ಬೆಂಗಳೂರಿನಲ್ಲಿ ಹನ್ನೆರೆಡು ದೂತಾವಾಸ ಕಚೇರಿಗಳಿವೆ, ಇನ್ನಷ್ಟು ದೇಶಗಳು ಇಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಬೇಕೆಂಬುದು ನಮ್ಮ ಬಯಕೆ. ಅಮೆರಿಕಾ ಮತ್ತು ಭಾರತದ ಬಾಂಧವ್ಯ ವೃದ್ಧಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದರು.
![](https://samagrasuddi.co.in/wp-content/uploads/2025/01/image-123.png)
ಬೆಂಗಳೂರು (Bengaluru) ನಗರದ JSW ಮ್ಯಾರಿಯೇಟ್ ಹೋಟೆಲ್ನಲ್ಲಿ ಅಮೆರಿಕಾ ದೂತವಾಸ ಕಚೇರಿ (US Consulate Office) ಆರಂಭವಾಗಿದೆ. ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar), ಯುಎಸ್ ಕಾನ್ಸಲೇಟ್ ಕ್ರಿಸ್ ಏಜ್ ಅವರು ನೂತನ ಕಚೇರಿಯನ್ನು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಸಚಿವ ಜೈಶಂಕರ್, ಯುಎಸ್ ದೂತವಾಸ ಅಧಿಕಾರಿಗಳು, ಸಚಿವ ಎಂಬಿ ಪಾಟೀಲ್, ಸಂಸದ ತೇಜಸ್ವಿಸೂರ್ಯ, ಪಿಸಿ ಮೋಹನ್, ಡಾ ಮಂಜುನಾಥ್ ಹಾಜರಿದ್ದರು.
ದೂತವಾಸ ಕಚೇರಿ ಉದ್ಘಾಟಿಸಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, ಈಗಾಗಲೇ ಹನ್ನೆರೆಡು ದೂತಾವಾಸ ಕಚೇರಿ ಬೆಂಗಳೂರಲ್ಲಿವೆ. ಇನ್ನಷ್ಟು ದೇಶಗಳು ಇಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಬೇಕೆಂಬುದು ನಮ್ಮ ಬಯಕೆ. ಅಮೆರಿಕಾ ಮತ್ತು ಭಾರತದ ಬಾಂಧವ್ಯ ವೃದ್ಧಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿಗೆ ಸಾಕಷ್ಟು ಸಾಮರ್ಥ್ಯ ಇದ್ದು ಅದರ ಬಳಕೆಯಾಗಬೇಕು. ಬೆಂಗಳೂರಲ್ಲೇ ಒಂದು ವರ್ಷದಲ್ಲಿ 8.8 ಲಕ್ಷ ಪಾಸ್ ಪೋರ್ಟ್ ವಿತರಣೆ ಆಗಿದೆ ಅಂದರೆ ಹತ್ತು ವರ್ಷ ಅವಧಿಯಲ್ಲಿ ಎಷ್ಟು ಪಾಸ್ ಪೋರ್ಟ್ ವಿತರಣೆ ಆಗಿರಬಹುದು, ಅದರ ಮಹತ್ವ ಅರಿಯಬೇಕು ಎಂದು ಹೇಳಿದರು.
‘ನನಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ’
2023 ರಲ್ಲಿ ಮೋದಿಯವರು ಬೆಂಗಳೂರು ಕಾನ್ಸುಲೇಟ್ ಆರಂಭದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.ನಾನು ಬೆಂಗಳೂರಿಗೆ ಬಂದಾಗಲೆಲ್ಲ ಅಮೆರಿಕಾ ರಾಯಭಾರ ಕಚೇರಿ ಯಾವಾಗ ಆರಂಭ ಎಂಬ ಪ್ರಶ್ನೆ ಬರುತ್ತಿತ್ತು. ನನಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ. ನಾನು ಬೆಂಗಳೂರಿನಲ್ಲಿ ಕೆಲಕಾಲ ಶಿಕ್ಷಣ ಪಡೆದಿದ್ದೆ. ನನ್ನ ವೃತ್ತಿ ಆರಂಭಿಸುವ ವೇಳೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದೆ. ಹೀಗಾಗಿ ಒಂದು ವಿಶೇಷ ಆಸಕ್ತಿ ಇತ್ತು ಎಂದು ಜೈಶಂಕರ್ ಹೇಳಿದರು.
