Bengaluru Karaga: ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿ.

ಬೆಂಗಳೂರು ಕರಗ 2025: ಬೆಂಗಳೂರಿನ ವಿಶ್ವವಿಖ್ಯಾತ ಕರಗ ಮಹೋತ್ಸವ ಏಪ್ರಿಲ್ 4ರಿಂದ 14ರವರೆಗೆ ನಡೆಯಲಿದೆ. ಚೈತ್ರ ಪೌರ್ಣಮಿಯಂದು (ಏಪ್ರಿಲ್ 12) ಮುಖ್ಯ ಕರಗೋತ್ಸವ ನಡೆಯುತ್ತದೆ. ಪೂಜಾರಿ ಎ. ಜ್ಞಾನೇಂದ್ರ ಈ ವರ್ಷವೂ ಕರಗವನ್ನು ಹೊರುತ್ತಿದ್ದಾರೆ. ಕರಗದ ಹಿನ್ನೆಲೆ, ಮಹತ್ವ ಹಾಗೂ ಇತರ ವಿವರಗಳು ಇಲ್ಲಿವೆ.

ಬೆಂಗಳೂರು, ಜನವರಿ 28: ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ವರ್ಷ ಏಪ್ರಿಲ್ 4ರಿಂದ ಏಪ್ರಿಲ್ 14 ರವರೆಗೆ ಬೆಂಗಳೂರು ಕರಗ ಮಹೋತ್ಸವ ನಡೆಯಲಿದೆ. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಮಹೋತ್ಸವ ನಡೆಯಲಿದ್ದು, ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ.

ಬೆಂಗಳೂರು ಕರಗ ಸಂಬಂಧ ಸೋಮವಾರ ರಾತ್ರಿ ಸಭೆ ನಡೆಯಿತು. ಈ ಸಭೆಯಲ್ಲಿ, ಕರಗ ಹೊರುವ ಪೂಜಾರಿಯಾಗಿ ಎ.ಜ್ಞಾನೇಂದ್ರ ಒಮ್ಮತದಿಂದ ಆಯ್ಕೆಯಾದರು. ಇವರು 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿದ್ದಾರೆ. ಈ ವರ್ಷ ಕೊನೆಯ ಬಾರಿ ಬೆಂಗಳೂರು ಕರಗ ಹೊರಲಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಕರಗದ ಹಿನ್ನೆಲೆ

ಬೆಂಗಳೂರು ಕರಗದ ಹಿನ್ನೆಲೆ ಬಗ್ಗೆ ಕೆಲವು ಕಥೆಗಳಿವೆ. ಆದರೆ, ಈ ಪೈಕಿ ದ್ರೌಪದಿಯ ಕಥೆ ಹಾಗೂ ಹಿನ್ನೆಲೆ ಹೆಚ್ಚು ಪ್ರಚಲಿತದಲ್ಲಿದೆ. ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ಸ್ವರ್ಗಾರೋಹಣ ಮಾಡುವಾಗ ದ್ರೌಪದಿ ಮೂರ್ಛೆ ತಪ್ಪಿ ಬಿದ್ದಿದ್ದಳಂತೆ. ಇದನ್ನು ತಿಳಿಯದೆ ಪಾಂಡವರು ಮುಂದೆ ಸಾಗಿದ್ದರು. ದ್ರೌಪದಿ ಎಚ್ಚರವಾಗಿ ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ. ಆಗ ತಿಮಿರಾಸುರನನ್ನು ನೋಡಿದ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾಳೆ ಎಂಬ ಪ್ರತೀತಿ ಇದೆ.

ರಾಕ್ಷಸನನ್ನು ಸದೆಬಡಿಯಲು ದ್ರೌಪದಿ ತಲೆಯಿಂದ ಯಜಮಾನ, ಹಣೆಯಿಂದ ಗಣಾಚಾರಿ, ಕಿವಿಗಳಿಂದ ಗೌಡರು, ಬಾಯಿಯಿಂದ ಗಂಟೆ ಪೂಜಾರಿ, ಹೆಗಲಿನಿಂದ ವೀರಕುಮಾರರ ಸೃಷ್ಟಿಸುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ತಿಮಿರಾಸುರನನ್ನು ಮಣಿಸುತ್ತಾರೆ. ಇದಾ ಬಳಿಕ ಜನ್ಮ ನೀಡಿದ ತಾಯಿ ದ್ರೌಪದಿ ತಮ್ಮನ್ನು ಬಿಟ್ಟು ಕೈಸಾಲಕ್ಕೆ ತೆರಳುವುದನ್ನು ನೋಡಿ ಮಕ್ಕಳಿಗೆ ದುಃಖವಾಗುತ್ತದೆ. ಕೈಲಾಸಕ್ಕೆ ತೆರಳದಂತೆ ದ್ರೌಪದಿ ಬಳಿ ಬೇಡಿಕೊಳ್ಳುವಂತೆ ಮಕ್ಕಳಿಗೆ ಕೃಷ್ಣ ಸಲಹೆ ನೀಡುತ್ತಾನೆ. ಆಗ ವೀರಕುಮಾರರು ಕತ್ತಿಯಿಂದ ಎದೆಗೆ ತಿವಿದುಕೊಳ್ಳುತ್ತಾ ಬೇಡಿಕೊಳ್ಳುತ್ತಾರೆ. ಇದರಿಂದ ಮರುಕಗೊಂಡ ದ್ರೌಪದಿ ಪ್ರತಿ ವರ್ಷವೂ ಮೂರು ದಿನ ಭೂಮಿಗೆ ಬರುವುದಾಗಿ ಮಾತು ನೀಡಿದ್ದಳು. ಅದರಂತೆ, ಆಕೆ ಭೂಮಿಗೆ ಬರುವ ಆ ಮೂರು ದಿನಗಳನ್ನೇ ಕರಗ ಮಹೋತ್ಸವವನ್ನಾಗಿ ಆಚರಿಸಲಾಗುತ್ತದೆ ಎಂಬ ಪ್ರತೀತಿ ಇದೆ.

ಭಾವೈಕ್ಯತೆ ದೃಷ್ಟಿಯಿಂದಲೂ ಬೆಂಗಳೂರು ಕರಗ ಮಹೋತ್ಸವ ತನ್ನದೇ ಆದ ವಿಶೇಷ ಹೊಂದಿದೆ. ಕರಗ ಮೆರವಣಿಗೆ ದರ್ಗಾಕ್ಕೆ ತೆರಳುವುದು, ಮುಸ್ಲಿಂ ಸಂತನ ಸಮಾಧಿಗೆ ಭೇಟಿ ನೀಡುವುದು ಇದಕ್ಕೆ ಉದಾಹರಣೆ.

ಕರ್ನಾಟಕದ ವಿವಿಧೆಡೆ ಕರಗ ಮಹೋತ್ಸವ ಆಚರಿಸಲಾಗುತ್ತದೆ. ಆದರೆ ಬೆಂಗಳೂರು ಕರಗ ಉತ್ಸವ ಉಳಿದೆಲ್ಲವುಗಳಿಂದ ಭರ್ಜರಿಯಾಗಿ ವಿಜ್ರಂಭಣೆಯಿಂದ ನೆರವೇರುತ್ತದೆ.

Source : https://tv9kannada.com/karnataka/bengaluru/bengaluru-karaga-2025-dates-schedule-and-main-events-details-here-in-kannada-gsp-970163.html

Leave a Reply

Your email address will not be published. Required fields are marked *