India Masters Wins International Masters League T20 Final: ರಾಯ್ಪುರದಲ್ಲಿ ನಡೆದ ಅಂತರರಾಷ್ಟ್ರೀಯ ಮಾಸ್ಟರ್ಸ್ ಲೀಗ್ ಟಿ20 ಪಂದ್ಯಾವಳಿಯ ಫೈನಲ್ನಲ್ಲಿ ಭಾರತ ಮಾಸ್ಟರ್ಸ್ ತಂಡವು ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 147 ರನ್ ಗಳಿಸಿತು. ಈ ಗುರಿ ಬೆನ್ನಟಿದ ಭಾರತ ಮಾಸ್ಟರ್ಸ್ ತಂಡವು 17 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು. ಈ ಗೆಲುವಿನೊಂದಿಗೆ ಭಾರತ ಮಾಸ್ಟರ್ಸ್ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (International Masters League) ಟಿ20 ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವನ್ನು ಇಂಡಿಯಾ ಮಾಸ್ಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಉಭಯ ತಂಡಗಳ ನಡುವೆ ನಡೆದ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಡಿಯಾ ಮಾಸ್ಟರ್ಸ್ ಇನ್ನು 17 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.
ವಿಂಡೀಸ್ ಪೆವಿಲಿಯನ್ ಪರೇಡ್
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಮಾಸ್ಟರ್ಸ್ ಪರ ಲೆಂಡ್ಲ್ ಸಿಮನ್ಸ್ ಅತಿ ಹೆಚ್ಚು ರನ್ ಗಳಿಸಿದರು. ಸಿಮನ್ಸ್ 41 ಎಸೆತಗಳಲ್ಲಿ 139.02 ಸ್ಟ್ರೈಕ್ ರೇಟ್‌ನಲ್ಲಿ 57 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಸಿಮನ್ಸ್ 1 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿದರು. ಇವರಲ್ಲದೆ, ಆರಂಭಿಕ ಆಟಗಾರ ಡ್ವೇನ್ ಸ್ಮಿತ್ 2 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 45 ರನ್ ಗಳಿಸಿದರು. ವಿಕೆಟ್ ಕೀಪರ್ ದಿನೇಶ್ ರಾಮ್ದಿನ್ ಅಜೇಯ 12 ರನ್ ಗಳಿಸಿದರು. ಈ ಮೂವರನ್ನು ಹೊರತುಪಡಿಸಿ, ಯಾರೂ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ನಾಯಕ ಬ್ರಿಯಾನ್ ಲಾರಾ, ವಿಲಿಯಂ ಪರ್ಕಿನ್ಸ್ ಮತ್ತು ಚಾಡ್ವಿಕ್ ವಾಲ್ಟನ್ ತಲಾ 6 ರನ್ ಗಳಿಸಿದರೆ, ರವಿ ರಾಂಪಾಲ್ 2 ರನ್ ಕೊಡುಗೆ ನೀಡಿದರು. ಆಶ್ಲೇ ನರ್ಸ್ 1 ರನ್ ಗಳಿಸಿದರು.
ಮಿಂಚಿದ ವಿನಯ್ ಕುಮಾರ್
ಇಂಡಿಯಾ ಮಾಸ್ಟರ್ಸ್ ಪರ ಒಟ್ಟು 6 ಜನರು ಬೌಲಿಂಗ್ ಮಾಡಿದರು. ಆದರೆ ಇರ್ಫಾನ್ ಪಠಾಣ್ ಮತ್ತು ಧವಲ್ ಕುಲಕರ್ಣಿ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಉಳಿದಂತೆ ವಿನಯ್ ಕುಮಾರ್ 3 ವಿಕೆಟ್ ಪಡೆದರೆ, ಶಾದಾಬ್ ನದೀಮ್ 2 ವಿಕೆಟ್ ಪಡೆದರೆ, ಪವನ್ ನೇಗಿ ಮತ್ತು ಸ್ಟುವರ್ಟ್ ಬಿನ್ನಿ ತಲಾ 1 ವಿಕೆಟ್ ಪಡೆದರು.
ಅಂಬಾಟಿ ಆರ್ಭಟ, ಭಾರತಕ್ಕೆ ಗೆಲುವು
148 ರನ್ಗಳ ಗುರಿ ಬೆನ್ನಟ್ಟಿದ ಇಂಡಿಯಾ ಮಾಸ್ಟರ್ಸ್ ಪರ ಅಂಬಾಟಿ ರಾಯುಡು ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ರಾಯುಡು 50 ಎಸೆತಗಳಲ್ಲಿ 148 ಸ್ಟ್ರೈಕ್ ರೇಟ್‌ನಲ್ಲಿ 74 ರನ್ ಗಳಿಸಿದರು. ರಾಯುಡು ಅವರ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳು ಸೇರಿದ್ದವು. ಅವರನ್ನು ಹೊರತುಪಡಿಸಿ ನಾಯಕ ಸಚಿನ್ ತೆಂಡೂಲ್ಕರ್ 18 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿಗಳೊಂದಿಗೆ 25 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಗುರುಕಿರತ್ ಸಿಂಗ್ ಮಾನ್ 14 ರನ್ಗಳ ಕಾಣಿಕೆ ನೀಡಿದರೆ, ಯೂಸುಫ್ ಪಠಾಣ್‌ಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಯುವರಾಜ್ ಸಿಂಗ್ (13 ರನ್) ಮತ್ತು ಸ್ಟುವರ್ಟ್ ಬಿನ್ನಿ (16 ರನ್) ಜೋಡಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದಿತು.