Bengaluru Karaga 2025: ಏಪ್ರಿಲ್ 12ರ ಶನಿವಾರದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ ಮುಖ್ಯ ಆಕರ್ಷಣೆಯಾಗಿದ್ದು, ರಾತ್ರಿ ಭವ್ಯ ಮೆರವಣಿಗೆ ನಡೆಯಲಿದೆ. ಏಪ್ರಿಲ್ 14ರ ಸೋಮವಾರ ವಸಂತೋತ್ಸವ ಮತ್ತು ಧ್ವಜಾವರೋಹಣದೊಂದಿಗೆ ಉತ್ಸವ ಸಂಪೂರ್ಣಗೊಳ್ಳಲಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru News) ಐತಿಹಾಸಿಕ ಕರಗ ಉತ್ಸವ (Draupadi) ನಾಳೆಯಿಂದ ಅಂದರೆ ಏಪ್ರಿಲ್ 4ರಿಂದ ಆರಂಭವಾಗಿ ಏಪ್ರಿಲ್ 14ರವರೆಗೆ ನಗರದ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ (Dharmaraya Swamy Temple) ಭಕ್ತಿಮಯ ವಾತಾವರಣದಲ್ಲಿ ನಡೆಯಲಿದೆ. ಈ ಬಾರಿಯ ಕರಗ ಶಕ್ತ್ಯೋತ್ಸವವು ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಮುಖ್ಯ ಆಕರ್ಷಣೆಯಾಗಿ ಜರುಗಲಿದ್ದು, ಕರಗವನ್ನು ಎ. ಜ್ಞಾನೇಂದ್ರ ಹೊರಲಿದ್ದಾರೆ. ಕಳೆದ 14 ವರ್ಷಗಳಿಂದ ಕರಗ ಹೊತ್ತಿರುವ ಜ್ಞಾನೇಂದ್ರ ಈ ಬಾರಿ 15ನೇ ಬಾರಿಗೆ ಈ ಪವಿತ್ರ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಬೆಂಗಳೂರಿನ ಸಾಂಸ್ಕೃತಿಕ ಪರಂಪರೆ
ಈ ವರ್ಷದ ಕರಗ ಉತ್ಸವದಲ್ಲಿ ಸುಮಾರು 20 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. 9 ದಿನಗಳ ಕಾಲ ಪ್ರತಿ ಸಂಜೆ ಉಚಿತ ಊಟದ ವ್ಯವಸ್ಥೆ ಇರಲಿದ್ದು, ಬೇಸಿಗೆಯ ತಾಪಮಾನ ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದಾರೆ. ಈ ಉತ್ಸವವು ತಿಗಳರ ಸಮುದಾಯದ ಸಂಪ್ರದಾಯವಾಗಿದ್ದು, ದ್ರೌಪದಿಯನ್ನು ಆದಿಶಕ್ತಿಯ ರೂಪವಾಗಿ ಪೂಜಿಸುವ ಈ ಕಾರ್ಯಕ್ರಮವು ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ಯಾವ ದಿನದಂದು ಯಾವ ಕಾರ್ಯಕ್ರಮ ನಡೆಯುತ್ತೆ?
ಕರಗದ ಕಾರ್ಯಕ್ರಮಗಳು ಏಪ್ರಿಲ್ 4ರಂದು ರಥೋತ್ಸವ ಮತ್ತು ಧ್ವಜಾರೋಹಣದೊಂದಿಗೆ ಆರಂಭವಾಗಲಿದೆ. ಏಪ್ರಿಲ್ 5ರಿಂದ 8ರವರೆಗೆ ರತನಕ ಪೂಜೆ, ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ.
ಏಪ್ರಿಲ್ 9ರಂದು ಆರತಿ ದೀಪಗಳ ಸೇವೆ, ಏಪ್ರಿಲ್ 10ರಂದು ಹಸೀ ಕರಗ, ಏಪ್ರಿಲ್ 11ರಂದು ಹೊಂಗಲು ಸೇವೆ ಜರುಗಲಿದೆ. ಏಪ್ರಿಲ್ 12ರ ಶನಿವಾರದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ ಮುಖ್ಯ ಆಕರ್ಷಣೆಯಾಗಿದ್ದು, ರಾತ್ರಿ ಭವ್ಯ ಮೆರವಣಿಗೆ ನಡೆಯಲಿದೆ. ಏಪ್ರಿಲ್ 13ರಂದು ಪುರಾಣ ಪ್ರವಚನ ಮತ್ತು ಗಾವು ಶಾಂತಿ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆದರೆ, ಏಪ್ರಿಲ್ 14ರ ಸೋಮವಾರ ವಸಂತೋತ್ಸವ ಮತ್ತು ಧ್ವಜಾವರೋಹಣದೊಂದಿಗೆ ಉತ್ಸವ ಸಂಪೂರ್ಣಗೊಳ್ಳಲಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಕರಗ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದ್ದು, ಭಕ್ತರಿಗೆ ಸೌಲಭ್ಯ ಕಲ್ಪಿಸಲು ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಈ ಉತ್ಸವವು ಹಿಂದೂ-ಮುಸ್ಲಿಂ ಐಕ್ಯತೆಯ ಸಂಕೇತವಾಗಿಯೂ ಪ್ರಸಿದ್ಧವಾಗಿದ್ದು, ಮೆರವಣಿಗೆಯು ಹಜರತ್ ತವಕ್ಕಲ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನು ಮುಂದುವರಿಸಲಿದೆ. ಕರಗ ಉತ್ಸವವು ಬೆಂಗಳೂರಿನ ಶತಮಾನಗಳ ಸಂಸ್ಕೃತಿಯನ್ನು ಜೀವಂತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
Source : News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1