‘ಎಸ್.ಎಂ.ಕೃಷ್ಣ ಕಾಲದಿಂದ ಪ್ರತ್ನ’
ಅಮೆರಿಕಾದ ರಾಯಭಾರ ಕಚೇರಿ ಆಗಬೇಕೆಂದು ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಲೇ ಪ್ರಯತ್ನ ನಡೆಸಿದ್ದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಭೇಟಿ ಮಾಡಲಾಗಿತ್ತು. ಅಲ್ಲಿಂದ ಪ್ರಯತ್ನ ನಡೆದರೂ ಆಗಿರಲಿಲ್ಲ. ಇದೀಗ ಅನುಷ್ಠಾನವಾಗುತ್ತಿರುವುದು ಖುಷಿಯ ವಿಚಾರ. ಬೆಂಗಳೂರು ಜಾಗತಿಕವಾಗಿ ಬೆಳೆದಿದೆ, ಯೋಜನಾ ಬದ್ಧವಾದ ನಗರ ಅಲ್ಲದ ಕಾರಣ ಒಂದಷ್ಟು ಸಮಸ್ಯೆ ಇರಬಹುದು. ಅದನ್ನು ಪರಿಹರಿಸಲು ಪ್ರಯತ್ನ ನಡೆಸಲಾಗಿದೆ ಎಂದು ಡಿಕೆಶಿ ಹೇಳಿದರು.
ಬೆಂಗಳೂರಿನಲ್ಲೇ ಸಿಗಲಿದೆ ವೀಸಾ
ಇದೇ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಇವತ್ತು ಬೆಂಗಳೂರಿಗರಿಗೆ ಮತ್ತು ಕನ್ನಡಿಗರಿಗೆ ಸಂತೋಷದ ಸಂಗತಿ. ಬೆಂಗಳೂರಿಗೆ ಯುಎಸ್ ಕಾನ್ಸುಲೆಟ್ ಬರಬೇಕು ಅಂತ ಇತ್ತು. ಮೋದಿ ಅವರ ಪರಿಶ್ರಮದಿಂದ ಯುಎಸ್ ಕಾನ್ಸುಲೆಟ್ ಬಂದಿದೆ. ನಾನು ಈ ವಿಚಾರಕ್ಕೆ ಯುಎಸ್ ಅಧಿಕಾರಿಗಳನ್ನ ಭೇಟಿ ಮಾಡಿ ಮಾತಾಡಿದ್ದೆ. ಬೆಂಗಳೂರು ಆರ್ಥಿಕ ರಾಜಧಾನಿ ಯಾಗಿ ಹೊರ ಹೊಮ್ಮುತ್ತಿದೆ. ಸ್ಪೆಸ್ ಟೆಕ್ನಾಲಜಿಯಿಂದ ಎಲ್ಲದರಲ್ಲೂ ಎಮರ್ಜಿಂಗ್ ಆಗುತ್ತಿದೆ. ಲಕ್ಷಾಂತರ ಜನ ಅಮೆರಿಕ ಪ್ರವಾಸ ಮಾಡುತ್ತಾರೆ, ಓದೋಕೆ ಹೊಗುತ್ತಾರೆ. ಅವರೆಲ್ಲರೂ ಕೂಡ ಬೇರೆ ನಗರಕ್ಕೆ ವೀಸಾಗಾಗಿ ಹೋಗಬೇಕಾಗಿಲ್ಲ. ಆದಷ್ಟು ಬೇಗ ವೀಸಾ ಸೌಲಭ್ಯ ಪ್ರಾರಂಭ ಮಾಡೋದಾಗಿ ಹೇಳಿದ್ದಾರೆ. ಫುಲ್ ಫ್ಲೆಡ್ಜ್ ಆಗಿ ಕೆಲಸ ಮಾಡುತ್ತದೆ ಎಂದು ನೂರಕ್ಕೆ ನೂರು ವಿಶ್ವಾಸ ಇದೆ ಎಂದು ಅವರು ಹೇಳಿದರು.