U19 T20 World Cup 2025: ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಮೊದಲ ಬಾರಿಗೆ ಅಂಡರ್-19 ಟಿ20 ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಆಫ್ರಿಕಾ ಮಹಿಳಾ ತಂಡ ಇದೀಗ ಫೈನಲ್ನಲ್ಲಿ ಅಜೇಯ ಟೀಂ ಇಂಡಿಯಾವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಈ ಪ್ರಶಸ್ತಿ ಪಂದ್ಯ ಫೆಬ್ರವರಿ 2 ರಂದು ನಡೆಯಲಿದೆ.
![](https://samagrasuddi.co.in/wp-content/uploads/2025/01/image-119-1024x576.png)
ಮಹಿಳೆಯರ ಅಂಡರ್-19 ಟಿ20 ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಸೋಲನುಭವಿಸಿದ ಕಾಂಗರೂ ತಂಡ ಟೂರ್ನಿಯಿಂದ ಹೊರಬಿದ್ದಿರೆ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಕೇವಲ 105 ರನ್‌ಗಳಿಗೆ ಆಲೌಟ್ ಆಯಿತು. ಆ ನಂತರ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ ಇನ್ನು 11 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಈ ಪಂದ್ಯದ ಬಳಿಗ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ.
ಸೆಮಿಫೈನಲ್‌ನಲ್ಲಿ ಮಿಂಚಿದ ವ್ಯಾನ್ ವೈಕ್
ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ದೊಡ್ಡ ಮೊತ್ತ ಕಲೆಹಾಕಿ ಎದುರಾಳಿ ತಂಡದಲ್ಲಿ ಒತ್ತಡ ಸೃಷ್ಟಿಸುವುದು ಅದರ ಉದ್ದೇಶವಾಗಿತ್ತು. ಆದರೆ ಆರಂಭ ಉತ್ತಮವಾಗಿರದ ಕಾರಣ ತಂಡ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಅಲ್ಲದೆ ಪವರ್‌ಪ್ಲೇನಲ್ಲಿಯೇ ತಂಡದ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ರನ್ ಗಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರಾದರೂ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಆಶ್ಲೇ ವ್ಯಾನ್ ವೈಕ್ ಅವರ ಮಾರಕ ಬೌಲಿಂಗ್ ಮುಂದೆ ಪರದಾಡಬೇಕಾಯಿತು. ವ್ಯಾನ್ ವೈಕ್ 3 ಓವರ್ ಗಳಲ್ಲಿ ಕೇವಲ 17 ರನ್ ನೀಡಿ 3 ವಿಕೆಟ್ ಪಡೆದರು. ಇದರಿಂದಾಗಿ ಅರ್ಧ ಕಾಂಗರೂ ತಂಡ 62 ರನ್ಗಳಿಸುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡಿತು. ಆದರೆ ಕೆಳ ಕ್ರಮಾಂಕದ ಬ್ಯಾಟರ್ಗಳು ಸ್ಕೋರನ್ನು 105 ರನ್‌ಗಳಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.
ಗೆಮ್ಮಾ ಬೋಥಾ ಅದ್ಭುತ ಬ್ಯಾಟಿಂಗ್
106 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮೂರನೇ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಮತ್ತೊಬ್ಬ ಆರಂಭಿಕ ಆಟಗಾರ್ತಿ ಗೆಮ್ಮಾ ಬೋಥಾ ವೇಗವಾಗಿ ರನ್ ಕಲೆಹಾಕಲು ಮುಂದಾದರು. ಆದರೆ ಅಷ್ಟರಲ್ಲಿ ನಾಲ್ಕನೇ ಓವರ್‌ನಲ್ಲಿ ಎರಡನೇ ವಿಕೆಟ್ ಕೂಡ ಪತನವಾಯಿತು. ಆದರೆ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಬೋಥಾ 24 ಎಸೆತಗಳಲ್ಲಿ 154 ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 37 ರನ್ ಗಳಿಸಿದರು.
ಅಂತಿಮವಾಗಿ ಬೋಥಾ 56 ರನ್ ಗಳಿಸಿ ಔಟಾದರಾದರೂ, ಅವರ ಇನ್ನಿಂಗ್ಸ್‌ನಿಂದಾಗಿ ದಕ್ಷಿಣ ಆಫ್ರಿಕಾ ತಂಡ ಗುರಿಯ ಅರ್ಧಕ್ಕಿಂತ ಹೆಚ್ಚು ರನ್ ಗಳಿಸಿತು. ಇದಾದ ಬಳಿಕ ನಾಯಕಿ ಕೈಲ್ ರೈನೆಕೆ ಹಾಗೂ ವಿಕೆಟ್‌ಕೀಪರ್ ಬ್ಯಾಟರ್ ಕರಾಬೊ ಮಿಸೊ 38 ರನ್‌ಗಳ ಜೊತೆಯಾಟ ನಡೆಸಿದರು. ಇದರಿಂದಾಗಿ ತಂಡದ ಸ್ಕೋರ್ ಕೇವಲ 14.2 ಓವರ್‌ಗಳಲ್ಲಿ 94ಕ್ಕೆ ತಲುಪಿತು. ಅಂತಿಮವಾಗಿ ಗೆಲ್ಲಲು 28 ಎಸೆತಗಳಲ್ಲಿ 12 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಸುಲಭವಾಗಿ ಸಾಧಿಸಿತು. ತಂಡದ ಪರ ರೈನೆಕೆ 26 ಎಸೆತಗಳಲ್ಲಿ 26 ರನ್ ಗಳಿಸಿದರೆ, ಮಿಸೊ 29 ಎಸೆತಗಳಲ್ಲಿ 19 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರು.