ಚಿತ್ರದುರ್ಗ| 20,500 ಚ. ಮೀ ವಿಸ್ತಿರ್ಣದಲ್ಲಿ ಆಟೋಕ್ಯಾಡ್​ ತಂತ್ರಜ್ಞಾನದಲ್ಲಿ ಅರಳಿದ ವಿಶ್ವದಲ್ಲಿಯೇ ಅತೀ ದೊಡ್ಡ ಹನುಮನ ರೇಖಚಿತ್ರ.

ಚಿತ್ರದುರ್ಗ : ವಿಶ್ವದಲ್ಲಿಯೇ ಅತೀ ದೊಡ್ಡ ಹನುಮಾನ್ ರೇಖಾಚಿತ್ರವನ್ನು ಆಂಜನೇಯಜಾತ್ರಾ ಮಹೋತ್ಸವ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಬಿಡಿಸಲಾಗಿದೆ. ಈ ಒಂದು ರೇಖಾ ಚಿತ್ರ ನೋಬಲ್ ವಲ್ಡ್​ ಆಫ್​ ರೆಕಾರ್ಡ್​, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿಯೂ ದಾಖಲೆ ಬರೆಯಲಿದೆ ಎಂದು ಹೇಳಲಾಗಿದೆ.

ತುರುವನೂರಿನ ಪ್ರಭಂಜನ ರೆಡ್ಡಿ ಎಂಬುವವವರ ಜಮೀನಿನಲ್ಲಿ ರಾಮಧೂತ ಹನುಮನ ಬೃಹತ್ ರೇಖಾಚಿತ್ರವನ್ನು ಬಿಡಿಸಲಾಗಿದೆ. 20,500 ಚದುರ ಮೀಟರ್ ವಿಸ್ತಿರ್ಣದಲ್ಲಿ ಈ ಚಿತ್ರವನ್ನು ಬಿಡಿಸಲಾಗಿದ್ದು 5 ಎಕರೆ ಜಮೀನಿನಲ್ಲಿ ಎಂ ಸ್ಯಾಂಡ್​​ನಲ್ಲಿ ಹನುಮಾನ್ ಚಿತ್ರ ಮೂಡಿ ಬಂದಿದೆ.
ಒಟ್ಟು 75 ಸಾವಿರ ರೂಪಾಯಿ ವೆಚ್ಚದಲ್ಲಿ ಭಜರಂಗಿಗೆ ವಿದ್ಯುತ್ ದೀಪ ಅಳವಡಿಕೆ ಮಾಡಲಾಗಿದೆ. ಆಟೋಕ್ಯಾಡ್​ ತಂತ್ರಜ್ಞಾನ ಬಳಸಿ ವಿರಾಟ ಹನುಮನ ರೇಖಚಿತ್ರವನ್ನು ರಚನೆ ಮಾಡಲಾಗಿದೆ. ಈ ಒಂದು ಮಹಾಕಾರ್ಯಕ್ಕೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಕೂಡ ಸಹಕಾರ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಬೆಂಗಳೂರಿನ ಸಾಯಿಕ್ಯಾಡ್​ ಕಂಪನಿಯಿಂದ ಇದರ ಸಂಪೂರ್ಣ ವೆಚ್ಚ ಭರಿಸಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ, ಇದೇ ಊರಿನವರಾದ ಮಂಜುನಾಥ್ ರೆಡ್ಡಿ ಹಾಗೂ ಅವರ ಶ್ರೀಮತಿಯವರ ಇಚ್ಛಾಶಕ್ತಿಯಿಂದ ಇಂತಹದೊಂದು ಅದ್ಭುತ ಸೃಷ್ಟಿಯಾಗಿದೆ. ಇಲ್ಲೆ ಹುಟ್ಟಿ ಇಲ್ಲೇ ಬೆಳೆದು ಈಗ ಬೆಂಗಳೂರಿನಲ್ಲಿರುವ ದಂಪತಿಗಳು. ಅವರು ಇಲ್ಲಿ ಐದು ಎಕರೆ ಜಮೀನಿನಲ್ಲಿ ಹನುಮಾನ್ ರೇಖಾಚಿತ್ರವನ್ನು ಬಿಡಿಸಿದ್ದಾರೆ. ನಾನು ಇದೇ ಕ್ಷೇತ್ರದ ಶಾಸಕನಾಗಿ ಇದೇ ಹೊಬಳಿಯವನಾಗಿ ನನಗೆ ತುಂಬಾ ಸಂತೋಷ ನೀಡಿದೆ ಎಂದು ಹೇಳಿದ್ದಾರೆ.

ಇನ್ನು ಈ ಮಹಾಕಾರ್ಯಕ್ಕೆ ಮುಂದಾದ ಮಂಜುನಾಥ್ ರೆಡ್ಡಿಯವರು ಕೂಡ ಮಾತನಾಡಿ, ನಾವು ಮೂಲತಃ ಇದೇ ತುರುವನೂರು ಗ್ರಾಮದವರು, ನಾವು ಬೆಂಗಳೂರಿನಲ್ಲಿದ್ದರೂ ಕೂಡ ನಮ್ಮ ಊರಲ್ಲಿ ಆಂಜನೇಯನ ಜಾತ್ರೆ ಪ್ರತಿವರ್ಷ ನಡೆಯುತ್ತದೆ. ಈ ಜಾತ್ರೆಗೆ ವಿಶೇಷವಾಗಿ ಏನಾದರೂ ಮಾಡಬೇಕು ಅಂತ ಹಲವಾರು ವರ್ಷಗಳಿಂದ ಮನಸಲ್ಲಿ ತುಂಬಾನೇ ತುಡಿತವಿತ್ತು. ಕಳೆದ ಒಂದು ಒಂದೂವರೆ ವರ್ಷಗಳಿಂದ ಈ ಬಗ್ಗೆ ಕಾರ್ಯರೂಪಗಳನ್ನು ನಿರ್ಮಿಸಿಕೊಂಡು ಈಗ ಕಾರ್ಯರೂಪಕ್ಕೆ ತಂದಿದ್ದೇವೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

Source : https://newsfirstlive.com/world-biggest-hanuman-diagram-made-in-chitradurga

Leave a Reply

Your email address will not be published. Required fields are marked *