HOW TO APPLY KISAN CREDIT CARD : ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಿಸಾನ್ ಕ್ರೆಡಿಟ್ ಕಾರ್ಡ್ನ ಸಾಲದ ಮಿತಿಯನ್ನು 5 ಲಕ್ಷಕ್ಕೆ ಏರಿಕೆ ಮಾಡಿ ಘೋಷಿಸಿದ್ದಾರೆ.
![](https://samagrasuddi.co.in/wp-content/uploads/2025/02/image-30-1024x576.png)
ಹೈದರಾಬಾದ್: ಇತ್ತೀಚೆಗೆ ಕೇಂದ್ರ ವಿತ್ತ ಸಚಿವೆ ಮಂಡಿಸಿದ ಬಜೆಟ್ನಲ್ಲಿ ಕೂಲಿಕಾರರಿಗೆ ಹಾಗೂ ಕೃಷಿಯನ್ನು ಅವಲಂಬಿಸಿರುವ ರೈತರಿಗೆ ಹಲವು ಘೋಷಣೆಗಳನ್ನು ಮಾಡಲಾಗಿದೆ. ಅದರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು ಮೂರು ಲಕ್ಷದಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವುದೂ ಒಂದು.
ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ 2024- 25ರ ಆರ್ಥಿಕ ಸಮೀಕ್ಷೆ ವರದಿಯ ಪ್ರಕಾರ, ಮಾರ್ಚ್ 2024ರವರೆಗೆ 7.75 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ಗಳ ಮೂಲಕ 9.81 ಲಕ್ಷ ಕೋಟಿ ರೂ. ವರೆಗೆ ಸಾಲವನ್ನು ವಿತರಿಸಲಾಗಿದೆ.
ನಬಾರ್ಡ್ ಶಿಫಾರಸಿನ ಮೇರೆಗೆ 1998ರಲ್ಲಿ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಆರಂಭಿಸಲಾಯಿತು. ಇದು ಕೃಷಿ ಉಪಕರಣಗಳ ಜೊತೆಗೆ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಹಾಗೂ ಇತರ ವಸ್ತುಗಳನ್ನು ಖರೀದಿ ಮಾಡಲು ಅನುವು ಮಾಡಿಕೊಡುತ್ತದೆ. ರೈತರ ಆರ್ಥಿಕ ತೊಂದರೆಗಳನ್ನು ನಿವಾರಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ ಬಹಳ ಉಪಯುಕ್ತವಾಗಿದೆ. ಇದರ ಸಾಲದ ಮಿತಿಯನ್ನು 5 ಲಕ್ಷಕ್ಕೆ ಏರಿಸಿ, ಶೇ. 7 ಬಡ್ಡಿದರ ವಿಧಿಸಲಾಗಿದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ರೈತರಿಗೆ ಶೇ. 3ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಉಳಿದ ಶೇ. 4ರಷ್ಟನ್ನು ರೈತರೇ ಪಾವತಿಸಬೇಕಾಗುತ್ತದೆ.
ಕಿಸಾನ್ ಕಾರ್ಡ್ ಹೇಗೆ ಕಾರ್ಯ ನಿರ್ವಹಿಸುತ್ತದೆ?:
- ಕಿಸಾನ್ ಕ್ರೆಡಿಟ್ ಕಾರ್ಡ್ ಫಲಾನುಭವಿಗಳಿಗೆ ಕೆಲವು ಅರ್ಹತಾ ಮಾನದಂಡಗಳಿವೆ.
- ಭಾರತೀಯ ಪ್ರಜೆಯಾಗಿರಬೇಕು ಮತ್ತು 18 ರಿಂದ 75 ವರ್ಷ ವಯಸ್ಸಿನವರಾಗಿರಬೇಕು.
- ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳಿಂದ ಸಾಲ ಪಡೆಯಬಹುದು.
