
RCB’s Historic IPL 2025 Win: ಐಪಿಎಲ್ 2025ರ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆನ್ನೈನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. 17 ವರ್ಷಗಳ ಬಳಿಕ ಆರ್ಸಿಬಿ, ತವರಿನಲ್ಲಿ ಸಿಎಸ್ಕೆಯನ್ನು ಮಣಿಸಿದೆ. ಆರ್ಸಿಬಿ ನೀಡಿದ 197 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ, ಆರ್ಸಿಬಿಯ ಉತ್ತಮ ಬೌಲಿಂಗ್ ದಾಳಿಯ ಮುಂದೆ ಹೀನಾಯವಾಗಿ ಸೋಲುಂಡಿತು.ಈ ಗೆಲುವಿನೊಂದಿಗೆ ಆರ್ಸಿಬಿ ಪಾಯಿಂಟ್ ಪಟ್ಟಿಯಲ್ಲೂ ಪಾರುಪತ್ಯ ಮುಂದುವರೆಸಿದೆ.

ಐಪಿಎಲ್ 2025 ರ (IPL 2025) 8ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವೆ ಚೆನ್ನೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆರ್ಸಿಬಿ ಅಭಿಮಾನಿಗಳು ಯಾವ ಫಲಿತಾಂಶವನ್ನು ನಿರೀಕ್ಷಿಸಿದ್ದರೋ ಅದೇ ಫಲಿತಾಂಶ ಹೊರಬಿದ್ದಿದೆ. ಬರೋಬ್ಬರಿ 17 ವರ್ಷಗಳಿಂದ ಅಂದರೆ 6155 ದಿನಗಳಿಂದ ಸಿಎಸ್ಕೆ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸಲು ಹೆಣಗಾಡುತ್ತಿದ್ದ ಆರ್ಸಿಬಿ, ಇಂದಿನ ಪಂದ್ಯದಲ್ಲಿ ಏಕಪಕ್ಷೀಯ ಗೆಲುವು ದಾಖಲಿಸುವ ಮೂಲಕ ತನ್ನ ಬಹು ವರ್ಷಗಳ ಬರವನ್ನು ನೀಗಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 197 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಸಿಎಸ್ಕೆ, ಆರ್ಸಿಬಿಯ ಕರಾರುವಕ್ಕಾದ ದಾಳಿಯ ಮುಂದೆ ಹೀನಾಯವಾಗಿ ಶರಣಾಯಿತು. ಈ ಗೆಲುವಿನೊಂದಿಗೆ ಆರ್ಸಿಬಿ ಪಾಯಿಂಟ್ ಪಟ್ಟಿಯಲ್ಲೂ ತನ್ನ ಪಾರುಪತ್ಯವನ್ನು ಮುಂದುವರೆಸಿದೆ.
ಸಿಎಸ್ಕೆ ಕಳಪೆ ಫಿಲ್ಡಿಂಗ್
ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ನ ತವರು ಮೈದಾನದಲ್ಲಿ ಗೆಲ್ಲಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಆದರೆ ಉತ್ತಮ ಸಿದ್ಧತೆಯೊಂದಿಗೆ ಕಣಕ್ಕಿಳಿದಿದ್ದ ಆರ್ಸಿಬಿ ಅಂತಿಮವಾಗಿ ಚೆನ್ನೈನ ಅಭೇದ್ಯ ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆರ್ಸಿಬಿಯ ಈ ಗೆಲುವಿನಲ್ಲಿ ತಂಡದ ಸಾಂಘಿಕ ಪ್ರದರ್ಶನ ಪ್ರಮುಖ ಪಾತ್ರವಹಿಸಿದರೆ, ಇನ್ನೊಂದೆಡೆ ಸಿಎಸ್ಕೆ ಫಿಲ್ಡರ್ಗಳ ಕಳಪೆ ಫಿಲ್ಡಿಂಗ್ ಮತ್ತು ಬ್ಯಾಟಿಂಗ್ ಆರ್ಸಿಬಿ ಗೆಲುವಿಗೆ ಕಾರಣವಾಯಿತು.
