KPSC ಎಡವಟ್ಟು: ಸಿಎಂ ಸಿದ್ದರಾಮಯ್ಯಗೆ ಕನ್ನಡ ಪದಗಳ ಅರ್ಥ ಕೇಳಿದ ಕರವೇ.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ನಡೆಸಿದ ಕೆಎಎಸ್‌ ಮರುಪರೀಕ್ಷೆಯಲ್ಲೂ ಕನ್ನಡ ಪದಗಳ ಅನುವಾದವನ್ನು ತಪ್ಪಾಗಿ ಮಾಡಿರುವ ವಿಚಾರವಾಗಿ ಆಕ್ರೋಶ ಭುಗಿಲೆದ್ದಿದೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರು ಕೂಡ ಗರಂ ಆಗಿದ್ದು, ಪ್ರಶ್ನೆಪತ್ರಿಕೆಯಲ್ಲಿದ್ದ ಕನ್ನಡದ ತಪ್ಪು ಪದಗಳನ್ನು ಉಲ್ಲೇಖಿಸಿ ಅವುಗಳ ಅರ್ಥ ಹೇಳುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳಿದ್ದಾರೆ.

ಮುಖ್ಯಮಂತ್ರಿ ‌ಸಿದ್ದರಾಮಯ್ಯನವರೇ, ಕೆಪಿಎಸ್‌ಸಿ ಪರೀಕ್ಷೆಯ ಪ್ರಶ್ನೆಗಳಲ್ಲಿರುವ “ಉಪವೇಶನ, ಪುನರವ, ವೀಪರ್ಯ, ನೇಮಿತಗೊಳಿಸು, ಮೆಲವಿನ, ಅನುಪಾತನ” ಎಂಬ ಪದಗಳ ಅರ್ಥ ಏನು ಹೇಳಿ? ಎಂದು ಟಿ.ಎ.ನಾರಾಯಣ ಗೌಡರು ಕೇಳಿದ್ದಾರೆ. ಇವು ಕನ್ನಡ ಶಬ್ದಕೋಶದಲ್ಲೇ ಇಲ್ಲದ ದರಿದ್ರ ಪದಗಳು. ಇದು ಕನ್ನಡಿಗರನ್ನು ದೊಡ್ಡ ಹುದ್ದೆಗಳಿಂದ ದೂರ ಇಡಲು ನಡೆಸಿದ ಸಂಚಲ್ಲದೆ ಮತ್ತೇನು? ಎಂದು ಗುಡುಗಿದ್ದಾರೆ.

ಕೆಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ತಡೆಹಿಡಿಯಲು ಒತ್ತಾಯಿಸಿ ಒಂದು ದಿನದ ಎಕ್ಸ್ (ಟ್ವಿಟರ್) ಅಭಿಯಾನವನ್ನು ಸೋಮವಾರ ಸಂಜೆ 5 ಗಂಟೆಯಿಂದ ಮಂಗಳವಾರ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಎಲ್ಲ ಕನ್ನಡದ ಮನಸುಗಳು ಈ ಅಭಿಯಾನ ಬೆಂಬಲಿಸಿ ಎಂದು ಕೋರಿದ್ದಾರೆ. ಕೆಪಿಎಸ್‌ಸಿ ಪರೀಕ್ಷೆ ಬರೆದ ಎಲ್ಲ ಕನ್ನಡದ ಮನಸುಗಳು ಯಾವುದಕ್ಕೂ ಹೆದರಬೇಡಿ. ಧೈರ್ಯ ಕಳೆದುಕೊಳ್ಳಬೇಡಿ ನಿಮ್ಮ ಜೊತೆ ಕರವೇ ನಿಂತು ಹೋರಾಟ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತದೆ ಎಂದು ಭರವಸೆಯೂ ನೀಡಿದ್ದಾರೆ.

ಅಲ್ಲದೆ, ನಾರಾಯಣಗೌಡರ ನೇತೃತ್ವದಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಮಂಗಳವಾರ (ಫೆ.18) ಬೆಳಿಗ್ಗೆ 11 ಗಂಟೆಗೆ ಫ್ರೀಡಂಪಾರ್ಕ್‌ನಲ್ಲಿ ಹಮ್ಮಿಕೊಂಡಿದೆ.ಕೆಪಿಎಸ್‌ಸಿ ನಡೆಸಿರುವ ಕೆಎಎಸ್ ಪರೀಕ್ಷೆಗಳಲ್ಲಿ ಮತ್ತೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ‌ ಬೆಂಗಳೂರಿನಲ್ಲಿ ದೊಡ್ಡ ಹೋರಾಟವನ್ನು ಹಮ್ಮಿಕೊಂಡಿದ್ದು, ಅನ್ಯಾಯಕ್ಕೆ ಒಳಗಾದ ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ‌ ಎಂದಿದ್ದಾರೆ.

ಈ ಹಿಂದೆ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಾನುವಾದದ ಸಮಸ್ಯೆ ಕಂಡುಬಂದಿದ್ದರಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಚಳವಳಿ ಹಮ್ಮಿಕೊಂಡಿತ್ತು. ನಮ್ಮ ಚಳವಳಿಗೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ ಅವರು ಮರುಪರೀಕ್ಷೆಗೆ ಆದೇಶಿಸಿದ್ದರು. ಆದರೆ ಮರುಪರೀಕ್ಷೆಯಲ್ಲೂ ಕನ್ನಡಾನುವಾದದ ಸಮಸ್ಯೆ ಕಂಡುಬಂದಿದೆ. ನಾವು ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಅದನ್ನು ಇಂಗ್ಲಿಷ್‌ಗೆ ಅನುವಾದಿಸುವಂತೆ ಆಗ್ರಹಿಸಿದ್ದೆವು. ಕರ್ನಾಟಕದ ಆಡಳಿತ ಭಾಷೆ ಕನ್ನಡವಾದ್ದರಿಂದ ಇದೇ ಸಹಜವಾಗಿ ನಡೆಯಬೇಕು. ಆದರೆ ದುರಂಹಕಾರಿ ಅಧಿಕಾರಿಗಳಿಂದಾಗಿ ಮತ್ತೆ ಇಂಗ್ಲಿಷ್‌ನಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ, ಕನ್ನಡಕ್ಕೆ ತಪ್ಪಾಗಿ ಅನುವಾದಿಸಲಾಗಿದೆ. ಇದರಿಂದಾಗಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಂಚನೆ ಎಸಗಲಾಗಿದೆ ಎಂದು ದೂರಿದ್ದಾರೆ.

ಫಲಿತಾಂಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತೀರಾ ಕನಿಷ್ಟ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕೆಟ್ಟದಾಗಿ ಸಿದ್ಧಪಡಿಸಿದ ಕನ್ನಡಾನುವಾದದ ಪ್ರಶ್ನೆ ಪತ್ರಿಕೆಗಳೇ ಕಾರಣ ಎಂದು‌ ಗೊತ್ತಾಗಿದೆ. ಇವರೆಲ್ಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸಾಮಾಜಿಕವಾಗಿ ಹಿಂದುಳಿದ ಜನವರ್ಗಗಳಿಂದ ಬಂದವರಾಗಿದ್ದು, ಇಂಥವರಿಗೆ ಅನ್ಯಾಯವಾಗುತ್ತಿದ್ದರೂ ಸರ್ಕಾರ ಮೌನವಾಗಿ ಕುಳಿತುಕೊಳ್ಳಲು ಹೇಗೆ ಸಾಧ್ಯ? ಎಂದು ಗುಡುಗಿದ್ದಾರೆ.

Leave a Reply

Your email address will not be published. Required fields are marked *