
ನವದೆಹಲಿ: ಪ್ರಯಾಗ್ರಾಜ್ನಲ್ಲಿ (Prayagraj) ನಡೆಯುತ್ತಿರುವ ಮಹಾಕುಂಭಕ್ಕೆ (Mahakumbha) ರೈಲು ಹತ್ತಲು ಯತ್ನಿಸಿದ ಪ್ರಯಾಣಿಕರ ಹಠಾತ್ ನೂಕು ನುಗ್ಗಲಿನಿಂದಾಗಿ ಶನಿವಾರ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ (New Delhi Railway Station) ಕಾಲ್ತುಳಿತ (Stampede) ಸಂಭವಿಸಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ.
ಅಧಿಕೃತ ಹೇಳಿಕೆಯಲ್ಲಿ, ರೈಲ್ವೇ ಸಚಿವಾಲಯವು “ದುರದೃಷ್ಟಕರ ಘಟನೆ” ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದೆ. ಪ್ರಯಾಣಿಕರ ಹಠಾತ್ ಹೆಚ್ಚಳದಿಂದ “ಪ್ಯಾನಿಕ್” ಅನ್ನು ಉಂಟುಮಾಡಿತು, ಇದರಿಂದ ನೂಕುನುಗ್ಗಲಾಗಿ ಪ್ರಯಾಣಿಕರು ಮೂರ್ಛೆ ಹೋಗುವಂತಾಗಿದೆ.
ರೈಲುಗಳ ವಿಳಂಬದಿಂದ ಜನಸಂದಣಿ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ಮಹಾಕುಂಭ ಮೇಳಕ್ಕೆ ತೆರಳುವ ರೈಲುಗಳನ್ನು ಹತ್ತಲು ಜನ ಜಮಾಯಿಸಿದ್ದರು. ಪ್ರಯಾಗ್ರಾಜ್ಗೆ ಹೋಗುವ ಇತರ ಎರಡು ರೈಲುಗಳಾದ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ವಿಳಂಬವಾದಾಗ ಪರಿಸ್ಥಿತಿ ಹದಗೆಟ್ಟಿತು, ಜನಸಂದಣಿಯನ್ನು ಮತ್ತಷ್ಟು ತೀವ್ರಗೊಳಿಸಿತು.
ಪ್ಲಾಟ್ಫಾರ್ಮ್ನಲ್ಲಿ ಜಮಾಯಿಸಿದ ಪ್ರಯಾಣಿಕರು
ಉಪ ಪೊಲೀಸ್ ಆಯುಕ್ತ (ಡಿಸಿಪಿ) ರೈಲ್ವೆ, ಕೆಪಿಎಸ್ ಮಲ್ಹೋತ್ರಾ ಮಾತನಾಡಿ, ಪ್ರಯಾಗ್ರಾಜ್ ಎಕ್ಸ್ಪ್ರೆಸ್ ಪ್ಲಾಟ್ಫಾರ್ಮ್ ಸಂಖ್ಯೆ 14 ರಲ್ಲಿ ನಿಂತಾಗ, ಸಾಕಷ್ಟು ಸಾರ್ವಜನಿಕರು ಪ್ಲಾಟ್ಫಾರ್ಮ್ನಲ್ಲಿ ಹಾಜರಿದ್ದರು. ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ವಿಳಂಬವಾಗಿದ್ದು, ಈ ರೈಲುಗಳ ಪ್ರಯಾಣಿಕರು ಕೂಡ ಪ್ಲಾಟ್ಫಾರ್ಮ್ ನಂ. 12,13 ಮತ್ತು 14 ರಲ್ಲಿ ಜಮಾಯಿಸಿದ್ದರು ಎಂದು ಮಲ್ಹೋತ್ರಾ ಹೇಳಿದರು.
