ಬಜೆಟ್​ಗೆ ಕ್ಷಣಗಣನೆ: ಗಿಫ್ಟ್​​ ಸಿಟಿ ಸೇರಿ ರಾಜ್ಯದ ಐಟಿ – ಬಿಟಿ ಇಲಾಖೆ ಕೇಂದ್ರದ ಮುಂದಿಟ್ಟಿರುವ ವಿಷ್ ಲಿಸ್ಟ್ ಏನು? – UNION BUDGET WISH LIST

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಐಟಿ, ಬಿಟಿ ಇಲಾಖೆಯು ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.

ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯ ಸರ್ಕಾರ ಐಟಿ, ಬಿಟಿ ಕ್ಷೇತ್ರದಲ್ಲಿ ಹಲವು ಕೊಡುಗೆಗಳ ನಿರೀಕ್ಷೆಯಲ್ಲಿದೆ.‌ ಈ ಸಂಬಂಧ ಈಗಾಗಲೇ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಕೇಂದ್ರ ಸಚಿವರಿಗೆ ಮನವಿ ಪಟ್ಟಿ ಸಲ್ಲಿಸಿದ್ದಾರೆ.

ಐಟಿ, ಬಿಟಿ, ಸ್ಟಾರ್ಟ್ ಅಪ್ ಗಳ ಕೇಂದ್ರವಾದ ಕರ್ನಾಟಕ ಈ ಬಾರಿ ಕೇಂದ್ರ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದೆ. ಐಟಿ-ಬಿಟಿ ಕ್ಷೇತ್ರದ ಉತ್ತೇಜನಕ್ಕಾಗಿ ಹೆಚ್ಚಿನ ಯೋಜನೆಗಳನ್ನು ಘೋಷಿಸುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಐಟಿ, ಬಿಟಿ ಸಚಿವ ಪ್ರಿಯಾಂಕ ಖರ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಐ & ಬಿ ಸಚಿವರಾದ ಅಶ್ವಿನಿ ವೈಷ್ಣವ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೊಯೇಲ್ ಅವರನ್ನು ಭೇಟಿಯಾಗಿ ಬೇಡಿಕೆಯನ್ನೂ ಸಲ್ಲಿಸಿದ್ದರು.

ಗಿಫ್ಟ್​​ ಸಿಟಿ ರಚನೆಗೆ ಬೇಡಿಕೆ: ಅಹಮದಾಬಾದ್ ಸಬರಮತಿ ದಂಡೆಯಲ್ಲಿ ಗುಜರಾತ್ ಇಂಟರ್​​ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್ ಸಿಟಿ) ಮಾದರಿಯಲ್ಲಿ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯವು ಬೇಡಿಕೆ ಇಟ್ಟಿದೆ. ಇದರೊಟ್ಟಿಗೆ ಐಟಿ – ಬಿಟಿ ವಿಭಾಗದ ಅನೇಕ ಯೋಜನೆಗಳ ತ್ವರಿತ ಅನುಮತಿ ನೀಡುವಂತೆಯೂ ಒತ್ತಾಯ ಮಾಡಲಾಗಿದೆ.

