ಕರ್ನಾಟಕ ಸರ್ಕಾರದಿಂದ ಜನರಿಗೆ ಮತ್ತೊಂದು ಬರೆ: ಡೀಸೆಲ್​​ ದರ ಏರಿಕೆ

ಕರ್ನಾಟಕ ಸರ್ಕಾರ ಹಾಲು ಮತ್ತು ವಿದ್ಯುತ್​ ದರವನ್ನು ಏರಿಕೆ ಮಾಡಿ ಈಗಾಗಲೇ ಶಾಕ್​ ನೀಡಿದೆ. ರಾಜ್ಯ ಸರ್ಕಾರ ಇದೀಗ ಮತ್ತೊಂದು ದರ ಏರಿಕೆಯ ಬಿಸಿಯನ್ನು ಮುಟ್ಟಿಸಿದೆ. ಡೀಸೆಲ್​ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರಿಂದ, ಡೀಸೆಲ್ ಬೆಲೆ ಹೆಚ್ಚಳವಾಗಲಿದೆ.

ಬೆಂಗಳೂರು, ಏಪ್ರಿಲ್​ 01: ಕರ್ನಾಟಕ ಸರ್ಕಾರ (Karnataka Government) ಡೀಸೆಲ್​ (Diesel) ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರಿಂದ, ಡೀಸೆಲ್ ಬೆಲೆ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಾಗಲಿದೆ. ಈ ಹಿಂದೆ ಶೇ 18.44 ರಷ್ಟು ಇದ್ದ ತೆರಿಗೆ, ಇದೀಗ ಶೇ 21.17ಕ್ಕೆ ಏರಿಕೆಯಾಗಿದೆ. ಸದ್ಯ ಬೆಂಗಳೂರಲ್ಲಿ ಡಿಸೇಲ್​ 88.99 ರೂ. ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಡೀಸೆಲ್ ಬೆಲೆ 90 ರೂ. ಆಗಲಿದೆ.

ಕರ್ನಾಟಕ ಸರ್ಕಾರ ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿದ್ದು, ಇಂದಿನಿಂದಲೇ ಜಾರಿಗೆ ಬಂದಿದೆ. ದರ ಏರಿಕೆಯಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ. ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ವಿರೋಧ ಪಕ್ಷಗಳು ದರ ಏರಿಕೆಯನ್ನು ವಿರೋಧಿಸಿ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿವೆ.

ಇದರ ನಡುವೆಯೇ, ರಾಜ್ಯ ಸರ್ಕಾರ ಡೀಸೆಲ್​ ದರವನ್ನು 2 ರೂ. ನಷ್ಟು ಏರಿಕೆ ಮಾಡಿದ್ದ ರಾಜ್ಯದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರ್ಕಾರ ಕಳೆದ ವರ್ಷವೂ ಪೆಟ್ರೋಲ್​ ಮತ್ತು ಡೀಸೆಲ್​ ದರವನ್ನು ಏರಿಕೆ ಮಾಡಿತ್ತು. ತೆರಿಗೆ ದರ ಹೆಚ್ಚಳದ ಕಾರಣ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಿತ್ತು.

ಇನ್ನು, ರಾಜ್ಯ ಸರ್ಕಾರದ ದರ ಏರಿಕೆಯನ್ನು ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿದೆ. ಬುಧವಾರದಿಂದ ಅಹೋರಾತ್ರಿ ಧರಣಿ ನಡೆಸಲು ಬಿಜೆಪಿ ನಿರ್ಧರಿಸಿದೆ. ರಾಜ್ಯ ಸರ್ಕಾರದ ದರ ಏರಿಕೆಯನ್ನು ವಿರೋಧಿಸಿ ನಮ್ಮ ಹೋರಾಟ ಎಂದು ಬಿಜೆಪಿ ಹೇಳಿದೆ.

ಕಸಕ್ಕೂ ಕಟ್ಟಬೇಕು ಟ್ಯಾಕ್ಸ್

ಮನೆ, ಅಂಗಡಿ ಮುಂಗಟ್ಟಿನ ಕಸಕ್ಕೂ ತೆರಿಗೆ ಪಾವತಿ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ಸೂಚಿಸಿದೆ. ಈ ವಿಚಾರವಾಗಿ ಬಿಬಿಎಂಪಿ ಬಜೆಟ್​​​ನಲ್ಲೂ ಘೋಷಣೆ ಮಾಡಲಾಗಿದೆ. ಈ ಮೂಲಕ 600 ಕೋಟಿ ರೂಪಾಯಿ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಗುರಿ ಹಾಕಿಕೊಂಡಿದೆ.

ಎಷ್ಟಿರಲಿದೆ ಬಿಬಿಎಂಪಿ ಕಸ ತೆರಿಗೆ?

ಅಂಗಡಿ-ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿಗೆ ಪಾಲಿಕೆ ಸಜ್ಜಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಹೆಚ್ಚಾಗುತ್ತಿದ್ದು, ಈ ಕಾರಣದಿಂದ ತೆರಿಗೆ ವಿಧಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ. ಕಟ್ಟಡದ ವಿಸ್ತೀರ್ಣದ ಆಧಾರತದ ಮೇಲೆ ಕಸದ ಶುಲ್ಕ ನಿಗದಿಪಡಿಸಲಾಗುತ್ತದೆ. ಆಸ್ತಿ ತೆರಿಗೆ ಜೊತೆಯೇ ಕಸ ತೆರಿಗೆಯನ್ನೂ ಪಾಲಿಕೆ ಸಂಗ್ರಹ ಮಾಡಲಿದೆ.

Source : TV 9 Kannada

Leave a Reply

Your email address will not be published. Required fields are marked *