ಬಾಹ್ಯಾಕಾಶದಲ್ಲಿ ಇಸ್ರೋ ‘ಸೆಂಚುರಿ’: ನ್ಯಾವಿಗೇಶನ್ ಉಪಗ್ರಹ ಉಡ್ಡಯನ ಯಶಸ್ವಿ, ಹೊಸ ಎತ್ತರಕ್ಕೇರಿದ ಭಾರತ.

ISRO 100TH MISSION SUCCESS : ಜಿಎಸ್‌ಎಲ್‌ವಿ-ಎಫ್15 ರಾಕೆಟ್‌ ಮೂಲಕ ಎನ್‌ವಿಎಸ್‌-02 ಉಪಗ್ರಹ ಉಡ್ಡಯನ ಯೋಜನೆ ಯಶಸ್ವಿಯಾಗಿದೆ. ಬಾಹ್ಯಾಕಾಶ ನ್ಯಾವಿಗೇಷನ್‌ನಲ್ಲಿ ಭಾರತ ಹೊಸ ಎತ್ತರ ತಲುಪಿದೆ ಎಂದು ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹರ್ಷ ವ್ಯಕ್ತಪಡಿಸಿದೆ.

ಶ್ರೀಹರಿಕೋಟಾ(ಆಂಧ್ರ ಪ್ರದೇಶ): ಇಸ್ರೋ ವಿಜ್ಞಾನಿಗಳ ಐತಿಹಾಸಿಕ 100ನೇ ಉಡ್ಡಯನ ಇಂದು ಬೆಳಗ್ಗೆ ಯಶಸ್ವಿಯಾಯಿತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಲಾಂಚ್‌ಪ್ಯಾಡ್‌ನಿಂದ ನಭಕ್ಕೆ ಚಿಮ್ಮಿದ ಜಿಎಸ್‌ಎಲ್‌ವಿ ರಾಕೆಟ್‌, ನ್ಯಾವಿಗೇಷನ್ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸಿತು. ಈ ಉಪಗ್ರಹದ ಮೂಲಕ ಭೂಮಿ, ವಾಯು ಮತ್ತು ಜಲ ಮಾರ್ಗಗಳಿಗೆ ನಿಖರ ಮಾಹಿತಿ ಹಾಗು ಕೃಷಿ ಸೇರಿದಂತೆ ಹಲವು ಕ್ಷೇತ್ರಗಳು ಪ್ರಯೋಜನ ಪಡೆಯಲಿವೆ.

ಮಹತ್ವದ ಮೈಲಿಗಲ್ಲು-ವಿ.ನಾರಾಯಣನ್: “ಉಪಗ್ರಹವನ್ನು ನಿಖರವಾಗಿ ಕಕ್ಷೆಗೆ ಸೇರಿಸಲಾಗಿದೆ. ಇದು ಸಂಸ್ಥೆಯ 100ನೇ ಉಡ್ಡಯನವಾಗಿದ್ದು, ಅತ್ಯಂತ ಮಹತ್ವದ ಮೈಲಿಗಲ್ಲು” ಎಂದು ಯಶಸ್ವಿ ಉಡ್ಡಯನದ ನಂತರ ನಾರಾಯಣನ್ ಮಾತನಾಡಿದರು. “ಉಡ್ಡಯನದ ದತ್ತಾಂಶಗಳು ಲಭ್ಯವಾಗಿವೆ. ವಾಹನದ ಎಲ್ಲ ವ್ಯವಸ್ಥೆಗಳು ಸಹಜ ಸ್ಥಿತಿಯಲ್ಲಿವೆ. 2025ರ ಮೊದಲ ಉಡ್ಡಯನ ಯಶಸ್ವಿಯಾಗಿರುವುದು ತುಂಬಾ ಸಂತಸ ತಂದಿದೆ” ಎಂದು ಅವರು ಹೇಳಿದರು.

ಇಸ್ರೋ ನೂತನ ಅಧ್ಯಕ್ಷರಾಗಿ ಜನವರಿ 16ರಂದು ಅಧಿಕಾರ ಸ್ವೀಕರಿಸಿದ ವಿ.ನಾರಾಯಣನ್ ಅವರ ನಾಯಕತ್ವದಲ್ಲಿ ನಡೆದ ಮೊದಲ ಉಡ್ಡಯನ ಇದಾಗಿದೆ.

