ಟೆಸ್ಟ್ ಕ್ರಿಕೆಟ್ನಲ್ಲಿ ಸತತ ವೈಫಲ್ಯ ಅನುಭವಿಸಿದ ನಂತರ ಬಿಸಿಸಿಐ ಎಚ್ಚರಿಕೆ ಮೇರೆಗೆ ರಣಜಿ ಟ್ರೋಫಿ ಆಡುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಮೊದಲ ದಿನವೇ ನಿರಾಶೆ ಮೂಡಿಸಿದ್ದಾರೆ. ರೋಹಿತ್, ಪಂತ್, ಗಿಲ್ ಹಾಗೂ ಜೈಸ್ವಾಲ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

ರಣಜಿ ಟ್ರೋಫಿ ಎಲೈಟ್ ಪಂದ್ಯಗಳು ಆರಂಭವಾಗಿವೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಫಾರ್ಮ್ ಕಳೆದುಕೊಳ್ಳುತ್ತಿರುವ ಭಾರತದ ಸ್ಟಾರ್ ಕ್ರಿಕೆಟಿಗರು ರಣಜಿ ಕಣಕ್ಕೆ ಇಳಿದಿದ್ದಾರೆ. ಈ ರಣಜಿ ರಿಂಗ್ ನಲ್ಲಿ ನಾಯಕ ರೋಹಿತ್ ಶರ್ಮಾ ಕೂಡ ಕಣಕ್ಕಿಳಿದಿದ್ದರು. ಈಗಾಗಲೇ ಕಳಪೆ ಫಾರ್ಮ್ನಿಂದ ಕಂಗೆಟ್ಟಿರುವ ರೋಹಿತ್ ಮತ್ತೊಮ್ಮೆ ನಿರಾಸೆ ಮೂಡಿಸಿದರು.
ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಬ್ಯಾಟ್ ಮಾಡಲು ಬಂದ ಹಿಟ್ ಮ್ಯಾನ್ 19 ಎಸೆತಗಳನ್ನು ಎದುರಿಸಿ ಕೇವಲ ಮೂರು ರನ್ ಗಳಿಸಿ ಔಟಾದರು. ವೇಗಿ ಉಮರ್ ನಜೀರ್ ಬೌಲಿಂಗ್ ನಲ್ಲಿ ಇಂಡಿಯನ್ ಕ್ಯಾಪ್ಟನ್ ಪೆವಿಲಿಯನ್ ಸೇರಿದರು.
ರೋಹಿತ್ ಜೊತೆ ಕಣಕ್ಕಿಳಿದಿದ್ದ ಜೈಸ್ವಾಲ್ ಕೂಡ 5 ರನ್ಗಳಿಗೆ ಔಟ್ ಆದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಜೈಸ್ವಾಲ್ ರಣಜಿಗೆ ಮರಳಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು.
ಕರ್ನಾಟಕ ವಿರುದ್ಧ ಕಣಕ್ಕಿಳಿದಿರುವ ಪಂಜಾಬ್ ತಂಡದಲ್ಲಿ ಆಡಿದ್ದ ಮತ್ತೊಬ್ಬ ಸ್ಟಾರ್ ಬ್ಯಾಟರ್, ಟೀಮ್ ಇಂಡಿಯಾ ಉಪನಾಯಕ ಶುಭ್ಮನ್ ಗಿಲ್ ಕೂಡ ನಿರಾಶೆ ಮೂಡಿಸಿದ್ದಾರೆ. ಪ್ರಭಾಸಿಮ್ರಾನ್ ಸಿಂಗ್ ಜೊತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಗಿಲ್ ಕೇವಲ 4 ರನ್ಗಳಿಸಿ ಔಟ್ ಆದರು.
ಮತ್ತೊಂದೆಡೆ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಿಷಭ್ ಪಂತ್ ಕಣಕ್ಕಿಳಿದಿದ್ದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಪಂತ್ ದೆಹಲಿ ತಂಡವನ್ನೂ ಪ್ರತಿನಿಧಿಸುತ್ತಿದ್ದಾರೆ. ಆದರೆ ಕುತ್ತಿಗೆ ನೋವಿನಿಂದ ಅವರು ಈ ಪಂದ್ಯದಿಂದ ಹೊರಗುಳಿದಿದ್ದರು. ಪಂತ್ ಕೇವಲ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾ ಸ್ಟಾರ್ ಶ್ರೇಯಸ್ ಅಯ್ಯರ್ ಕೂಡ 11ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ ಪರ ಭಾರತದ ಪರ ಆಡಿರುವ 7 ಆಟಗಾರರು ಪ್ರತಿನಿಧಿಸಿದ್ದಾರೆ. ಇದರಲ್ಲಿ ಜೈಸ್ವಾಲ್ (4), ರೋಹಿತ್ (3), ಶ್ರೇಯಸ್ ಅಯ್ಯರ್ (11), ಅಜಿಂಕ್ಯಾ ರಹಾನೆ (12), ಶಿವಂ ದುಬೆ, ಶಾರ್ದೂಲ್ ಠಾಕೂರ್ (56), ತನುಷ್ ಕೊಟ್ಯಾನ್ (26) ಈ ಪಂದ್ಯದಲ್ಲಿ ಆಡುತ್ತಿದ್ದು, ಠಾಕೂರ್ ಮಾತ್ರ 56 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಸಮಾಧಾನಕರ ಸಂಗತಿ ಎಂದರೆ ರಣಜಿ ಆಡುತ್ತಿರುವ ಆಟಗಾರರಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಮಿಂಚಿನ ದಾಳಿ ನಡೆಸಿದ್ದಾರೆ. ದೆಹಲಿ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದು ಮಿಂಚಿದರು. ಬೌಲಿಂಗ್ನಲ್ಲಿ ಮಾತ್ರವಲ್ಲ, ಬ್ಯಾಟಿಂಗ್ನಲ್ಲೂ 36 ಎಸೆತಗಳಲ್ಲಿ 38 ರನ್ಗಳಿಸಿದರು. 2 ಬೌಂಡರಿ, 3 ಸಿಕ್ಸರ್ ಸಿಡಿಸಿದರು.
ಭಾರತ ತಂಡವನ್ನು ಪ್ರತಿನಿಧಿಸಿದ್ದ ಪ್ರಸಿಧ್ ಕೃಷ್ಣ ಪಂಜಾಬ್ ವಿರುದ್ಧ ಕೇವಲ 11 ರನ್ ನೀಡಿ 2 ವಿಕೆಟ್ ಪಡೆದರು. ಪಡಿಕ್ಕಲ್ 27 ರನ್ಗಳಿಸಿದರು. ಈ ಸುತ್ತಿನಲ್ಲಿ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ಕೆಎಲ್ ರಾಹುಲ್ ಕಣಕ್ಕಿಳಿದಿಲ್ಲ. ಇನ್ನು ಕೆಲವರು ಟಿ20 ತಂಡದಲ್ಲಿ ಆಡುತ್ತಿದ್ದಾರೆ. ಸಿರಾಜ್, ಸರ್ಫರಾಜ್ ಖಾನ್ಗೆ ಅವಕಾಶ ಸಿಕ್ಕಿಲ್ಲ.