ಹಾವೇರಿ ಜಿಲ್ಲೆಯಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ. ಇಂದು ನಗರದಲ್ಲಿ 33 ಸೆಕೆಂಡ್ಗಳಲ್ಲಿ 33 ಲಕ್ಷ ರೂ ಕಳ್ಳರು ದೋಚಿದ ಘಟನೆ ನಡೆದಿದೆ. ಕಾರಿನ ಗಾಜು ಒಡೆದು ಹಣವನ್ನು ಕದ್ದಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ತಂಡಗಳನ್ನು ರಚಿಸಿ ಕಳ್ಳರನ್ನು ಹಿಡಿಲು ಜಾಲ ಬೀಸಿದ್ದಾರೆ.

ಹಾವೇರಿ, ಮಾರ್ಚ್ 07: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಳ್ಳತನ (robbery) ಪ್ರಕರಣಗಳು ಹೆಚ್ಚಾಗುತ್ತಿವೆ. ಬೈಕ್, ಮಾಂಗಲ್ಯ ಸರ ಸೇರಿದಂತೆ ಮನೆಗಳ್ಳತನಕ್ಕೆ ಸಾಕಷ್ಟು ಯತ್ನಗಳು ನಡೆದಿದೆ. ಆದರೆ ಹಾಡಹಗಲೇ 33 ಸೆಕೆಂಡ್ನಲ್ಲಿ 33 ಲಕ್ಷ ರೂ. ಹಣವನ್ನು ಖತರ್ನಾಕ್ ಕಳ್ಳರು ಎಗರಿಸಿರುವಂತಹ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ. ಸದ್ಯ ಕಳ್ಳರ ಕೃತ್ಯಕ್ಕೆ ಹಾವೇರಿಯ (Havari) ಜನರು ಅಕ್ಷರಶಃ ಬೆಚ್ಚಿಬಿದಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನ ಗಾಜು ಒಡೆದು ಕಳ್ಳತನ
ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 33 ಸೆಕೆಂಡ್ನಲ್ಲಿ ಕಾರಿನಲ್ಲಿದ್ದ 33 ಲಕ್ಷ ರೂ ಹಣವನ್ನು ಖದೀಮರು ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ. ನಗರದ ಬಸವೇಶ್ವರ ನಗರದ ಹತ್ತನೇ ಕ್ರಾಸಿನಲ್ಲಿರುವ ಸಂತೋಷ ಹಿರೇಮಠ ಎಂಬುವರಿಗೆ ಸೇರಿದ ಹಣ ಕಳ್ಳತನವಾಗಿದೆ. ಸಿವಿಲ್ ಕಾಂಟ್ರ್ಯಾಕ್ಟರ್ ಆಗಿರುವ ಸಂತೋಷ, ಹಾವೇರಿಯ ಯೂನಿಯನ್ ಬ್ಯಾಂಕ್ ಇಂಡಿಯಾದಲ್ಲಿ ದೈನಂದಿನ ವ್ಯವಹಾರಕ್ಕಾಗಿ 33 ಲಕ್ಷ ರೂ ಹಣವನ್ನು ಸಂಬಂಧಿಕರ ಖಾತೆಗಳಿಂದ ಚೆಕ್ ಮುಖಾಂತರ ಹಣ ಡ್ರಾ ಮಾಡಿಕೊಂಡು ಕಾರಿನ ಹಿಂಭಾಗದ ಸೀಟಿನಲ್ಲಿ ಹಣ ಇಟ್ಟುಕೊಂಡು ಬಂದಿದ್ದರು.
ನಾಲ್ಕು ಗಂಟೆ ಐದು ನಿಮಿಷಕ್ಕೆ ಮನೆ ಮುಂದೆ ಕಾರು ನಿಲ್ಲಿಸಿ, ಕಾರಿನಲ್ಲಿ ಹಣ ಬಿಟ್ಟು ಮನೆಯೊಳಗೆ ಹೋಗಿದ್ದರು. ಮನೆಯಲ್ಲಿ ಊಟ ಮಾಡಿ ವಿಶ್ರಾಂತಿ ಮುಗಿಸಿ ವಾಪಸ್ ಸಂಜೆ 5:20 ನಿಮಿಷಕ್ಕೆ ಕಾರಿನ ಹತ್ತಿರ ಬಂದು ನೋಡಿದಾಗ ಕಾರಿನ ಗ್ಲಾಸ್ ಒಡೆದು ಹಣ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಇನ್ನು ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಎರಡು ಬೈಕ್ಗಳಲ್ಲಿ ಬಂದಿದ್ದ ನಾಲ್ವರ ಗ್ಯಾಂಗ್ನಲ್ಲಿ ಒಬ್ಬ ಕಾರಿನ ಬಳಿ ಸುತ್ತಾಡಿ, ಕಾರಿನ ಗ್ಲಾಸ್ ಒಡೆದು, ಕಾರಿನ ಒಳಹೊಕ್ಕು ಹಣವಿದ್ದ ಬ್ಯಾಗ್ ತೆಗೆದುಕೊಂಡಿದ್ದಾನೆ. ನಂತರ ಬೈಕ್ನಲ್ಲಿ ಬಂದ ಮತ್ತೊಬ್ಬ ಖದೀಮ ಆತನನ್ನು ಕರೆದುಕೊಂಡು ಪರಾರಿ ಆಗಿದ್ದಾನೆ. ಖದೀಮರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್ಪಿ, ಹೆಚ್ಚುವರಿ ಎಸ್ಪಿ ಹಾಗೂ ಪೊಲೀಸರು, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಅಂಶುಕುಮಾರ ಹೇಳಿದ್ದಾರೆ.
ಹಾಡಹಗಲೇ ಕಳ್ಳರ ಗ್ಯಾಂಗ್ ಬರೋಬ್ಬರಿ 33 ಲಕ್ಷ ರೂ ದೋಚಿಕೊಂಡು ಪರಾರಿಯಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮೂರು ತಂಡ ರಚನೆ ಮಾಡಿದ್ದು ಖರ್ತನಾಕ ಕಳ್ಳರನ್ನ ಹಿಡಿಲು ಜಾಲ ಬೀಸಿದ್ದಾರೆ.