Fact Check: ಏಪ್ರಿಲ್ 1, 2025 ರಿಂದ ದೇಶದಲ್ಲಿ ಎಲ್ಲ ಬ್ಯಾಂಕ್​ಗಳ ಯುಪಿಐ ವಹಿವಾಟುಗಳು ಸ್ಥಗಿತ?

ಬೆಂಗಳೂರು, ಮಾ. 11 : ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಹೊರಡಿಸಿದ ಹೊಸ ಮಾರ್ಗಸೂಚಿಗಳನ್ನು ಉಲ್ಲೇಖಿಸಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಏಪ್ರಿಲ್ 1, 2025 ರಿಂದ ಅಂದರೆ ಮುಂದಿನ ಹಣಕಾಸು ವರ್ಷದ ಆರಂಭದಿಂದ ಎಲ್ಲಾ ಬ್ಯಾಂಕ್‌ಗಳು ಯುಪಿಐ ಸೇವೆಯನ್ನು ನಿಲ್ಲಿಸಲಿವೆ ಎಂದು ಹೇಳುವ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಅಂದರೆ ಏಪ್ರಿಲ್ 1, 2025 ರಿಂದ ಗ್ರಾಹಕರು ಯುಪಿಐ ಸೇವೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಫೋನ್ ಪೇ, ಗೂಗಲ್ ಪೇ ಯಾವುದೇ ಯುಪಿಐ ಆ್ಯಪ್ ವರ್ಕ್ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ‘‘ಏಪ್ರಿಲ್ 1, 2025 ರಿಂದ ಎಲ್ಲಾ ಬ್ಯಾಂಕ್‌ಗಳು ಯುಪಿಐ ಅನ್ನು ಸ್ಥಗಿತಗೊಳಿಸಲಿವೆ’’ ಎಂದು ಬರೆದುಕೊಂಡಿದ್ದಾರೆ.

ಯುಪಿಐ ವಹಿವಾಟು ನಿಜಕ್ಕೂ ಸ್ಥಗಿತವಾಗುತ್ತಾ?:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋದಿಸಿದಾಗ ಈ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದೆ. ಏಪ್ರಿಲ್ 1, 2025 ರಿಂದ UPI ವಹಿವಾಟುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಗ್ರಾಹಕರು ಈ ಸೇವೆಯನ್ನು ಮೊದಲಿನಂತೆಯೇ ಬಳಸುವುದನ್ನು ಮುಂದುವರಿಸುತ್ತಾರೆ. ಆದಾಗ್ಯೂ, ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ, ಅದರ ಪ್ರಕಾರ ಬ್ಯಾಂಕುಗಳು ಈಗ ಮುಚ್ಚಲ್ಪಟ್ಟ ಅಥವಾ ಹೊಸ ಬಳಕೆದಾರರಿಗೆ ಹಂಚಿಕೆಯಾದ ಮೊಬೈಲ್ ಸಂಖ್ಯೆಗಳನ್ನು ನಿಯಮಿತವಾಗಿ ಅಳಿಸಬೇಕಾಗುತ್ತದೆ. ಯುಪಿಐ ವಹಿವಾಟುಗಳಲ್ಲಿ ದೋಷಗಳನ್ನು ತಡೆಗಟ್ಟುವಲ್ಲಿ ಎನ್‌ಪಿಸಿಐನ ಈ ಮಾರ್ಗಸೂಚಿ ಸಹಾಯಕವಾಗಿದೆ.

ಫೆಬ್ರವರಿ 25 ರಂದು, ಯುಪಿಐ ಮೂಲಕ 22 ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ವಹಿವಾಟುಗಳು ನಡೆದಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ( NPCI ) UPI (ಏಕೀಕೃತ ಪಾವತಿ ಇಂಟರ್ಫೇಸ್) ಅನ್ನು ನಿರ್ವಹಿಸುತ್ತದೆ ಮತ್ತು ಫೆಬ್ರವರಿ 2025 ರ ದತ್ತಾಂಶದ ಪ್ರಕಾರ, ಒಟ್ಟು 652 ಬ್ಯಾಂಕುಗಳು ಈ ಇಂಟರ್ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ಸೇವೆಯನ್ನು ಸ್ಥಗಿತಗೊಳಿಸುವುದಾದರೆ ಅದು ದೊಡ್ಡ ಸುದ್ದಿಯಾಗುತ್ತಿತ್ತು, ಆದರೆ ಹೊಸ ಹಣಕಾಸು ವರ್ಷದ ಆರಂಭದಿಂದ UPI ಅನ್ನು ಸ್ಥಗಿತಗೊಳಿಸುವ ಬಗ್ಗೆ ಉಲ್ಲೇಖಿಸಲಾದ ಸುದ್ದಿ ವರದಿಗಳಲ್ಲಿ ನಮಗೆ ಕಂಡುಬಂದಿಲ್ಲ. ಈ ಸೇವೆಯನ್ನು ಸ್ಥಗಿತಗೊಳಿಸುವ ಕುರಿತು NPCI ವೆಬ್‌ಸೈಟ್‌ನಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.