ಟೆಕ್ ಹಬ್ ಮತ್ತು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಬೆಂಗಳೂರು ಗುರುತಿಸಿಕೊಂಡಿದೆ. ಬೆಂಗಳೂರು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಡೊಮೇನ್, ಫಿನ್ಟೆಕ್ ಸ್ಪೇಸ್, ಎಂಟರ್ಪ್ರೈಸ್ ಟೆಕ್, ಇ-ಕಾಮರ್ಸ್ ಮತ್ತು ಎಡ್-ಟೆಕ್ ಕ್ಷೇತ್ರಗಳಲ್ಲಿ ತೆರೆದ ವೇದಿಕೆಯಾಗಿದೆ. ಕರ್ನಾಟಕದಲ್ಲಿ ಗಿಫ್ಟ್ ಸಿಟಿ ಮಾದರಿಯಲ್ಲಿ ಅವಕಾಶ ತೆರೆದಿಡುವ ಮೂಲಕ ಆರ್ಥಿಕ ಬೆಳವಣಿಗೆ ಉತ್ತೇಜಿಸುವುದರ ಜೊತೆಗೆ, ಹಲವಾರು ಉದ್ಯೋಗಾವಕಾಶಗಳ ಸೃಷ್ಟಿಗೆ ಅವಕಾಶ ಲಭ್ಯವಾಗಲಿದೆ. ಜೊತೆಗೆ ಯಥೇಚ್ಚವಾಗಿ ವಿದೇಶಿ ಹೂಡಿಕೆಗಳನ್ನೂ ಆಕರ್ಷಿಸಬಹುದು ಎಂದು ಮನವಿ ಮಾಡಿದ್ದಾರೆ.

ತ್ವರಿತಗತಿಯಲ್ಲಿ ಅನುಮೋದನೆಗೆ ಮನವಿ: ಕರ್ನಾಟಕವು ಅಲ್ಟ್ರಾ-ಮೆಗಾ ಮತ್ತು ಸೂಪರ್-ಮೆಗಾ ಉದ್ಯಮಗಳಿಗೆ 500 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಗಳನ್ನು ತರುವ ವಿಶೇಷ ಪ್ಯಾಕೇಜ್​​ಗಳನ್ನು ಒದಗಿಸುತ್ತದೆ. ಕರ್ನಾಟಕವು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಅದರ ಪೂರೈಕೆ-ಸರಪಳಿ ಪೂರಕಗಳಿಗಾಗಿ ಕೈಗಾರಿಕಾ ಪ್ರದೇಶಗಳನ್ನು ಮೀಸಲಿಟ್ಟಿದೆ. ಮೈಸೂರು, ಹುಬ್ಬಳ್ಳಿ – ಧಾರವಾಡ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸಮೀಪದ ಪ್ರದೇಶಗಳನ್ನು ಮೊಬೈಲ್ ಫೋನ್ ಅಸೆಂಬ್ಲಿ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್​​ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಕ್ಲಸ್ಟರ್ ಸ್ಥಾಪಿಸಲು ಕೇಂದ್ರ ಸರ್ಕಾರದ ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (EMC 2.0) ಯೋಜನೆಯಡಿಯಲ್ಲಿ ಮೈಸೂರು ಜಿಲ್ಲೆಯ ಕೋಚನಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಧಾರವಾಡ ಜಿಲ್ಲೆಯ ಕೋಟೂರು-ಬೇಲೂರು ಕೈಗಾರಿಕಾ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಹೂಡಿಕೆದಾರರು ಅಂತಿಮ ಭೂ ಮಂಜೂರಾತಿಗಾಗಿ ಕಾಯುತ್ತಿರುವುದರಿಂದ ಅನುಮೋದನೆಗಳನ್ನು ತ್ವರಿತವಾಗಿ ಟ್ರ್ಯಾಕ್ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ‌.

ಅಗತ್ಯ ಅನುದಾನದ ಬೇಡಿಕೆ: ಐಟಿ-ಬಿಟಿ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು, ಉದ್ಯಮ-ನಿರ್ದಿಷ್ಟ ಕೌಶಲ್ಯ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಕೌಶಲ್ಯದ ಅವಶ್ಯಕತೆ ಮತ್ತು ರಾಜ್ಯದಲ್ಲಿ ಸಂಶೋಧನೆ ಮತ್ತು ನಡುವಿನ ಅಂತರವನ್ನು ಕಡಿಮೆ ಮಾಡುವುದು ಸೇರಿದಂತೆ ಇಲಾಖೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನದ ಬೆಂಬಲ ನೀಡುವಂತೆ ಕೋರಲಾಗಿದೆ.

