“ಹಿಂದೂ ಹುಲಿ”ಯನ್ನು ಕಾಡಿಗಟ್ಟಿದ ಕಮಲ ಪಡೆ; ಉತ್ತರ ಕರ್ನಾಟಕದಲ್ಲಿ ಬ್ಯಾಕ್‌ಫೈಯರ್‌ ಸಾಧ್ಯತೆ!

ಕರ್ನಾಟಕ ಬಿಜೆಪಿ ಘಟಕದ ಬಣ ಬಡಿದಾಟಕ್ಕೆ ಇಂದು ತಾರ್ಕಿಕ ಅಂತ್ಯವಲ್ಲದಿದ್ದರೂ, ತಾತ್ಕಾಲಿಕ ತಡೆಯಂತೂ ಖಂಡಿತ ದೊರೆತಿದೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಉಚ್ಚಾಟನೆ, ಯತ್ನಾಳ್‌ vs ವಿಜಯೇಂದ್ರ ತಿಕ್ಕಾಟಗಳಿಗೆ ಬ್ರೇಕ್‌ ಹಾಕಿದೆ. ಆದರೆ ಇದು ತಾತ್ಕಾಲಿಕವಾಗಿದ್ದು, ಯತ್ನಾಳ್‌ ಬೇರೊಂದು ರೂಪದಲ್ಲಿ ಬಿಎಸ್‌ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಮೇಲೆ ಮುಗಿಬೀಳುವುದು ಶತಸಿದ್ಧ. ಇನ್ನು “ಹಿಂದೂ ಹುಲಿ”ಖ್ಯಾತಿಯ ಯತ್ನಾಳ್‌ ಅವರನ್ನು ಪಕ್ಷದಿಂದ ಹೊರಹಾಕಿ, ಉತ್ತರ ಕರ್ನಾಟಕ ಭಾಗದಲ್ಲಿ ಭುಗಿಲೇಳುವ ಅಸಮಾಧಾವನ್ನು ಎದುರಿಸಲು ಬಿಜೆಪಿ ಕೂಡ ಸಜ್ಜಾಗಲಿದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಇಲ್ಲಿದೆ ವಿಶ್ಲೇಷಣೆ.

ಬೆಂಗಳೂರು: ಅಂತೂ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸುವಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣ ಯಶಸ್ವಿಯಾಗಿದೆ. ಯತ್ನಾಳ್‌ ಕುರಿತು ವಿಜಯೇಂದ್ರ ಬಣದ ಆರೋಪಗಳಿಗೆ ಮನ್ನಣೆ ನೀಡಿರುವ ಹೈಕಮಾಂಡ್‌, “ಹಿಂದೂ ಹುಲಿ” ಎಂದೇ ಜನಪ್ರಿಯರಾಗಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಳಿಸಿದೆ. ಆದರೆ ಈ ನಿರ್ಧಾರ ಕಮಲ ಪಡೆಗೆ ಬ್ಯಾಕ್‌ಫೈಯರ್‌ ಆಗುವ ಸಾಧ್ಯತೆ ಇದ್ದು, ಅದರಲ್ಲೂ ವಿಶೇವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಆಕ್ರೋಶ ಭುಗಿಲೇಳುವ ಸಾಧ್ಯತೆ ಇದೆ.

ಹೇಳಿಕೇಳಿ ಬಸನಗೌಡ ಪಾಟೀಲ್‌ ಯತ್ನಾಳ್‌ ಬಿಜೆಪಿಯ ಫೈರ್‌ಬ್ರ್ಯಾಂಡ್‌ ರಾಜಕಾರಣಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ರಾಜಕಾರಣದ ಮಾದರಿಯನ್ನು ಬೆಂಬಲಿಸುವ ಯತ್ನಾಳ್‌, ಕಟ್ಟಾ ಹಿಂದುತ್ವವಾದವನ್ನು ತಮ್ಮ ರಾಜಕಾರಣದ ಭಾಗವನ್ನಾಗಿಸಿಕೊಂಡವರು. ಹಿಂದುತ್ವಕ್ಕೆ ಮಾರು ಹೋಗಿರುವ ಉತ್ತರ ಕರ್ನಾಟಕ ಭಾಗದ ಅದೆಷ್ಟೋ ಯುವಕ/ಯುವತಿಯರು ಯತ್ನಾಳ್‌ ಅವರ ಕಟ್ಟಾ ಅನುಯಾಯಿಗಳು.