- ಕಿಸಾನ್ ಕ್ರೆಡಿಟ್ ಕಾರ್ಡ್ ಬಯಸುವವರು ಆಫ್ಲೈನ್ ಮತ್ತು ಆನ್ಲೈನ್ ಎರಡರಲ್ಲೂ ಅರ್ಜಿ ಸಲ್ಲಿಸಬಹುದು.
- ರೈತರು ತಮ್ಮ ಪ್ರದೇಶದ ಬ್ಯಾಂಕ್ಗೆ ಹೋಗಿ ಕ್ರೆಡಿಟ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಬೇಕು.
- ಅರ್ಜಿಯ ಜೊತೆಗೆ, ಆಧಾರ್, ಪ್ಯಾನ್ ಕಾರ್ಡ್, ಭೂ ದಾಖಲೆಗಳು ಮತ್ತು ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ ಸೇರಿದಂತೆ ಹಲವಾರು ದಾಖಲೆಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ಹೇಗೆ?:
- ನೀವು ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ ಅಥವಾ ಆಯಾ ಬ್ಯಾಂಕಿನ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
- SBI ನಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಫಾರ್ಮ್ಗಾಗಿ, ಅಧಿಕೃತ ವೆಬ್ಸೈಟ್ https://sbi.co.in/web/personal-banking/home ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
- ಇದರಲ್ಲಿ ಕೃಷಿ ಮತ್ತು ಗ್ರಾಮೀಣ ಟ್ಯಾಬ್ಗೆ ಹೋಗಿ ಮತ್ತು ಬೆಳೆ ಸಾಲ ಆಯ್ಕೆ ಅಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
- ಅರ್ಜಿ ನಮೂನೆಯ ವಿವರಗಳನ್ನು ಡೌನ್ಲೋಡ್ ಮಾಡಿ ನಮೂದಿಸಬೇಕು.
- ನಂತರ ನಾಲ್ಕು ದಿನಗಳಲ್ಲಿ ಸಂಬಂಧಿತ ಬ್ಯಾಂಕ್ ನಿಮ್ಮನ್ನು ಸಂಪರ್ಕಿಸುತ್ತದೆ.
- ಅವರ ಸೂಚನೆಗಳ ಪ್ರಕಾರ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ ವಹಿವಾಟಿನ ಮೇಲಿನ ಬಡ್ಡಿಯನ್ನು ವರ್ಷಕ್ಕೆ ಎರಡು ಬಾರಿ ಪಾವತಿಸಬೇಕಾಗುತ್ತದೆ. ಬಡ್ಡಿ ಸೇರಿದಂತೆ ಸಾಲವನ್ನು ವರ್ಷಕ್ಕೊಮ್ಮೆ ಠೇವಣಿ ಇಡಬೇಕು. ರೈತರು ಠೇವಣಿ ಇಟ್ಟ ಮೊತ್ತವನ್ನು ಮರುದಿನ ಹಿಂಪಡೆಯಬಹುದು. ರೈತರು ವರ್ಷಕ್ಕೆ ಎರಡು ಬಾರಿ ಬಡ್ಡಿ ಪಾವತಿಸಿ ಸಾಲದ ಮೊತ್ತವನ್ನು ಒಮ್ಮೆ ಠೇವಣಿ ಇಟ್ಟರೆ ಮಾತ್ರ ಬಡ್ಡಿ ಸಬ್ಸಿಡಿ ಅನ್ವಯವಾಗುತ್ತದೆ. ಇಲ್ಲದಿದ್ದರೆ, ಶೇಕಡಾ 7 ರಷ್ಟು ಬಡ್ಡಿ ವಿಧಿಸಲಾಗುತ್ತದೆ. ನೀವು ಸಮಯಕ್ಕೆ ಬಡ್ಡಿ ಪಾವತಿಸದಿದ್ದರೆ, ನಿಮ್ಮ ಖಾತೆಯನ್ನು ಡಿಫಾಲ್ಟರ್ ಎಂದು ನೋಂದಾಯಿಸಲಾಗುತ್ತದೆ.
Source : https://www.etvbharat.com/kn/!business/how-to-apply-kisan-credit-card-kas25020400529