9 ತಿಂಗಳ ಬಳಿಕ ಭೂ ತಾಯಿಯನ್ನು ಸ್ಪರ್ಶಿಸಲು ಸುನೀತಾ, ಬುಚ್​ ಕಾತರ: ಅಪರೂಪದ ಕ್ಷಣಗಳನ್ನು LIVE​ನಲ್ಲಿ ನೋಡಿ!

Sunita Williams Live Updates: ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇಬ್ಬರೂ ಮಾರ್ಚ್ 18ರಂದು ಅಂದ್ರೆ ಮಂಗಳವಾರ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ(NASA) ಭಾನುವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿದೆ. ಇಬ್ಬರೂ ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದ್ದು, ಈ ಕ್ಷಣಗಳನ್ನು ನಾಸಾ ನೇರಪ್ರಸಾರ ಮಾಡಲಿದೆ. ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಅನ್ನು ಮುಚ್ಚುವ ಸಿದ್ಧತೆಗಳೊಂದಿಗೆ ನೇರಪ್ರಸಾರ ಪ್ರಾರಂಭವಾಗುತ್ತದೆ. ಈ ನಿಟ್ಟಿನಲ್ಲಿ ಬಹುತೇಕ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ರಾಫ್ಟ್‌ ಮೂಲಕ ಮರಳಿ ಕರೆತರಲಾಗುವುದು. ಇದಕ್ಕಾಗಿ ಡ್ರ್ಯಾಗನ್ ಕ್ರಾಫ್ಟ್ ಈಗಾಗಲೇ ISS ತಲುಪಿದೆ. ಗಗನಯಾತ್ರಿಗಳನ್ನು ಹೊತ್ತ ಬಾಹ್ಯಾಕಾಶ ನೌಕೆ ಮಂಗಳವಾರ ಸಂಜೆ 5:57ರ ಸುಮಾರಿಗೆ (ಭಾರತದಲ್ಲಿ ಮಾರ್ಚ್ 19 ಬುಧವಾರ ಬೆಳಗಿನ ಜಾವ 3:27) ಫ್ಲೋರಿಡಾ ಕರಾವಳಿಗೆ ಆಗಮಿಸಲಿದೆ ಎಂದು ನಾಸಾ ತಿಳಿಸಿದೆ.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಕಳೆದ ವರ್ಷದ ಜೂನ್‌ನಲ್ಲಿ ತಮ್ಮ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದರು. ಅವರ ಸ್ಟಾರ್‌ಲೈನರ್ ನೌಕೆ ಅಸಮರ್ಪಕವಾಗಿ ಕಾರ್ಯನಿರ್ವಹಿಸಿತ್ತು. ಹೀಗಾಗಿ ಇಬ್ಬರೂ ಕಳೆದ ಒಂಬತ್ತು ತಿಂಗಳಿಗಿಂತ ಹೆಚ್ಚು ಕಾಲ ISSನಲ್ಲೇ ಸಿಲುಕಿಕೊಂಡರು. ಈಗ ಅವರನ್ನು ಮರಳಿ ತರಲು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಅನ್ನು ಬಳಸಲಾಗುತ್ತಿದೆ. ಇಬ್ಬರು ಗಗನಯಾತ್ರಿಗಳು ಮಂಗಳವಾರ ಸಂಜೆ ಇತರ ಇಬ್ಬರು ಪ್ರಯಾಣಿಕರೊಂದಿಗೆ ಭೂಮಿಗೆ ಮರಳಲಿದ್ದಾರೆ.

ಲೈವ್​ ಸ್ಟ್ರೀಮಿಂಗ್​: ಸ್ಪೇಸ್‌ಎಕ್ಸ್ ಕ್ರೂ-9 ಭೂಮಿಗೆ ಮರಳುವುದನ್ನು ಐಎಸ್‌ಎಸ್‌ ನೇರಪ್ರಸಾರ ಮಾಡಲಿದೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ. ನೇರಪ್ರಸಾರ ಸೋಮವಾರ ರಾತ್ರಿ 10:45ಕ್ಕೆ (ಭಾರತದಲ್ಲಿ ಮಾರ್ಚ್ 18ರಂದು ಬೆಳಗ್ಗೆ 8:30ಕ್ಕೆ) ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಮುಚ್ಚಲು ಸಿದ್ಧವಾಗುವುದರೊಂದಿಗೆ ಶುರುವಾಗುತ್ತದೆ. ಇದರ ನಂತರ, ನೌಕೆ ಇಳಿಯುವವರೆಗೆ ಸ್ಟ್ರೀಮಿಂಗ್ ಮುಂದುವರಿಯುತ್ತದೆ. ಬಾಹ್ಯಾಕಾಶಪ್ರೇಮಿಗಳು ಈ ಐತಿಹಾಸಿಕ ಘಟನೆಯನ್ನು ವೀಕ್ಷಿಸಬಹುದು ಎಂದು ನಾಸಾ ತಿಳಿಸಿದೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ವರ್ಷ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಅದಾದ ಬಳಿಕ ಕೇವಲ ಒಂದು ವಾರದ ನಂತರ ಭೂಮಿಗೆ ಮರಳಬೇಕಿತ್ತು. ಆದರೆ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ಇಬ್ಬರೂ ಅಲ್ಲಿಯೇ ಸಿಲುಕಿಕೊಂಡರು. ಬಾಹ್ಯಾಕಾಶದಲ್ಲಿ ವಾಸಿಸುತ್ತಿರುವಾಗಲೇ ಸುನೀತಾ ವಿಲಿಯಮ್ಸ್ ಅನೇಕ ಪ್ರಮುಖ ಕೆಲಸಗಳನ್ನು ಮಾಡುವ ಮೂಲಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತೀಯ ಮೂಲದ ಅಮೆರಿಕನ್ ಪ್ರಜೆ ಸುನೀತಾ ವಿಲಿಯಮ್ಸ್ ವಿಶ್ವದ ಅತ್ಯಂತ ಅನುಭವಿ ಗಗನಯಾತ್ರಿಗಳ ಪೈಕಿ ಒಬ್ಬರು.

ಶುಕ್ರವಾರ (ಮಾರ್ಚ್ 14) ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್ ಪ್ರಾರಂಭಿಸಿತು. ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಫಾಲ್ಕನ್-9 ರಾಕೆಟ್ ಮೂಲಕ ಉಡಾಯಿಸಲಾಯಿತು. ಇದು ನಾಸಾದ ಕಮರ್ಶಿಯಲ್​ ಕ್ರೂ ಪ್ರೊಗ್ರಾಂ ಅಡಿಯಲ್ಲಿ ISSಗೆ ಸಿಬ್ಬಂದಿ ಹೊಂದಿರುವ 11ನೇ ವಿಮಾನ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ ಅಂತ್ಯದ ವೇಳೆಗೆ ಭೂಮಿಗೆ ಮರಳಬೇಕಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಲಾನ್ ಮಸ್ಕ್ ಅವರಿಗೆ ಗಗನಯಾತ್ರಿಗಳನ್ನು ಬೇಗನೆ ಮರಳಿ ಕರೆತರುವಂತೆ ಒತ್ತಾಯಿಸಿದ ನಂತರ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಯಿತು.

Source : https://www.etvbharat.com/kn/!technology/sunita-williams-live-streaming-nasa-confirms-sunita-williams-and-butch-wilmore-earth-return-date-and-time-details-in-kannada-kas25031701707

Leave a Reply

Your email address will not be published. Required fields are marked *