ಹಾಲಿನಿಂದ ತಯಾರಿಸಲಾಗುವ ಪನೀರ್ ಎಂದರೆ ಎಲ್ಲರಿಗೂ ಇಷ್ಟ. ಹೌದು, ಭಾರತೀಯ ಪಾಕ ಪದ್ಧತಿಯಲ್ಲಿ ಖಾರ ಪದಾರ್ಥಗಳಿಂದ ಹಿಡಿದು ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ನಕಲಿ ಪನೀರ್ ಹೆಚ್ಚು ಮಾರಾಟವಾಗುತ್ತಿದೆ. ಈ ನಕಲಿ ಪನೀರ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹೀಗಾಗಿ ಮಾರುಕಟ್ಟೆಯಿಂದ ಖರೀದಿಸಿದ ಪನೀರ್ ಅಸಲಿಯೇ ನಕಲಿಯೇ ಎಂದು ಹೇಗೆ ಪತ್ತೆಹಚ್ಚಬಹುದು? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.
ಇತ್ತೀಚೆಗಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರಲ್ಲಿ ಈ ಪನೀರ್ ಕೂಡ ಸೇರಿದೆ. ಎಲ್ಲರೂ ಇಷ್ಟ ಪಟ್ಟು ಸೇವಿಸುವ ಪನೀರ್ ನಾಲಿಗೆ ರುಚಿ ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ರಾಸಾಯನಿಕ ಬಳಸಿ ತಯಾರಿಸಿದ ಪನೀರ್ ಮಾರಾಟ ಮಾಡಲಾಗುತ್ತಿದ್ದು, ನೀವು ಖರೀದಿಸುವ ಪನೀರ್ ನಿಜವಾಗಿಯೂ ಹಾಲಿನಿಂದ ತಯಾರಿಸಲ್ಪಟ್ಟಿದೇ ಅಥವಾ ನಕಲಿಯೇ ಎಂದು ಮನೆಯಲ್ಲೇ ಸುಲಭವಾಗಿ ಕಂಡು ಹಿಡಿಯಬಹುದು.
- ಒಂದು ತಟ್ಟೆಯಲ್ಲಿ ಮಾರುಕಟ್ಟೆಯಿಂದ ತಂದಿರುವ ಪನೀರ್ ಹಾಕಿ, ಕೈಯಿಂದ ಪುಡಿಮಾಡಲು ಪ್ರಯತ್ನಿಸಿ. ಅದು ಮೃದುವಾಗಿರುತ್ತದೆ. ಕೈಯಿಂದ ಹಿಸುಕಿದರೆ ಪುಡಿಯಾಗುತ್ತದೆ. ಆದರೆ ನಕಲಿ ಪನೀರ್ ಸಿಂಥೆಟಿಕ್ ರಾಸಾಯನಿಕಗಳಿಂದ ಮಾಡಲ್ಪಟ್ಟಿದ್ದು, ಗಟ್ಟಿಯಾಗಿರುತ್ತದೆ. ಎಷ್ಟೇ ಪುಡಿ ಮಾಡಿದರೂ ರಬ್ಬರಿನಂತೆ ಇದ್ದು ಬೇಗನೇ ಪುಡಿಯಾಗುವುದಿಲ್ಲ ಎಂದರೆ ಅದು ನಕಲಿ ಎಂದು ಅರ್ಥ ಮಾಡಿಕೊಳ್ಳಿ.
- ಪನೀರ್ ನಕಲಿ ಹಾಗೂ ಅಸಲಿಯೇ ಎಂದು ಬಣ್ಣದಿಂದ ಪರಿಶೀಲಿಸಬಹುದು. ಶುದ್ಧವಾದ ಪನೀರ್ ಯಾವಾಗಲೂ ತಿಳಿ ಬಿಳಿ ಬಣ್ಣ ಹೊಂದಿರುತ್ತದೆ..ಆದರೆ ಸಿಂಥೆಟಿಕ್ ಪನೀರ್ ಹೆಚ್ಚು ಬಿಳಿ ಬಣ್ಣವನ್ನು ಹೊಂದಿದ್ದು ನೋಡಿದ ಕೂಡಲೇ ಪತ್ತೆ ಹಚ್ಚಬಹುದು. ಬಿಳಿ ಕಾಗದ ಮೇಲೆ ಪನೀರ್ ಉಜ್ಜಿದರೆ ಅದು ಬಣ್ಣ ಬಿಟ್ಟರೆ ಅದು ಕಲಬೆರಕೆಯಾಗಿದೆ ಎನ್ನುವುದು ಖಚಿತವಾಗುತ್ತದೆ.
