Australia vs England: ಚಾಂಪಿಯನ್ಸ್ ಟ್ರೋಫಿಯ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 50 ಓವರ್ಗಳಲ್ಲಿ 351 ರನ್ ಕಲೆಹಾಕಿದರೆ, ಆಸ್ಟ್ರೇಲಿಯಾ ತಂಡ ಈ ಗುರಿಯನ್ನು ಕೇವಲ 47.3 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಗೆಲುವಿನೊಂದಿಗೆ ಆಸೀಸ್ ಪಡೆ ಐಸಿಸಿ ಟೂರ್ನಿಯಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

ಒಂದು ಪಂದ್ಯ 2 ವಿಶ್ವ ದಾಖಲೆಗಳು. ಮೊದಲ ದಾಖಲೆ ನಿರ್ಮಾಣವಾಗಿ ಗಂಟೆಗಳು ಕಳೆಯುವಷ್ಟರಲ್ಲಿ ಎದುರಾಳಿ ತಂಡ ಆ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದರು. ಇಂತಹದೊಂದು ಅಪರೂಪದ ವಿಶ್ವ ದಾಖಲೆಗಳು ನಿರ್ಮಾಣವಾಗಿದ್ದು ಚಾಂಪಿಯನ್ಸ್ ಟ್ರೋಫಿಯ 4ನೇ ಪಂದ್ಯದಲ್ಲಿ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರ ಬೆನ್ ಡಕೆಟ್ (165) ಭರ್ಜರಿ ಶತಕ ಸಿಡಿಸಿದರು.
ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್ 68 ರನ್ಗಳ ಕೊಡುಗೆ ನೀಡಿದರೆ, ನಾಯಕ ಜೋಸ್ ಬಟ್ಲರ್ 23 ರನ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 351 ರನ್ ಕಲೆಹಾಕಿತು.
ಇದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಗರಿಷ್ಠ ಸ್ಕೋರ್. ಇದಕ್ಕೂ ಮುನ್ನ 2004ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಯುಎಸ್ಎ ವಿರುದ್ಧ ನ್ಯೂಝಿಲೆಂಡ್ 347 ರನ್ ಬಾರಿಸಿದ್ದು ವಿಶ್ವ ದಾಖಲೆಯಾಗಿತ್ತು.
352 ರನ್ಗಳ ಕಠಿಣ ಗುರಿ:
352 ರನ್ಗಳ ಬೃಹತ್ ಮೊತ್ತದ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಮ್ಯಾಥ್ಯೂ ಶಾರ್ಟ್ (63) ಉತ್ತಮ ಆರಂಭ ಒದಗಿಸಿದ್ದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ನಸ್ ಲಾಬುಶೇನ್ 47 ರನ್ ಬಾರಿಸಿದರು.
ಆದರೆ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೋಶ್ ಇಂಗ್ಲಿಸ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಸ್ಪೋಟಕ ಇನಿಂಗ್ಸ್ ಆಡಿದ ಜೋಶ್ ಇಂಗ್ಲಿಸ್ ಕೇವಲ 86 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 120 ರನ್ ಬಾರಿಸಿದರು.
ಜೋಶ್ ಇಂಗ್ಲಿಸ್ಗೆ ಉತ್ತಮ ಸಾಥ್ ನೀಡಿದ ಅಲೆಕ್ಸ್ ಕ್ಯಾರಿ 69 ರನ್ ಬಾರಿಸಿದರೆ, ಆ ಬಳಿಕ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ 15 ಎಸೆತಗಳಲ್ಲಿ 32 ರನ್ ಚಚ್ಚಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 47.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 356 ರನ್ ಕಲೆಹಾಕಿತು.
ವಿಶ್ವ ದಾಖಲೆ ಮುರಿದ ಆಸ್ಟ್ರೇಲಿಯಾ:
ಮೊದಲ ಇನಿಂಗ್ಸ್ನಲ್ಲಿ 351 ರನ್ ಬಾರಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ಸ್ಕೋರ್ಗಳಿಸಿದ ವಿಶ್ವ ದಾಖಲೆ ಬರೆದಿದ್ದ ಇಂಗ್ಲೆಂಡ್ ತಂಡದ ದಾಖಲೆಯನ್ನು ಆಸ್ಟ್ರೇಲಿಯನ್ನರು ಗಂಟೆಗಳ ಅಂತರದಲ್ಲಿ ಮುರಿದರು. ಅದು ಕೂಡ 356 ರನ್ಗಳನ್ನು ಸಿಡಿಸುವ ಮೂಲಕ.
ಅಷ್ಟೇ ಅಲ್ಲದೆ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಸಹ ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ 2023 ರ ಏಕದಿನ ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ್ 345 ರನ್ ಚೇಸ್ ಮಾಡಿ ಗೆದ್ದಿದ್ದು ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ಇಂಗ್ಲೆಂಡ್ ನೀಡಿದ 352 ರನ್ಗಳ ಗುರಿಯನ್ನು ಬೆನ್ನತ್ತಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡ ಹೊಸ ಇತಿಹಾಸ ನಿರ್ಮಿಸಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ , ಟ್ರಾವಿಸ್ ಹೆಡ್ , ಸ್ಟೀವ್ ಸ್ಮಿತ್ (ನಾಯಕ) , ಮಾರ್ನಸ್ ಲಾಬುಶೇನ್ , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಅಲೆಕ್ಸ್ ಕ್ಯಾರಿ , ಗ್ಲೆನ್ ಮ್ಯಾಕ್ಸ್‌ವೆಲ್ , ಬೆನ್ ದ್ವಾರ್ಶುಯಿಸ್ , ನಾಥನ್ ಎಲ್ಲಿಸ್ , ಆ್ಯಡಂ ಝಂಫಾ , ಸ್ಪೆನ್ಸರ್ ಜಾನ್ಸನ್.
ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ , ಬೆನ್ ಡಕೆಟ್ , ಜೇಮೀ ಸ್ಮಿತ್ (ವಿಕೆಟ್ ಕೀಪರ್) , ಜೋ ರೂಟ್ , ಹ್ಯಾರಿ ಬ್ರೂಕ್ , ಜೋಸ್ ಬಟ್ಲರ್ (ನಾಯಕ) , ಲಿಯಾಮ್ ಲಿವಿಂಗ್‌ಸ್ಟೋನ್ , ಬ್ರೈಡನ್ ಕಾರ್ಸೆ , ಜೋಫ್ರಾ ಆರ್ಚರ್ , ಆದಿಲ್ ರಶೀದ್ , ಮಾರ್ಕ್ ವುಡ್.