ಆರ್ಸಿಬಿಗೆ ಸ್ಫೋಟಕ ಆರಂಭ
ಚೆನ್ನೈ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದಾಗ, ಅವರು ಈಗಾಗಲೇ ಅರ್ಧದಷ್ಟು ಪಂದ್ಯವನ್ನು ಗೆದ್ದಿರುವಂತೆ ತೋರುತ್ತಿತ್ತು. ಆದರೆ ಬೆಂಗಳೂರು ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಮೊದಲ ಮತ್ತು ಎರಡನೇ ಓವರ್‌ಗಳಲ್ಲಿ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ತ್ವರಿತ ಆರಂಭ ನೀಡಿದ ರೀತಿ ಚೆನ್ನೈ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು. ಮತ್ತೊಂದೆಡೆ ವಿರಾಟ್ ಕೊಹ್ಲಿ ದೊಡ್ಡ ಹೊಡೆತಗಳನ್ನು ಆಡಲು ಕಷ್ಟಪಟ್ಟರೂ ಉಳಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ರನ್ ವೇಗವನ್ನು ಕಡಿಮೆ ಮಾಡಲು ಬಿಡಲಿಲ್ಲ. ದೇವದತ್ ಪಡಿಕಲ್ ಕೂಡ ಚಿಕ್ಕದಾದ ಆದರೆ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸ್
ಆನಂತರ ಬಂದ ಬೆಂಗಳೂರು ನಾಯಕ ಪಾಟಿದಾರ್ ಅವರಿಗೆ 3 ಜೀವದಾನ ನೀಡಿ ಸಿಎಸ್ಕೆ ದೊಡ್ಡ ತಪ್ಪು ಮಾಡಿತು. ಎಲ್ಲೋ ಆರ್ಮಿ 17 ರಿಂದ 20 ರನ್‌ಗಳ ನಡುವೆ ಮೂರು ಬಾರಿ ಪಾಟಿದಾರ್ ಅವರ ಕ್ಯಾಚ್ ಅನ್ನು ಕೈಬಿಟ್ಟಿತು ಮತ್ತು ಅದಕ್ಕೆ ಬೆಲೆ ಕೂಡ ತೆರಬೇಕಾಯಿತು. 3 ಜೀವದಾನಗಳ ಲಾಭ ಪಡೆದ ಪಾಟಿದಾರ್ ಕೇವಲ 32 ಎಸೆತಗಳಲ್ಲಿ 51 ರನ್ ಗಳಿಸಿದರು. ಕೊನೆಯಲ್ಲಿ ಟಿಮ್ ಡೇವಿಡ್ ಕೇವಲ 8 ಎಸೆತಗಳಲ್ಲಿ 22 ರನ್ ತಂಡವನ್ನು 196 ರನ್‌ಗಳ ಬಲವಾದ ಸ್ಕೋರ್‌ಗೆ ಕೊಂಡೊಯ್ದರು.
ಚೆನ್ನೈಗೆ ಆರಂಭಿಕ ಆಘಾತ
197 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ಮತ್ತೊಮ್ಮೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸತತ ಎರಡನೇ ಪಂದ್ಯದಲ್ಲೂ ಆರಂಭಿಕ ರಾಹುಲ್ ತ್ರಿಪಾಠಿ (5) ಬೇಗನೆ ಪೆವಿಲಿಯನ್ ಸೇರಿಕೊಂಡರು. ನಾಯಕ ರುತುರಾಜ್ ಗಾಯಕ್ವಾಡ್ ಕೂಡ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ದೀಪಕ್ ಹೂಡಾ ಅವರ ಆಟ ಕೂಡ 4 ರನ್ಗಳಿಗೆ ಅಂತ್ಯವಾಯಿತು. ಹೀಗಾಗಿ ಚೆನ್ನೈ ತಂಡವು ಪವರ್‌ಪ್ಲೇನಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 30 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಅಭಿಮಾನಿಗಳನ್ನು ರಂಜಿಸಿದ ಧೋನಿ
ಪವರ್‌ಪ್ಲೇ ನಂತರವೂ ಕರಾರುವಕ್ಕಾದ ದಾಳಿ ಮುಂದುವರೆಸಿದ ಬೆಂಗಳೂರು ಬೌಲರ್‌ಗಳು ಸಿಎಸ್ಕೆಯನ್ನು ಪಂದ್ಯದಿಂದಲ್ಲೇ ಹೊರಹಾಕಿದರು. ಪವರ್‌ಪ್ಲೇ ನಂತರ ದಾಳಿಗಿಳಿದ ಲಿಯಾಮ್ ಲಿವಿಂಗ್‌ಸ್ಟೋನ್ (2/28), ಸ್ಯಾಮ್ ಕರನ್ (8) ಅವರನ್ನು ಪೆವಿಲಿಯ್ಗಟ್ಟಿದರೆ, 13 ನೇ ಓವರ್‌ನಲ್ಲಿ ಯಶ್ ದಯಾಳ್ (2/18) ರಚಿನ್ ರವೀಂದ್ರ (41) ಮತ್ತು ಶಿವಂ ದುಬೆ (19) ಅವರನ್ನು ಔಟ್ ಮಾಡಿ ಚೆನ್ನೈ ತಂಡದ ಸೋಲನ್ನು ದೃಢಪಡಿಸಿದರು. 6 ವಿಕೆಟ್ ಪತನದ ನಂತರ ಕ್ರೀಸ್ಗೆ ಬಂದ ಎಂಎಸ್ ಧೋನಿ ಸಿಎಸ್‌ಕೆ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ, ರವೀಂದ್ರ ಜಡೇಜಾ (19) ಮತ್ತು ಎಂಎಸ್ ಧೋನಿ (30 ನಾಟ್ ಔಟ್, 16 ಎಸೆತಗಳು) ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಸಿಎಸ್ಕೆ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 146 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
Source : TV 9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1