- ಅಯೋಡಿನ್ ಪರೀಕ್ಷೆ ಮಾಡುವ ಮೂಲಕ ಪನೀರ್ ಶುದ್ಧತೆ ಪತ್ತೆ ಹಚ್ಚಬಹುದು. ಮೊದಲಿಗೆ ಪನೀರ್ ಸಣ್ಣ ಭಾಗವನ್ನು ತೆಗೆದುಕೊಂಡು ಐದು ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ಆ ಬಳಿಕ ಅಯೋಡಿನ್ ಟಿಂಚರ್ನ ಒಂದೆರಡು ಹನಿಗಳನ್ನು ಮೇಲೆ ಹಾಕಿ, ಆಗ ಪನೀರ್ ನೀಲಿ ಬಣ್ಣಕ್ಕೆ ತಿರುಗಿದರೆ ರಾಸಾಯನಿಕ ಬಳಸಲಾಗಿದೆ.
- ಪನೀರ್ ವಾಸನೆಯಿಂದಲೇ ಅಸಲಿ ಪನೀರ್ ಕಂಡು ಹಿಡಿಯಬಹುದು. ಹಾಲಿನಿಂದ ತಯಾರಿಸಿದ ಪನೀರ್ ಮೊಸರಿನ ಅಥವಾ ಹುಳಿ ವಾಸನೆಯನ್ನು ಹೊಂದಿರುತ್ತದೆ. ಆದರೆ ಈ ಸಿಂಥೆಟಿಕ್ ಪನೀರ್ ಕೃತಕ ವಾಸನೆಯನ್ನು ಹೊಂದಿರುತ್ತದೆ.
- ನೀವು ಮಾರುಕಟ್ಟೆಯಲ್ಲಿ ಪನೀರ್ ಖರೀದಿ ಮಾಡುವಾಗ ಪ್ಯಾಕೇಜಿಂಗ್ ಗಮನಿಸುವುದು ಸೂಕ್ತ. ಅಸಲಿ ಪನೀರ್ ಘನ ರೂಪದಲ್ಲಿರುತ್ತದೆ. ನಕಲಿ ಪನೀರ್ ಪ್ಯಾಕೇಜಿಂಗ್ ನಲ್ಲಿ ಪುಡಿಯಾಗಿರಬಹುದು ಅಥವಾ ಚೂರು ಚೂರಾಗಿರಬಹುದು.
- ನೀವು ಖರೀದಿಸಿದ ಪನೀರ್ ಕಲಬೆರಕೆಯಾಗಿದೆಯೇ ಎಂದು ಪತ್ತೆ ಹಚ್ಚಲು ಮೊದಲು, ಒಂದು ಪಾತ್ರೆ ನೀರಿನಲ್ಲಿ ಒಂದು ತುಂಡು ಪನೀರ್ ತೆಗೆದುಕೊಂಡು ಕುದಿಸಿ ಒಂದು ಟೀಚಮಚ ತೊಗರಿ ಬೇಳೆಯನ್ನು ಸೇರಿಸಿಕೊಳ್ಳಿ. ಹತ್ತು ನಿಮಿಷ ಬೇಯಿಸಿ ಪನೀರ್ ತಿಳಿ ಕೆಂಪು ಬಣ್ಣದಲ್ಲಿದ್ದರೆ, ಅದರಲ್ಲಿ ಡಿಟರ್ಜೆಂಟ್ ಅಥವಾ ಯೂರಿಯಾ ಸೇರಿಸಿರಬಹುದು ಎಂದು ಅರ್ಥ ಮಾಡಿಕೊಳ್ಳಿ.
- ತಾಪಮಾನದ ಪರೀಕ್ಷೆಯ ಮೂಲಕ ಪನೀರ್ ಶುದ್ಧತೆಯನ್ನು ಪತ್ತೆ ಹಚ್ಚಬಹುದು. ಮೊದಲಿಗೆ ಒಂದು ಪ್ಯಾನ್ ಗೆ ಸಣ್ಣ ತುಂಡು ಪನೀರ್ ತೆಗೆದುಕೊಂಡು ಫ್ರೈ ಮಾಡಿ. ಅಸಲಿ ಪನೀರ್ ಕಂದು ಬಣ್ಣಕ್ಕೆ ತಿರುಗುತ್ತದೆ. ಆದರೆ ನಕಲಿ ಪನೀರ್ ಕರಗಬಹುದು. ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವುದಲ್ಲದೇ, ಎಣ್ಣೆಯುಕ್ತವಾಗಿರುವಂತೆ ಕಾಣಿಸುತ್ತದೆ.