ಇದಕ್ಕೂ ಮುನ್ನ, 27.30 ಗಂಟೆಗಳ ಕೌಂಟ್‌ಡೌನ್‌ ಮುಗಿಯುತ್ತಿದ್ದಂತೆ ಬೆಳಗ್ಗೆ 6.23ಕ್ಕೆ ಸರಿಯಾಗಿ ಸ್ವದೇಶಿ ಮೇಲು ಹಂತದ ಕ್ರಯೋಜೆನಿಕ್ ಎಂಜಿನ್‌ನೊಂದಿಗೆ ಜಿಎಸ್‌ಎಲ್‌ವಿ ರಾಕೆಟ್ ದಟ್ಟ ಬೆಂಕಿಯನ್ನು ಉಗುಳುತ್ತಾ ಅತ್ಯಂತ ಗಾಂಭೀರ್ಯ ಠೀವಿಯೊಂದಿಗೆ ಆಗಸದೆತ್ತರಕ್ಕೆ ಚಿಮ್ಮಿತು. ಕಪ್ಪು ಮತ್ತು ಮೋಡಕವಿದ ಆಗಸದಲ್ಲಿ ಸುಮಾರು 19 ನಿಮಿಷಗಳ ಪ್ರಯಾಣದ ಬಳಿಕ ರಾಕೆಟ್ ತನ್ನೊಡಲಲ್ಲಿದ್ದ ಎನ್‌ವಿಎಸ್‌-02 ಉಪಗ್ರಹವನ್ನು (ಪೇಲೋಡ್‌) ನಿಗದಿತ ಕಕ್ಷೆಗೆ ಯಶಸ್ವಿಯಾಗಿ ಬೇರ್ಪಡಿಸಿ ತಲುಪಿಸಿತು.

ಇದು ಭಾರತೀಯ ನ್ಯಾವಿಗೇಷನ್ ಗುಚ್ಚದ 2ನೇ ಉಪಗ್ರಹವಾಗಿದ್ದು, ಇದರೊಂದಿಗೆ ಭಾರತೀಯ ಉಪ ಖಂಡದ ಬಳಕೆದಾರರು ಸೇರಿದಂತೆ ಭಾರತ ಭೂಭಾಗದಿಂದ ಸುಮಾರು 1,500 ಕಿ.ಮೀಗೂ ಹೊರತಾದ ನಿಖರ ಸ್ಥಳಗಳ ಮಾಹಿತಿ, ವೇಗ ಮತ್ತು ಸಮಯದ ನ್ಯಾವಿಗೇಷನ್ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ.

ಇಂದಿನ ಜಿಎಸ್‌ಎಲ್‌ವಿ ಎಫ್‌ 15 ಯೋಜನೆಯು ಜಿಎಸ್‌ಎಲ್‌ವಿ-ಎಫ್‌12 ಯೋಜನೆಯ ಮುಂದಿನ ಭಾಗವಾಗಿದೆ. ಜಿಎಸ್‌ಎಲ್‌ವಿ-ಎಫ್‌12 ರಾಕೆಟ್‌ ಮೇ 29, 2023ರಂದು ಎನ್‌ವಿಎಸ್‌ 01 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು.

📸 Relive the moment! Here are stunning visuals from the GSLV-F15/NVS-02 launch.

A proud milestone for India’s space journey! 🌌 #GSLV #NAVIC #ISRO pic.twitter.com/RK4hXuBZNN— ISRO (@isro) January 29, 2025

ಎನ್‌ವಿಎಸ್‌-02 ಉಪಗ್ರಹದ ಪ್ರಯೋಜನಗಳು: ಭೂಮಿ, ಆಕಾಶ ಮತ್ತು ನೌಕಾಯಾನ ಹಾಗು ಕೃಷಿ ಚಟುವಟಿಕೆಗಳಿಗೆ ನಿಖರ ಮಾಹಿತಿ, ನೌಕಾದಳದ ಫ್ಲೀಟ್‌ ನಿರ್ವಹಣೆಗೆ ಅನುಕೂಲ, ಮೊಬೈಲ್‌ ಸಾಧನಗಳಿಗೆ ಲೊಕೇಶನ್ ಆಧಾರಿತ ಸೇವೆಗಳ ಪೂರೈಕೆ, ಉಪಗ್ರಹಗಳಿಗೆ ಕಕ್ಷೆಯ ನಿರ್ಣಯ ಕುರಿತು ಮಾಹಿತಿ, ಇಂಟರ್ನೆಟ್ ಆಫ್ ತಿಂಗ್ಸ್‌ ಆಧಾರಿತ ಅಪ್ಲಿಕೇಶನ್‌ಗಳು ಹಾಗು ತುರ್ತು ಸೇವೆಗಳು, ಸಮಯದ ಸೇವೆಗಳು ದೊರೆಯಲಿವೆ ಎಂದು ಇಸ್ರೋ ತಿಳಿಸಿದೆ.