ಆದಾಗ್ಯೂ, ಹುಡುಕಾಟದ ಸಮಯದಲ್ಲಿ, NPCI ಬ್ಯಾಂಕುಗಳಿಗೆ ನೀಡಿದ ಹೊಸ ಮಾರ್ಗಸೂಚಿಗಳನ್ನು ಉಲ್ಲೇಖಿಸುವ ಅನೇಕ ವರದಿಗಳು ಕಂಡುಬಂದಿವೆ. ಸುದ್ದಿ ವರದಿಗಳ ಪ್ರಕಾರ, ‘‘ಯುಪಿಐ ವಹಿವಾಟುಗಳ ಸುರಕ್ಷತೆಗಾಗಿ NPCI ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ. ಈ ನಿಯಮಗಳ ಅಡಿಯಲ್ಲಿ, ಬ್ಯಾಂಕ್‌ಗಳು ಮತ್ತು ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಂನಂತಹ ಪಾವತಿ ಸೇವಾ ಪೂರೈಕೆದಾರರು ರದ್ದಾದ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ ಸಲ್ಲಿಸಬೇಕಾಗುತ್ತದೆ. ಇದು ಅನರ್ಹ ಅಥವಾ ರದ್ದಾದ ಮೊಬೈಲ್ ಸಂಖ್ಯೆಗಳನ್ನು ತೆಗೆದುಹಾಕುತ್ತದೆ. ಇದರರ್ಥ ಬ್ಯಾಂಕಿಗೆ ಲಿಂಕ್ ಮಾಡಲಾದ ಮತ್ತು ಬಳಕೆಯಲ್ಲಿಲ್ಲದ ಸಂಖ್ಯೆಗಳನ್ನು ಅಳಿಸಲಾಗುತ್ತದೆ. 1 ಮೊಬೈಲ್ ಸಂಖ್ಯೆಯನ್ನು 2 ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿರುವ ಮತ್ತು ಆ ಮೊಬೈಲ್ ಸಂಖ್ಯೆಯನ್ನು ಒಂದೇ ಬ್ಯಾಂಕಿನೊಂದಿಗೆ ಬಳಸುವುದನ್ನು ಮುಂದುವರಿಸದ ಗ್ರಾಹಕರಿಗೂ ಇದು ಅನ್ವಯಿಸುತ್ತದೆ’’ ಎಂದು ವರದಿಯಲ್ಲಿದೆ.

ಈ ಸುತ್ತೋಲೆಯು NPCI ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅದರ ಪ್ರಕಾರ, ಈ ಮಾರ್ಗಸೂಚಿಯನ್ನು ಮಾರ್ಚ್ 31, 2025 ರೊಳಗೆ ಜಾರಿಗೆ ತರಲು ಕೇಳಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಏಪ್ರಿಲ್ 1, 2025 ರಿಂದ UPI ಅನ್ನು ಸ್ಥಗಿತಗೊಳಿಸಲಾಗಿದೆ ಎಂಬ ಹೇಳಿಕೆ ಸುಳ್ಳು ಮತ್ತು ಕಟ್ಟುಕಥೆ. ಯುಪಿಐ ಸೇವೆಯನ್ನು ಉತ್ತಮ ಮತ್ತು ಸುರಕ್ಷಿತವಾಗಿಸಲು ಎನ್‌ಪಿಸಿಐ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

Source : https://tv9kannada.com/national/fact-check-upi-transactions-of-all-banks-in-the-country-be-suspended-from-april-1-2025-no-this-is-fake-news-vb-989483.html

Leave a Reply

Your email address will not be published. Required fields are marked *