India vs Pakistan: ಏಕದಿನ ಕ್ರಿಕೆಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಈವರೆಗೆ 135 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 57 ಮ್ಯಾಚ್ಗಳಲ್ಲಿ ಮಾತ್ರ. ಇನ್ನು ಪಾಕಿಸ್ತಾನ್ 73 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಸೋಲುಣಿಸಿದೆ. ಇನ್ನು ಐದು ಪಂದ್ಯಗಳು ಫಲಿತಾಂಶರಹಿತವಾಗಿತ್ತು.

ಕ್ರಿಕೆಟ್ ಅಂಗಳದ ಮಹಾ ಸಮರಕ್ಕೆ ಕೌಂಟ್ ಡೌನ್ ಶುರುವಾಗಿದೆ. ಭಾನುವಾರ (ಫೆ.23) ಮಧ್ಯಾಹ್ನ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಜಿದ್ದಾಜಿದ್ದಿನ ಕದನವನ್ನು ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಗೆದ್ದರೆ ಸೆಮಿಫೈನಲ್ಗೇರುವುದು ಬಹುತೇಕ ಖಚಿತವಾಗಲಿದೆ. ಅತ್ತ ಪಾಕಿಸ್ತಾನ್ ತಂಡ ಸೋತರೆ ಟೂರ್ನಿಯಿಂದಲೇ ಹೊರಬೀಳಲಿದೆ. ಹೀಗಾಗಿ ಪಾಕ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.
ಉಭಯ ತಂಡಗಳ ಮುಖಾಮುಖಿ:
ಭಾರತ ಮತ್ತು ಪಾಕಿಸ್ತಾನ್ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 135 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡ ಗೆದ್ದಿರುವುದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಪಾಕಿಸ್ತಾನ್ ತಂಡವೇ ಗೆದ್ದಿದೆ. ಅದರಲ್ಲೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಭಾರತದ ವಿರುದ್ಧ ಪಾಕ್ ಪಡೆ ಹೆಚ್ಚಿನ ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ.
ಅಂದರೆ 135 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕೇವಲ 57 ಮ್ಯಾಚ್ಗಳಲ್ಲಿ ಮಾತ್ರ ಗೆದ್ದರೆ, ಅತ್ತ ಪಾಕಿಸ್ತಾನ್ 73 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಸೋಲುಣಿಸಿದೆ. ಇನ್ನು ಐದು ಪಂದ್ಯಗಳು ಫಲಿತಾಂಶರಹಿತವಾಗಿತ್ತು.
ಇನ್ನು ಭಾರತ ಮತ್ತು ಪಾಕಿಸ್ತಾನ್ ನಡುವಣ ಕೊನೆಯ ಐದು ಏಕದಿನ ಪಂದ್ಯಗಳ ಫಲಿತಾಂಶವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಟೀಮ್ ಇಂಡಿಯಾವೇ ಬಲಿಷ್ಠ. ಏಕೆಂದರೆ 2018 ರಿಂದ ಭಾರತದ ವಿರುದ್ಧ ಪಾಕಿಸ್ತಾನ್ ತಂಡವು ಒಂದೇ ಒಂದು ಏಕದಿನ ಪಂದ್ಯ ಗೆದ್ದಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತ ತಂಡವೇ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ.
ಎಷ್ಟು ಗಂಟೆಗೆ ಪಂದ್ಯ ಶುರು?
ಈ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2.30 ರಿಂದ ಶುರುವಾಗಲಿದೆ. ಇದಕ್ಕೂ ಮುನ್ನ 2 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಈ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್ಸ್ಟಾರ್ ಆ್ಯಪ್ ಹಾಗೂ ವೈಬ್ಸೈಟ್ಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
ಉಭಯ ತಂಡಗಳು:
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.
ಪಾಕಿಸ್ತಾನ್: ಮೊಹಮ್ಮದ್ ರಿಝ್ವಾನ್ (ನಾಯಕ), ಬಾಬರ್ ಆಝಂ, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶ್ದಿಲ್ ಶಾ, ಸಲ್ಮಾನ್ ಅಲಿ ಅಘಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಾಹಿನ್ ಶಾ ಅಫ್ರಿದಿ, ಇಮಾಮ್ ಉಲ್ ಹಕ್.