2ND PUC EXAM KEY ANSWERS : ದ್ವಿತೀಯ ಪಿಯು ಪರೀಕ್ಷೆಯ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಕೀ ಉತ್ತರಗಳನ್ನು KSEAB ಇಂದು ಪ್ರಕಟಿಸಿದೆ. ಜೊತೆಗೆ ಆಕ್ಷೇಪಣೆ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ.

ಬೆಂಗಳೂರು : ಇತ್ತೀಚೆಗೆ ಪರೀಕ್ಷೆ ಬರೆದು ರಜೆಯ ಮೂಡ್ನಲ್ಲಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಲ್ಲೊಂದು ಪ್ರಮುಖ ಅಪ್ಡೇಟ್ಅನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾನ ಮಂಡಳಿ (KSEAB) ನೀಡಿದೆ. ರಾಜ್ಯದಲ್ಲಿ ಮಾ. 20 ರಂದು ಮುಕ್ತಾಯಗೊಂಡ ದ್ವಿತೀಯ ಪಿಯುಸಿ ಪರೀಕ್ಷೆಗಳ ಕೀ ಉತ್ತರಗಳನ್ನು ಇಂದು ಮಂಡಳಿ ಬಿಡುಗಡೆ ಮಾಡಿದೆ.

ಎಲ್ಲಾ 35 ವಿಷಯಗಳಿಗೆ ಸಂಬಂಧಿಸಿದ ಕೀ ಉತ್ತರಗಳು ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯ ಇವೆ. ಇದೇ ವೇಳೆ ಆಕ್ಷೇಪಣೆ ಸಲ್ಲಿಸಲು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ತಮಗೆ ಸಂಬಂಧಿಸಿದ ವಿಭಾಗ/ವಿಷಯದ ಕೀ ಉತ್ತರಗಳನ್ನು kseab.karnataka.gov.in. ಅಧಿಕೃತ ವೆಬ್ಸೈಟ್ ಮೂಲಕ ವೀಕ್ಷಿಸಬಹುದಾಗಿದೆ.
ಮೌಲ್ಯಮಾಪನವು ಪಾರದರ್ಶಕ ಮತ್ತು ನ್ಯಾಯಯುತವಾಗಿ ನಡೆದಿದ್ದು, ವಿದ್ಯಾರ್ಥಿಗಳಿಂದ ಯಾವುದೇ ಆಕ್ಷೇಪಣೆಗಳಿದ್ದರೆ ಅದಕ್ಕಾಗಿ ಆಬ್ಜೆಕ್ಷನ್ ವಿಂಡೋ ತೆರೆಯಲಾಗಿದೆ. ಈ ಮೂಲಕ ಅವರು ತಮ್ಮ ಪ್ರಶ್ನೆಗಳು ಮತ್ತು ಆಹ್ವಾಲುಗಳನ್ನು ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳು ತಮ್ಮ ಆಕ್ಷೇಪಣೆಗಳನ್ನು ಈ ರೀತಿಯಾಗಿ ಸಲ್ಲಿಸಿ;
- ದ್ವಿತೀಯ ಪಿಯು ವಿದ್ಯಾರ್ಥಿಗಳು kseab.karnataka.gov.in ಗೆ ಭೇಟಿ ನೀಡಿ
- II PUC Exam 2025 ಆಕ್ಷೇಪಣೆ ವಿಭಾಗದಲ್ಲಿ ಪ್ರಶ್ನೆಗಳನ್ನು ಕೇಳಬಹುದು
- ಇದಕ್ಕಾಗಿ ಅಗತ್ಯ ದಾಖಲೆಯಾದ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ
- ನಿಖರ ದಾಖಲೆಯೊಂದಿಗೆ ನಿಮ್ಮ ಆಕ್ಷೇಪಣೆಯನ್ನು ಸಲ್ಲಿಸಿ
- ಮುಂದಿನ ದಿನಗಳಲ್ಲಿ ಅಧಿಕೃತ ಫಲಿತಾಂಶಕ್ಕಾಗಿ ಕಾಯಿರಿ ಮತ್ತು ನಿಮ್ಮ ಆಕ್ಷೇಪಣೆಯ ಪ್ರತಿಯನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ
ನ್ಯಾಯಯುತ ಮೌಲ್ಯಮಾಪನವನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳು ಕೀ ಉತ್ತರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಮತ್ತು ನಿರ್ದಿಷ್ಟ ಸಮಯದೊಳಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು KSEAB ಕೋರಿದೆ.

ಶೀಘ್ರದಲ್ಲೇ ಫಲಿತಾಂಶ ನಿರೀಕ್ಷೆ : ಮಾರ್ಚ್ 20, 2025 ರಂದು ಪರೀಕ್ಷೆಯು ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಆಕ್ಷೇಪಣೆಗಳನ್ನು ಮೌಲ್ಯಮಾಪನ ಮಾಡಿ ಕೀ ಉತ್ತರವನ್ನು ಅಂತಿಮಗೊಳಿಸಿದ ನಂತರ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.
ಈ ಹಿಂದಿನ ವರ್ಷಗಳನ್ನು ಗಮನಿಸಿದರೆ ಫಲಿತಾಂಶಗಳನ್ನು ಸಾಮಾನ್ಯವಾಗಿ ಏಪ್ರಿಲ್ ಎರಡನೇ ವಾರದಲ್ಲಿ ಘೋಷಿಸಲಾಗುತ್ತದೆ. ಕಳೆದ ವರ್ಷ ಸಹ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶಗಳನ್ನು ಏಪ್ರಿಲ್ 10, 2024 ರಂದು ಬಿಡುಗಡೆ ಮಾಡಲಾಗಿತ್ತು.
ಸುಗಮ ಮತ್ತು ಪಾರದರ್ಶಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ KSEAB ವಿದ್ಯಾರ್ಥಿಗಳಿಗೆ ಭರವಸೆ ನೀಡಿದೆ.
Source : ETV Bharat