ಖಾಸಗಿ ಬಸ್​ ಕಳ್ಳತನ: ಟೋಲ್​ಗೆ ಹಣ ಕಟ್ಟಲಾಗದೇ ಕದ್ದ ಬಸ್​ ಬಿಟ್ಟು ಪರಾರಿಯಾದ ಖದೀಮ!

BUS THEFT CASE : ಖಾಸಗಿ ಬಸ್​ ಕದ್ದ ಖದೀಮನೊಬ್ಬ ಟೋಲ್​ಗೆ ಹಣ ಕಟ್ಟಲಾಗದೇ ಬಸ್ ಬಿಟ್ಟು ಪರಾರಿಯಾಗಿದ್ದಾನೆ.

ಚಾಮರಾಜನಗರ: ಖಾಸಗಿ ಬಸ್ ಕದ್ದ ಖದೀಮನೋರ್ವ ಟೋಲ್​ಗೆ ಹಣ ಕಟ್ಟಲು ಪರದಾಡಿ ಕೊನೆಗೆ ಬಸ್ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.

ಚಾಮರಾಜನಗರದ ಎಲ್​ಐಸಿ ಕಚೇರಿ ಬಳಿ ನಿಲ್ಲಿಸಿದ್ದ ವಜ್ರ ಎಂಬ ಖಾಸಗಿ ಬಸ್ ಅನ್ನು ಸೋಮವಾರ ತಡರಾತ್ರಿ 1ರಲ್ಲಿ ಕಳ್ಳನೊಬ್ಬ ಕದ್ದೊಯ್ದಿದ್ದ. ಬಳಿಕ, ಮಧ್ಯಾಹ್ನದ ಸುಮಾರಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಟೋಲ್ ಬಳಿ ಬಸ್ ಸಿಕ್ಕಿದ್ದು, ಟೋಲ್ ಕಟ್ಟಲು ಹಣ ಇಲ್ಲದೇ ಬಸ್ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ಬಸ್​ ಮಾಲೀಕ ಸೋಮನಾಯಕ ಮಾಹಿತಿ ನೀಡಿದ್ದಾರೆ.

”ತಡರಾತ್ರಿ ನಮ್ಮ ಬಸ್ ಕಳ್ಳತನವಾಗಿತ್ತು. ನನಗೆ ವಿಚಾರ ತಿಳಿದ ಕೂಡಲೇ ಬಸ್​ನ ಫೋಟೋವನ್ನು ಬಸ್ ಮಾಲೀಕರ ಸಂಘದ ವಾಟ್ಸ್​​ಆ್ಯಪ್​​ ಗ್ರೂಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಬೆಂಗಳೂರಿನ ಟೋಲ್ ಬಳಿ ಬಸ್ ನಿಂತಿದ್ದನ್ನು ಯಾರೋ ಗಮನಿಸಿ ನಮಗೆ ಮಾಹಿತಿ ನೀಡಿದ್ದು, ನಮ್ಮ ಬಸ್​ ನಮಗೆ ಸಿಕ್ಕಿದೆ. ಖದೀಮ ಟೋಲ್ ಶುಲ್ಕ ಪಾವತಿ ಮಾಡಲು ಹಣ ಇಲ್ಲದೇ ಪರದಾಡಿದ್ದು, ಟೋಲ್ ಸಿಬ್ಬಂದಿ ಬಸ್ ಅನ್ನು ಪಕ್ಕಕ್ಕೆ ನಿಲ್ಲಿಸಿ ಹೆಚ್ಚು ವಿಚಾರಿಸುತ್ತಿದ್ದಂತೆ ಅನುಮಾನಗೊಂಡು ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಬಸ್ ಬಿಟ್ಟು ಕಳ್ಳ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಚಾಮರಾಜನಗರ ಪಟ್ಟಣ ಠಾಣೆಗೆ ದೂರು ಕೊಡುವುದಾಗಿ” ಸೋಮನಾಯಕ ಅವರು ತಿಳಿಸಿದ್ದಾರೆ.

ಕಳ್ಳತನವಾಗಿದ್ದ ಬಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು ನಮಗೆ ನೆರವಾಯಿತು ಎಂದು ಇದೇ ವೇಳೆ ಅವರು ಹೇಳಿಕೊಂಡಿದ್ದಾರೆ. ಬಸ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ.

Source : https://www.etvbharat.com/kn/!state/private-bus-theft-thief-escaped-after-leaving-stolen-bus-behind-after-failing-to-pay-toll-karnataka-news-kas25012806180

Leave a Reply

Your email address will not be published. Required fields are marked *