ಭಯಾನಕ ಅನುಭವ ಬಿಚ್ಚಿಟ್ಟ ಕೂಲಿ
ಪ್ಲಾಟ್ಫಾರ್ಮ್ ಸಂಖ್ಯೆ 12 ರಿಂದ ಪ್ರಯಾಗ್ರಾಜ್ ವಿಶೇಷ ರೈಲು ಹೊರಡಲು ನಿರ್ಧರಿಸಲಾಗಿತ್ತು, ಆದರೆ ಅದನ್ನು ಪ್ಲಾಟ್ಫಾರ್ಮ್ ಸಂಖ್ಯೆ 16 ಕ್ಕೆ ಬದಲಾಯಿಸಲಾಗಿದೆ ಎಂದು ರೈಲ್ವೆ ನಿಲ್ದಾಣದ (ಎನ್ಡಿಎಲ್ಎಸ್) ಕೂಲಿ ಹೇಳಿದರು. ‘ಪ್ಲಾಟ್ಫಾರ್ಮ್ 12ರಲ್ಲಿ ಕಾಯುತ್ತಿರುವ ಜನಸಮೂಹ ಮತ್ತು ಹೊರಗೆ ಕಾಯುತ್ತಿದ್ದ ಜನಸಮೂಹವು ಪ್ಲಾಟ್ಫಾರ್ಮ್ 16 ಅನ್ನು ತಲುಪಲು ಪ್ರಯತ್ನಿಸಿದಾಗ, ಜನರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದು ಎಸ್ಕಲೇಟರ್ ಮತ್ತು ಮೆಟ್ಟಿಲುಗಳ ಮೇಲೆ ಬಿದ್ದರು. ಗುಂಪನ್ನು ತಡೆಯಲು ಹಲವಾರು ಕೂಲಿಗಳು ಅಲ್ಲಿ ಜಮಾಯಿಸಿದರು’ ಎಂದು ಅವರು ಹೇಳಿದರು. ನಾನು 1981 ರಿಂದ ಕೂಲಿಯಾಗಿ ಕೆಲಸ ಮಾಡುತ್ತಿದ್ದೇನೆ, ಆದರೆ ಈ ರೀತಿಯ ಗುಂಪನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ಕಾಲ್ತುಳಿತದ ಭಯಾನಕ ಅನುಭವವನ್ನು ವಿವರಿಸಿದರು.
ಅಧಿಕಾರಿಗಳು ಹೇಳಿದ್ದೇನು?
ಜನಸಂದಣಿಯನ್ನು ನಿರ್ವಹಿಸಲು ಪ್ಲಾಟ್ಫಾರ್ಮ್ 14 ಮತ್ತು 15ರಲ್ಲಿ ಒಂದು ಮೆಟ್ಟಿಲನ್ನು ನಿರ್ಬಂಧಿಸಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ರೈಲು ವಿಳಂಬ ಮುಂದುವರಿದಿದ್ದರಿಂದ ಹೆಚ್ಚಿನ ಪ್ರಯಾಣಿಕರು ಮೆಟ್ಟಿಲುಗಳ ಮೇಲೆ ಜಮಾಯಿಸಲಾರಂಭಿಸಿದರು. ಜನರು ರೈಲು ಹತ್ತಲು ಅಥವಾ ಮೆಟ್ಟಿಲುಗಳ ಕಡೆಗೆ ಚಲಿಸಲು ತಳ್ಳಿದರು. ‘ತಳ್ಳುವಿಕೆಯಿಂದ ಅನೇಕರು ಕೆಳಗೆ ಬಿದ್ದರು, ಇದು ಕಾಲ್ತುಳಿತವನ್ನು ಪ್ರಚೋದಿಸಿತು. ಪ್ಲಾಟ್ಫಾರ್ಮ್ನಲ್ಲಿ ಜನಸಂದಣಿ ಹೆಚ್ಚಾದಂತೆ ಇತರರಿಗೆ ಉಸಿರುಗಟ್ಟಿದಂತಾಯ್ತು’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಪ್ರತಿ ಗಂಟೆಗೆ 1,500 ಸಾಮಾನ್ಯ ಟಿಕೆಟ್ಗಳನ್ನು ಮಾರಾಟ ಮಾಡಲಾಯಿತು, ಇದರಿಂದ ನಿಲ್ದಾಣವು ಕಿಕ್ಕಿರಿದು ತುಂಬಿದ್ದು, ನಿಯಂತ್ರಿಸಲಾಗದಂತಾಯಿತು. ಪ್ಲಾಟ್ಫಾರ್ಮ್ ನಂ.14ರಲ್ಲಿ ಮತ್ತು ಪ್ಲಾಟ್ಫಾರ್ಮ್ ನಂ.16ರ ಎಸ್ಕಲೇಟರ್ ಬಳಿ ಕಾಲ್ತುಳಿತ ಸಂಭವಿಸಿತು” ಎಂದು ಪೊಲೀಸ್ ಉಪ ಆಯುಕ್ತರು (ರೈಲ್ವೆ) ಹೇಳಿದರು.