಲ ಮಹಡಿಯಲ್ಲಿರುವ ಬ್ಯಾಂಕಿನತ್ತ ದೌಡಾಯಿಸಿದ್ದರು. ದರೋಡೆಕೋರರು ಈ ವೇಳೆಯೂ ವಿದ್ಯಾರ್ಥಿಗಳಿಗೆ ವಾಪಸ್​ ಹೋಗುವಂತೆ ಬೆದರಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಆಗಂತುಕರು ಕನ್ನಡದಲ್ಲಿ ಮಾತನಾಡಿದ್ದರೆ, ಬ್ಯಾಂಕ್ ಸಿಬ್ಬಂದಿ ಜೊತೆ ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದಾರೆ.

ಬ್ಯಾಂಕಿನ ಸಿಸಿಟಿವಿ ದುರಸ್ತಿಗೆಂದು ತಂತ್ರಜ್ಞರೊಬ್ಬ ಬೆರಳಿನಲ್ಲಿದ್ದ ಉಂಗುರವನ್ನು ದೋಚಿರುವ ದರೋಡೆಕೋರರು, ಗೋಣಿ ಚೀಲದಲ್ಲಿ ಚಿನ್ನ ಹಾಗೂ ನಗದನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ.

ವಿಧಾನಸಭಾಧ್ಯಕ್ಷರ ಭೇಟಿ: ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರು ಕಾರ್ಯಕ್ರಮದಿಂದ ಅರ್ಧದಲ್ಲಿಯೆ ನಿರ್ಗಮಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಅಲ್ಲದೇ ಎಸಿಪಿ ಅವರಲ್ಲಿ ತಕ್ಷಣವೇ ದರೋಡೆಕೋರರನ್ನು ಹಿಡಿಯುವಂತೆ ಸೂಚಿಸಿದರು. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಉಳ್ಳಾಲ ಪೊಲೀಸರ ತಂಡ ಭೇಟಿ ಪರಿಶೀಲನೆ ನಡೆಸುತ್ತಿದೆ.

ನಿನ್ನೆಯಷ್ಟೇ (ಜ. 16) ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸುವಾಗ ಸಿಬ್ಬಂದಿಗೆ ಗುಂಡು ಹಾರಿಸಿ ದರೋಡೆ ಮಾಡಿದ್ದ ಪ್ರಕರಣ ನಡೆದಿತ್ತು. ಇದರ ಬೆನ್ನಲ್ಲೆ ಇದೀಗ ಮಂಗಳೂರಿನ ಉಳ್ಳಾಲದಲ್ಲೂ ಬ್ಯಾಂಕ್ ದರೋಡೆ ಪ್ರಕರಣ ನಡೆದಿದೆ.

Source : https://www.etvbharat.com/kn/!state/kotekar-bank-looted-in-ullal-karnataka-news-kas25011703313

Leave a Reply

Your email address will not be published. Required fields are marked *