NavIC ಯೋಜನೆಯು ಒಟ್ಟು 5 ತಲೆಮಾರಿನ ಉಪಗ್ರಹಗಳನ್ನು ಹೊಂದಿದೆ. ಇವುಗಳೆಂದರೆ, ಎನ್‌ವಿಎಸ್‌- 01/02/03/04/05. NVS-02 ಉಪಗ್ರಹದ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಬೆಂಗಳೂರಿನ ಯು.ಆರ್‌.ರಾವ್ ಉಪಗ್ರಹ ಕೇಂದ್ರದಲ್ಲಿ ಮಾಡಲಾಗಿದೆ. ಇದು 2,250 ಕೆ.ಜಿ ತೂಕ ಹೊಂದಿದೆ. ಎಲ್1, ಎಲ್ 5 ಮತ್ತು ಎಸ್ ಬ್ಯಾಂಡ್‌ಗಳೆಂಬ ನ್ಯಾವಿಗೇಷನ್ ಸಲಕರಣೆ ಅಥವಾ ಪೇಲೋಡ್‌ಗಳನ್ನು ಹೊಂದಿದ್ದು, ಇದರಲ್ಲಿ ಟ್ರೈ ಬ್ಯಾಂಡ್‌ ಆ್ಯಂಟೆನಾ ಅಳವಡಿಸಲಾಗಿದೆ.

ಇದಕ್ಕೂ ಮುನ್ನ ಡಿಸೆಂಬರ್ 20 2024ರಂದು ಇಸ್ರೋ ವಿಜ್ಞಾನಿಗಳು ಡಾಕಿಂಗ್‌ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದರು. ಇದು ಸಂಸ್ಥೆಯ 99ನೇ ಯೋಜನೆಯಾಗಿತ್ತು.

 #100thLaunch 

Congratulations @isro for achieving the landmark milestone of #100thLaunch from #Sriharikota.
It’s a privilege to be associated with the Department of Space at the historic moment of this record feat.
Team #ISRO, you have once again made India proud with… pic.twitter.com/lZp1eV4mmL— Dr Jitendra Singh (@DrJitendraSingh) January 29, 2025

ಇಸ್ರೋ ಬಾಹ್ಯಾಕಾಶ ಪ್ರಯಾಣವನ್ನು ವಿವರಿಸುತ್ತಾ ನಾರಾಯಣನ್ ಅವರು, “ವಿಕ್ರಮ್‌ ಸಾರಾಭಾಯಿ ಅವರ ನಾಯಕತ್ವದಿಂದ ದೇಶದ ಬಾಹ್ಯಾಕಾಶ ಯೋಜನೆಗಳು ರೂಪುಗೊಂಡ ಬಗೆಯನ್ನು ಸ್ಮರಿಸಿದರು. ಇಸ್ರೋ ಇಲ್ಲಿಯವರೆಗೆ 6 ತಲೆಮಾರುಗಳ ವಿವಿಧ ಉಡ್ಡಯನ ವಾಹನಗಳನ್ನು ಅಭಿವೃದ್ಧಿಗೊಳಿಸಿದೆ. ಈ ಪೈಕಿ ಸತೀಶ್ ಧವನ್ ಅವರ ನೇತೃತ್ವದ ಮೊದಲ ಉಡ್ಡಯನ ವಾಹನ ನಿರ್ಮಾಣವಾಗಿದ್ದು, ಎಪಿಜೆ ಅಬ್ದುಲ್ ಕಲಾಂ ಪ್ರಾಜೆಕ್ಟ್‌ ಡೈರೆಕ್ಟರ್ ಆಗಿದ್ದರು. ಇದು ಎಸ್‌ಎಲ್‌ವಿ-3 ಆಗಿದ್ದು, ರೋಹಿಣಿ ತಂತ್ರಜ್ಞಾನದ ಪೇಲೋಡ್‌ ಅನ್ನು ಕಕ್ಷೆಗೆ ಸೇರಿಸಲಾಗಿತ್ತು. ಆಗಸ್ಟ್‌ 10 1979ರಲ್ಲಿ ಇದರ ಉಡ್ಡಯನ ನಡೆದಿತ್ತು ಎಂದು ಅವರು ತಿಳಿಸಿದರು. ಇದಾದ ನಂತರ ಇಂದಿಗೆ 100 ಉಡ್ಡಯನಗಳು ನಡೆದಿವೆ. ಇಸ್ರೋ 548 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ವಿದೇಶಿ ಗ್ರಾಹಕರ ಉಪಗ್ರಹಗಳೂ ಇದರಲ್ಲಿ ಸೇರಿವೆ” ಎಂದು ನಾರಾಯಣನ್ ಮಾಹಿತಿ ನೀಡಿದರು.

ಈ ಸಮಯದಲ್ಲಿ ಇಸ್ರೋ ಸಾಕಷ್ಟು ಮೈಲಿಗಲ್ಲುಗಳನ್ನು ಸಾಧಿಸಿದೆ. ಮೂರು ಚಂದ್ರಯಾನ ಯೋಜನೆಗಳು, ಮಂಗಳ ಮತ್ತು ಸೂರ್ಯನಿಗೆ ಸಂಬಂಧಿಸಿದ ಯೋಜನಗಳು ಮಹತ್ವದ್ದು ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ನಾರಾಯಣನ್ ತಿಳಿಸಿದರು.

Source : https://www.etvbharat.com/kn/!technology/isro-100th-mission-gslv-f15-carrying-navigation-satellite-lifts-off-from-sriharikota-kas25012900742

Leave a Reply

Your email address will not be published. Required fields are marked *