ಯತ್ನಾಳ್‌ ಪ್ರಭಾವ

ಹಿಂದುತ್ವದ ಅಲೆ ಕೇವಲ ಕರಾವಳಿ ಭಾಗದಲ್ಲಿ ಮಾತ್ರ ಇದೆ ಎಂದು ಯಾರಾದರೂ ಭಾವಿಸಿದ್ದರೆ, ಅದು ಅವರ ತಪ್ಪು ಕಲ್ಪನೆ. ಉತ್ತರ ಕರ್ನಾಟಕ ಭಾಗದಲ್ಲೂ ಅದರಲ್ಲೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಹಿಂದುತ್ವ ಭದ್ರವಾಗಿ ನೆಲೆಯೂರಿದೆ. ಛತ್ರಪತಿ ಶಿವಾಜಿ ಮಹಾರಾಜ ಎಂದರೆ ಹುಚ್ಚೆದ್ದು ಕುಣಿಯುವ ಹಿಂದುತ್ವ ಪಡೆಯೇ ಈ ಭಾಗದಲ್ಲಿ ಕಂಡುಬರುತ್ತದೆ. ಈ ಹಿಂದುತ್ವದ ಪಡೆಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೇ ನಾಯಕ.

ಆದರೆ ತಮ್ಮ ನೇರ ನುಡಿ, ಕಠೋರ ವರ್ತನೆ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ಅವರನ್ನು ಎದುರು ಹಾಕಿಕೊಳ್ಳುವ ಛಾತಿ, ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಬಿಜೆಪಿಯಿಂದ ಹೊರಹೋಗುವಂತೆ ಮಾಡಿದೆ. ಆದರೆ ಯತ್ನಾಳ್‌ ಅವರ ಉಚ್ಚಾಟನೆಯನ್ನು ಬಿಜೆಪಿ ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಸ್ವತಃ ಆ ಪಕ್ಷಕ್ಕೂ ಗೊತ್ತಿದೆ.

ಬಸನಗೌಡ ಪಾಟೀಲ್‌ ಯತ್ನಾಳ್‌ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವ ಹೊಂದಿರುವ ರಾಜಕಾರಣಿ. ವಿಜಯಪುರ, ಕಲಬುರಗಿ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಯತ್ನಾಳ್‌ ಪ್ರಭಾವವನ್ನು ಯಾರಾದರೂ ಸುಲಭವಾಗಿ ಗುರುತಿಸಬಹುದು. ಅಷ್ಟೇ ಅಲ್ಲದೇ ಯತ್ನಾಳ್‌ ಅವರ ಹಿಂದುತ್ವದ ರಾಜಕಾರಣ, ಅವರನ್ನು ಉತ್ತರ ಕನ್ನಡ, ಕರಾವಳಿ ಭಾಗದಲ್ಲೂ ಜನಪ್ರಿಯರನ್ನಾಗಿಸಿದೆ. ಹಿಂದುತ್ವಕ್ಕೆ ಕಟಿಬದ್ಧರಾಗಿರುವ ಬಿಜೆಪಿ ಕಾರ್ಯಕರ್ತರು ಕರ್ನಾಟಕದ ಯಾವ ಭಾಗದಲ್ಲಿದ್ದರೂ, ಯತ್ನಾಳ್‌ ಅವರ ಉಚ್ಚಾಟನೆಯನ್ನು ಕಟುವಾಗಿ ವಿರೋಧಿಸಲಿದ್ದಾರೆ.

ಬಿಜೆಪಿ ಪ್ರತಿತಂತ್ರವೇನು?

ಹಾಗಂತ ಯತ್ನಾಳ್‌ ಅವರಿಗೆ ಎಲ್ಲ ಕಡೆ ಬೆಂಬಲಿಗರು ಇದ್ದಾರೆ ಎಂದು ಹೇಳಲು ಬರುವುದಿಲ್ಲ. ಖುದ್ದು ವಿಜಯಪುರ ಜಿಲ್ಲೆಯ ಬಿಜೆಪಿಯಲ್ಲೂ ಯತ್ನಾಳ್‌ ವಿರೋಧಿ ಬಣ ಉಸಿರಾಡುತ್ತಿದೆ. ಇದಕ್ಕೆ ಹೊರತಾಗಿ ರಾಜ್ಯಾದ್ಯಂತ ಬಿಎಸ್‌ ಯಡಿಯೂರಪ್ಪ ಅವರ ಕ್ರೇಜ್‌ ಇನ್ನೂ ಕಡಿಮೆಯಾಗದಿರುವುದು, ಮತ್ತು ರಾಜ್ಯ ಬಿಜೆಪಿ ಘಟಕದ ಮೇಲೆ ಬಿವೈ ವಿಜಯೇಂದ್ರ ಅವರ ಹಿಡಿತ, ಯತ್ನಾಳ್‌ ಅವರ ಯಾವುದೇ ರಾಜಕೀಯ ನಡೆಗೆ ಹಿನ್ನೆಡೆಯನ್ನುಂಟು ಮಾಡಬಹುದು.

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಬಿಎಸ್‌ ಯಡಿಯೂರಪ್ಪ ಅವರ ವಿರುದ್ಧ ತೊಡೆ ತಟ್ಟಿರುವುದು, ಲಿಂಗಾಯತ ಸಮುದಾಯದಯಕ್ಕೆ ಅಷ್ಟೇನೂ ಒಪ್ಪಿತವಾಗಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಬಿಎಸ್‌ವೈ ಈಗಲೂ ನಾಡಿನ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ. ಕನಿಷ್ಠ ಪಕ್ಷ ಲಿಂಗಾಯತ ಸಮುದಾಯದ ಬಿಜೆಪಿ ಬೆಂಬಲಿಗರಿಗೆ ಯಡಿಯೂರಪ್ಪ ಅವರೇ ಸರ್ವೋಚ್ಛ ನಾಯಕ.