ಬೆಂಗಳೂರಲ್ಲಿ ಪೇಟೆಂಟ್ ಕಚೇರಿ ಸ್ಥಾಪನೆಗೆ ಮನವಿ: ಬೆಂಗಳೂರಲ್ಲಿ ಹಲವು ಸಂಶೋಧನೆಗಳು ನಡೆಯುತ್ತವೆ. ವಿವಿಧ ಪ್ರತಿಷ್ಟಿತ ಸಂಸ್ಥೆಗಳು ಸಂಶೋಧನೆ ನಡೆಸಿ ಪೇಟೆಂಟ್ ಗೆ ಅರ್ಜಿ ಹಾಕುತ್ತಿವೆ. ಕರ್ನಾಟಕದಲ್ಲಿ ವಾರ್ಷಿಕ ಸುಮಾರು 3,200ಗೂ ಅಧಿಕ ಪೇಟೆಂಟ್ ಕೋರಿ ಅರ್ಜಿ ಸಲ್ಲಿಸಲಾಗುತ್ತಿದೆ. ಬೆಂಗಳೂರು ಐಐಎಸ್​​ಸಿಯ ಸಂಶೋಧಕರು 2022ರಲ್ಲಿ 585 ಅರ್ಜಿಗಳನ್ನು ಸಲ್ಲಿಸಿದ್ದರು. ಅದೇ ರೀತಿ ಕರ್ನಾಟಕ ಡಿಆರ್ ಡಿಒ, ಇಸ್ರೋ, ಸಿಎಸ್​​​ಐಆರ್ ಲ್ಯಾಬ್ಸ್ ಸೇರಿ ಹಲವು ಪ್ರತಿಷ್ಠಿತ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗಳಿಗೆ ಕೇಂದ್ರ ತಾಣವಾಗಿದೆ. ಅದರ ಜೊತೆಗೆ ಕರ್ನಾಟಕದಲ್ಲಿ ಧಾರವಾಡ, ರಾಯಚೂರು ಐಐಐಟಿಗಳು, ವೈದ್ಯಕೀಯ ವಿಜ್ಞಾನ ಕಾಲೇಜು, ಇಂಜಿನಿಯರಿಂಗ್ ಕಾಲೇಜುಗಳಿವೆ. ಹಲವು ಆವಿಷ್ಕಾರಗಳನ್ನು ಮಾಡಲಾಗುತ್ತಿದೆ.

ಬೆಂಗಳೂರು ಹಾಗೂ ರಾಜ್ಯದ ಸಂಶೋಧಕರಿಗೆ ತಮ್ಮ ಉತ್ಪನ್ನ ಅಥವ ಆವಿಷ್ಕಾರಕ್ಕೆ ಪೇಟೆಂಟ್ ಪಡೆಯಲು ಪರದಾಡುವಂತಾಗಿದೆ. ಅವರು ಪೇಟೆಂಟ್ ಅರ್ಜಿ ಸಲ್ಲಿಸಲು ಚೆನ್ನೈಗೆ ಹೋಗಬೇಕಾಗಿದೆ. ಇದರಿಂದ ವೆಚ್ಚ, ವಿಳಂಬ ಹಾಗೂ ಅನಾನುಕೂಲ ಆಗುತ್ತಿರುವುದರಿಂದ ಬೆಂಗಳೂರಲ್ಲಿ ಪೇಟೆಂಟ್ ಕಚೇರಿ ಸ್ಥಾಪನೆಯನ್ನು ಕೇಂದ್ರ ಬಜೆಟ್​​ನಲ್ಲಿ ಘೋಷಣೆ ಮಾಡುವಂತೆ ಮನವಿ ಮಾಡಲಾಗಿದೆ.

Source:https://www.etvbharat.com/kn/!state/wish-by-karnataka-it-bt-department-on-union-budget-karnataka-news-kas25013106605

Leave a Reply

Your email address will not be published. Required fields are marked *