ಇಂತಹ ನಾಯಕನ ವಿರುದ್ಧ ರಾಜಕೀಯ ಮತ್ತು ವೈಯಕ್ತಿಕ ಆರೋಪಗಳನ್ನು ಧೈರ್ಯ ಮಾಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ಅಷ್ಟು ಸುಲಭವಾಗಿ ಎಲ್ಲವನ್ನೂ ಅರಗಿಸಿಕೊಳ್ಳಬಲ್ಲರು ಎಂದು ಹೇಳಲು ಸಾಧ್ಯವಿಲ್ಲ. ಅತ್ತ ಬಿವೈ ವಿಜಯೇಂದ್ರ ಕೂಡ ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಕುಳಿತು, ಪಕ್ಷದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ.

ಬಿಎಸ್‌ ಯಡಿಯೂರಪ್ಪ ನೇರ ರಾಜಕಾರಣದಲ್ಲಿ ಇಲ್ಲವಾದರೂ, ತೆರೆಮರೆಯಲ್ಲಿದ್ದುಕೊಂಡೇ ತಮ್ಮ ವಿರೋಧಿಗಳಿಗೆ ಪೆಟ್ಟು ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದು ಈಗ ಯತ್ನಾಳ್‌ ಉಚ್ಚಾಟನೆಯಿಂದ ಸಾಬೀತಾಗಿದೆ. ಬಿಜೆಪಿ ಹೈಕಮಾಂಡ್‌ ಯತ್ನಾಳ್‌ ವಿರೋಧಿ ನಿಲುವು ತಳೆಯುವಲ್ಲಿ ಬಿಎಸ್‌ವೈ ಅವರ ಪಾತ್ರವಿದೆ ಎಂಬುದು ರಾಜಕಾರಣದ ಪ್ರಾಥಮಿಕ ಜ್ಞಾನ ಬಲ್ಲವರಿಗೂ ಸುಲಭವಾಗಿ ಗೊತ್ತಾಗುತ್ತದೆ.

ಸಮಬಲದ ಹೋರಾಟ

ಆದಾಗ್ಯೂ, ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಉಚ್ಚಾಟನೆ ಮತ್ತು ಇದರಿಂದ ಹಿಂದುತ್ವ ವಲಯದಲ್ಲಿ ಭುಗಿಲೆದ್ದಿರುವ ಆಕ್ರೋಶವನ್ನು ಬಿಜೆಪಿ ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ಇದರ ದೀರ್ಘಾವಧಿ ಪರಿಣಾಮಗಳ ಬಗ್ಗೆ ಬಿಜೆಪಿ ಖಂಡಿತ ವಿಶ್ಲೇಷಣೆ ಮಾಡಲಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಯತ್ನಾಳ್‌ ಉಚ್ಚಾಟನೆ ಪರಿಣಾಮಗಳನ್ನು ಬಿಜೆಪಿ ಸೂಕ್ಷ್ಮವಾಗಿ ಅವಲೋಕಿಸಲಿದ್ದು, ಇದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕುವತ್ತ ತನ್ನ ಗಮನವನ್ನು ಹರಿಸಲಿದೆ ಎಂಬುದರಲ್ಲಿ ಸಂಶಯವಿಲ್ಲ.

ಇದಕ್ಕೆ ವಿರುದ್ಧವಾಗಿ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ಉತ್ತರ ಕರ್ನಾಟಕ ಭಾಗದಲ್ಲಿ ಅಸ್ತಿತ್ವದಲ್ಲಿರುವ ತಮ್ಮ ಪ್ರಭಾವವನ್ನು ಬಳಸಿಕೊಂಡು ಬಿಜೆಪಿಗೆ ತಿರುಗೇಟು ನೀಡುವ ತಂತ್ರವನ್ನು ಹೆಣೆಯಲಿದ್ದಾರೆ. ಯತ್ನಾಳ್‌ ಈಗ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವುದರಿಂದ, ಬಿಎಸ್‌ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ.

ಒಟ್ಟಿನಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಉಚ್ಚಾಟನೆ ಮತ್ತು ಬಿಜೆಪಿ ಮೇಲಿನ ಇದರ ತುರ್ತು ಮತ್ತು ದೀರ್ಘಾವಧಿ ಪರಿಣಾಮಗಳ ಬಗ್ಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಇದರ ಒಟ್ಟಾರೆ ಹೂರಣ ಏನಾಗಿರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ರಾಜ್ಯದ ಜನ ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಂತಿಮವಾಗಿ ಯಾರ ಕೈ ಮೇಲಾಗಲಿದೆ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕಿದೆ.

Source: Vijaya Karnataka

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *