ನಿಫ್ಟಿ 50 ಸೂಚ್ಯಂಕವು ಪ್ರಾರಂಭದಲ್ಲಿ ಶೇಕಡಾ 5 ರಷ್ಟು ನಷ್ಟ ಅನುಭವಿಸಿತು. ಇದು COVID ನಂತರದ ಅತ್ಯಧಿಕ ಕುಸಿತಗಳಲ್ಲಿ ಒಂದಾಗಿದೆ.

ಮುಂಬೈ: ಸೆನ್ಸೆಕ್ಸ್ 3,900 ಪಾಯಿಂಟ್‌ಗಳ ಇಳಿಕೆ ಕಂಡರೆ, ನಿಫ್ಟಿ 50 21,800 ಕ್ಕಿಂತ ಕೆಳಕ್ಕೆ ಇಳಿದಿದೆ. ಈ ಮೂಲಕ ತಜ್ಞರು ನೀಡಿದ್ದ ಭವಿಷ್ಯ ನಿಜವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರೆಸಿಪ್ರೋಕಲ್ ಟ್ಯಾರಿಫ್ ಗಳಿಂದಾಗಿ ಜಾಗತಿಕ ವ್ಯಾಪಾರ ಯುದ್ಧ ಆರಂಭವಾಗಿದ್ದು, ಇದು ವಿಶ್ವದ ಎಲ್ಲ ಷೇರು ಮಾರುಕಟ್ಟೆಗಳ ಕುಸಿತಕ್ಕೆ ಕಾರಣವಾಗಿದೆ.
ಮುಂಬೈ ಷೇರುಪೇಟೆ ಬಿಎಸ್ಸಿ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 3,939.68 ಪಾಯಿಂಟ್‌ಗಳಷ್ಟು ಕುಸಿದು 71,425.01 ಕ್ಕೆ ತಲುಪಿದರೆ, ನಿಫ್ಟಿ 1,160.8 ಪಾಯಿಂಟ್‌ಗಳಿಂದ 21,743.65 ಕ್ಕೆ ಕುಸಿದಿದೆ. ಭಾರತೀಯ ಮಾರುಕಟ್ಟೆಯ ಸ್ಟಾಕ್ ಸೂಚ್ಯಂಕಗಳಲ್ಲಿ ಜಾಗತಿಕ ರಕ್ತಪಾತದ ಹಾದಿಯನ್ನು ತುಳಿದಿದೆ. ಶುಕ್ರವಾರ ವಹಿವಾಟಿನಲ್ಲಿ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡು ಬಂದಿತ್ತು. ಅದರ ಪ್ರತಿಫಲನ ಇಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಹೂಡಿಕೆದಾರರು ಸುಮಾರು 20 ಲಕ್ಷ ಕೋಟಿಯಷ್ಟು ನಷ್ಟ ಅನುಭವಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಕುಸಿತ:
ನಿಫ್ಟಿ 50 ಸೂಚ್ಯಂಕವು ಪ್ರಾರಂಭದಲ್ಲಿ ಶೇಕಡಾ 5 ರಷ್ಟು ನಷ್ಟ ಅನುಭವಿಸಿತು. ಇದು COVID ನಂತರದ ಅತ್ಯಧಿಕ ಕುಸಿತಗಳಲ್ಲಿ ಒಂದಾಗಿದೆ. 1,146.05 ಪಾಯಿಂಟ್ ಇಳಿಕೆಯೊಂದಿಗೆ 21,758.40 ಪಾಯಿಂಟ್‌ಗಳಲ್ಲಿ ಪ್ರಾರಂಭವಾಯಿತು 10;50 ರ ವೇಳೆಗೆ ಮಾರುಕಟ್ಟೆ ತುಸು ಚೇತರಿಕೆ ಕಂಡು 21,974.15ರಲ್ಲಿ ವಹಿವಾಟು ನಡೆಸುತ್ತಿತ್ತು.
ಏತನ್ಮಧ್ಯೆ, ಬಿಎಸ್‌ಇ ಸೆನ್ಸೆಕ್ಸ್ ಶೇಕಡಾ 5.29 ರಷ್ಟು ಕುಸಿದಿದೆ, 3,984.80 ಪಾಯಿಂಟ್‌ಗಳು ಅಥವಾ ಶೇಕಡಾ 5.29 ರಷ್ಟು ಕುಸಿತದೊಂದಿಗೆ 71,379.8 ಕ್ಕೆ ಇಂದಿನ ವಹಿವಾಟು ಪ್ರಾರಂಭವಾಯಿತು. ಟ್ರಂಪ್‌ರ ಘೋಷಣೆಗಳ ನಡುವೆ ಮಾರುಕಟ್ಟೆಗಳು ಈ ಜಾಗತಿಕ ಮಾರಾಟವನ್ನು ತಡೆಯುವಂತೆ ಮಾಡಲು ಸರ್ಕಾರದ ಕಡೆಯಿಂದ ಸುಧಾರಣಾ ಪ್ಯಾಕೇಜ್ ಘೋಷಣೆಯ ಅಗತ್ಯ ಇದೆ ಎಂದು ತಜ್ಞರು ಹೇಳಿದ್ದಾರೆ.

ಸುಧಾರಣಾ ಪ್ಯಾಕೇಜ್ ಅಗತ್ಯ ಪ್ರತಿಪಾದಿಸಿದ ತಜ್ಞರು: ಭಾರತವು ದೇಶೀಯ ಕಾರಣಗಳಿಂದಲ್ಲ ಜಾಗತಿಕ ವಿದ್ಯಮಾನಗಳಿಂದಾಗಿ ತನ್ನ ಪೋರ್ಟ್‌ಫೋಲಿಯೊ ಹರಿವಿನಲ್ಲಿ ಅಂತರ್ ಸಂಪರ್ಕಿತ ಸರಪಳಿಯ ಬಿಸಿಯನ್ನು ಎದುರಿಸಲಿದೆ ಎಂದು ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ತಜ್ಞರಾಗಿರುವ ಅಜಯ್ ಬಗ್ಗಾ ತಿಳಿಸಿದ್ದಾರೆ ಎಂದು ಎಎನ್ಐ ವಿವರಿಸಿದೆ.
ಈ ಜಾಗತಿಕ ಆರ್ಥಿಕ ಮಹಾ ಚಳಿಗಾಲದ ಬೆದರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಹಾಗೂ ದೇಶೀಯ ಆರ್ಥಿಕತೆ ರಕ್ಷಿಸಲು ಹಣಕಾಸಿನ ಮತ್ತು ಸುಧಾರಣಾ ಪ್ಯಾಕೇಜ್ ಅಗತ್ಯವಿದೆ. ಎಲ್ಲಾ ವ್ಯಾಪಾರ ಪಾಲುದಾರರ ಮೇಲೆ ಶತಮಾನದ ಅತ್ಯಧಿಕ ಸುಂಕಗಳನ್ನು ಘೋಷಿಸಿದ ಪರಿಣಾಮ ಈ ನಷ್ಟ ನಮಗೆ ಬಂದೊದಗಿದೆ ಎಂದು ಬಗ್ಗಾ ಕಳವಳ ವ್ಯಕ್ತಪಡಿಸಿದ್ದಾರೆ.
5.4 ಟ್ರಿಲಿಯನ್ ಡಾಲರ್ ಕಳೆದುಕೊಂಡ ಅಮೆರಿಕನ್ ಮಾರ್ಕೆಟ್: ಇನ್ನು ಅಮೆರಿಕ ಮಾರುಕಟ್ಟೆಗಳಲ್ಲಿ 5.4 ಟ್ರಿಲಿಯನ್ ಡಾಲರ್ ಹಣ 2-ದಿನಗಳ ಕರಗುವಿಕೆ ಹೋಗಿದೆ. ನಾವು ಏಷ್ಯಾದ ಮಾರುಕಟ್ಟೆಗಳಲ್ಲಿ ಕಂಡು ಕೇಳರಿಯದ ಮಾರಾಟವನ್ನು ನೋಡುತ್ತಿದ್ದೇವೆ, ಗುರುವಾರ ಮತ್ತು ಶುಕ್ರವಾರ ಮುಚ್ಚಲಾಗಿದ್ದ ತೈವಾನ್ 20 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ ಮತ್ತು ಹಾಂಕಾಂಗ್ ಶೇಕಡಾ 10 ರಷ್ಟು ಕಡಿತ ಮತ್ತು ನಂತರ ಸ್ವಲ್ಪ ಚೇತರಿಕೆ ಕಂಡಿದೆ” ಎಂದು ಬಗ್ಗೆ ಪ್ರಸ್ತುತ ಪರಿಸ್ಥಿತಿಯ ಚಿತ್ರಣವನ್ನು ನಮ್ಮ ಮುಂದಿಟ್ಟಿದ್ದಾರೆ.

ಶೇ 10 ರಷ್ಟು ಕುಸಿತ ಕಂಡ ಹ್ಯಾಂಗ್ ಸೆಂಗ್: ಏಷ್ಯಾದ ಇತರ ಮಾರುಕಟ್ಟೆಗಳಾದ ಜಪಾನ್‌ನ ನಿಕ್ಕಿ ಸೂಚ್ಯಂಕವು ಶೇಕಡಾ 5.79 ರಷ್ಟು ಕುಸಿದಿದೆ. ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಸುಮಾರು 10 ಪ್ರತಿಶತದಷ್ಟು ಕುಸಿತದೊಂದಿಗೆ ಜಾಗತಿಕ ವಿದ್ಯಾಮಾನಗಳ ಹಾದಿ ಹಿಡಿಯಿತು. ತೈವಾನ್ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ ಶೇಕಡಾ 9.61 ರಷ್ಟು ಕಳೆದುಕೊಂಡಿದೆ.
ಆಸ್ಟ್ರೇಲಿಯಾದ ಬೆಂಚ್‌ಮಾರ್ಕ್ ಸೂಚ್ಯಂಕ S&P/ASX 200 ಸಹ 3.82 ಶೇಕಡಾ ಕುಸಿತವನ್ನು ದಾಖಲಿಸಿದೆ.
ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳು
1. ಹೆಚ್ಚಿದ ಸುಂಕದ ಬಿಕ್ಕಟ್ಟು

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಿಧ ದೇಶಗಳ ಮೇಲೆ ಸುಂಕ ಹೇರಿದ್ದು, ಇದಕ್ಕೆ ಚೀನಾ ಪ್ರತೀಕಾರ ತೀರಿಸಿಕೊಂಡಿತು. ಇದರಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಆತಂಕ ಆವರಿಸಿದೆ. ತಮ್ಮ ಸುಂಕದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ‘ದೇಶಗಳು ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿವೆ. ಮಾರುಕಟ್ಟೆಯ ನೋವು ತಾತ್ಕಾಲಿಕ’ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ‘ಕೆಲವೊಮ್ಮೆ ಏನನ್ನಾದರೂ ಸರಿಪಡಿಸಲು ಔಷಧಿಯನ್ನು ತೆಗೆದುಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಮಾರುಕಟ್ಟೆಗಳು ತೀವ್ರವಾದ ಅಸ್ಥಿರತೆಯನ್ನು ಎದುರಿಸುತ್ತಿದ್ದು, ಸುಂಕದ ಬಿಕ್ಕಟ್ಟು ಹೇಗೆ ಬೆಳೆಯುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಇದರಿಂದ ಜಾಗತಿಕವಾಗಿ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ,” ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಜ್ಞ ವಿಕೆ ವಿಜಯ ಕುಮಾರ್ ಹೇಳಿದ್ದಾರೆ.
2. ಆರ್ಥಿಕ ಹಿಂಜರಿತದ ಆತಂಕ

ಪ್ರಮುಖ ಹಣಕಾಸು ಸಂಸ್ಥೆ ಗೋಲ್ಡ್‌ಮನ್ ಸ್ಯಾಕ್ಸ್ ಅಮೆರಿಕದ ಕುರಿತಾದ ತನ್ನ ಮುನ್ಸೂಚನೆಯನ್ನು ಬದಲಾಯಿಸಿದ್ದು, ಮುಂದಿನ 12 ತಿಂಗಳಲ್ಲಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆ ಶೇ. 45ರಷ್ಟಿದೆ ಎಂದು ಹೇಳಿದೆ. ಈ ಹಿಂದೆ ಸಂಸ್ಥೆಯು ಶೇ. 35ರಷ್ಟು ಆರ್ಥಿಕ ಹಿಂಜರಿತದ ಸಂಭವ ಇದೆ ಎಂದು ತಿಳಿಸಿತ್ತು.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಇನ್ನೊಂದು ಪ್ರಮುಖ ಸಂಸ್ಥೆ ಜೆಪಿ ಮಾರ್ಗನ್ ಚೇಸ್, ಅಮೆರಿಕದ ಆರ್ಥಿಕತೆಯು ಈ ವರ್ಷವೇ ಹಿಂಜರಿತವನ್ನು ಪ್ರವೇಶಿಸಬಹುದು ಎಂದು ಎಚ್ಚರಿಕೆ ನೀಡಿದೆ.
“ಚೀನಾ ಮತ್ತು ಜಪಾನ್‌ನ ಸೂಚ್ಯಂಕಗಳು ಕ್ರಮವಾಗಿ ಶೇ. 10 ಮತ್ತು ಶೇ. 8ರಷ್ಟು ಕುಸಿದಿವೆ. ಇದು ದೊಡ್ಡ ಆತಂಕಕ್ಕೆ ಕಾರಣವಾಗಿದೆ” ಎಂದು ರಿಲಯನ್ಸ್ ಸೆಕ್ಯೂರಿಟೀಸ್‌ನ ಮುಖ್ಯಸ್ಥ ವಿಕಾಸ್ ಜೈನ್ ಹೇಳಿದ್ದಾರೆ.
“ಅಮೆರಿಕದ ಎಸ್&ಪಿ 500 ಶುಕ್ರವಾರ ಶೇ. 6ರಷ್ಟು ಕುಸಿದಿದೆ. ಡೌ ಜೋನ್ಸ್ 2,000 ಅಂಕಗಳಿಗಿಂತ ಹೆಚ್ಚು ನಷ್ಟ ಅನುಭವಿಸಿದೆ. ಇದು ಕೊರೊನಾ ಬಿಕ್ಕಟ್ಟಿನ ನಂತರದ ಕೆಟ್ಟ ಕುಸಿತವಾಗಿದೆ. ಚೀನಾ ಏಪ್ರಿಲ್ 10 ರಿಂದ ಅಮೆರಿಕದ ಎಲ್ಲಾ ಆಮದುಗಳ ಮೇಲೆ ಶೇ. 34ರಷ್ಟು ಸುಂಕ ವಿಧಿಸಲು ನಿರ್ಧರಿಸಿದ್ದು, ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ,” ಎಂದು ಅವರು ವಿಶ್ಲೇಷಿಸಿದ್ದಾರೆ.
3. ಜಾಗತಿಕ ಮಟ್ಟದಲ್ಲಿ ಮಾರಾಟದ ಒತ್ತಡ

ಏಷ್ಯಾದ ಷೇರು ಮಾರುಕಟ್ಟೆಗಳು ಸಹ ಸೋಮವಾರ ಕುಸಿತ ಕಂಡಿವೆ. ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ಸುಮಾರು ಶೇ. 11ರಷ್ಟು ಇಳಿಕೆ ಕಂಡರೆ, ಟೋಕಿಯೊದ ನಿಕ್ಕಿ 225 ಸೂಚ್ಯಂಕ ಶೇ. 7ರಷ್ಟು ನಷ್ಟಕ್ಕೀಡಾಗಿದೆ. ಶಾಂಘೈ ಕಾಂಪೊಸಿಟ್ ಶೇ. 6ಕ್ಕಿಂತ ಹೆಚ್ಚು ಕುಸಿತ ಕಂಡಿದ್ದರೆ, ದಕ್ಷಿಣ ಕೊರಿಯಾದ ಕೋಪ್ಸಿ ಶೇ. 5ರಷ್ಟು ಇಳಿಕೆಯಾಗಿದೆ.
ಜಪಾನ್‌ನ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಕೆಳಮಟ್ಟ ತಲುಪಿದ ನಂತರ ವಹಿವಾಟನ್ನು ಸ್ಥಗಿತಗೊಳಿಸಲಾಯಿತು. ಶುಕ್ರವಾರದಂದು ಎಸ್&ಪಿ 500 ಶೇ. 5.97ರಷ್ಟು, ನಾಸ್ಡಾಕ್ ಶೇ. 5.82ರಷ್ಟು ಮತ್ತು ಡೌ ಜೋನ್ಸ್ ಇಂಡಸ್ಟ್ರಿಯಲ್ ಎವರೇಜ್ ಶೇ. 5.50ಯಷ್ಟು ನಷ್ಟ ಅನುಭವಿಸಿತ್ತು.
4. ಸರಕುಗಳ ಬೆಲೆಗಳಲ್ಲಿ ತೀವ್ರ ಕುಸಿತ

ಬೇಡಿಕೆ ದುರ್ಬಲಗೊಳ್ಳುವ ಮತ್ತು ಆರ್ಥಿಕ ಹಿಂಜರಿತದ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ವಿವಿಧ ಸರಕುಗಳ ಬೆಲೆಗಳು ತೀವ್ರ ಕುಸಿತ ಕಂಡಿವೆ.
ಬ್ರೆಂಟ್ ಮಾದರಿ ಕಚ್ಚಾ ತೈಲ ದರವು ಶೇ. 6.5ರಷ್ಟು ಇಳಿಕೆಯಾಗಿದ್ದರೆ, ಡಬ್ಲ್ಯೂಟಿಐ ಕಚ್ಚಾ ತೈಲ ದರ ಶೇ. 7.4, ಚಿನ್ನದ ದರ ಶೇ. 2.4 ಮತ್ತು ಬೆಳ್ಳಿ ಬೆಲೆ ಶೇ. 7.3ರಷ್ಟು ಕುಸಿದವು. ಇತರ ಲೋಹಗಳ ಬೆಲೆಗಳು ಸಹ ತೀವ್ರ ಇಳಿಕೆ ಕಂಡಿವೆ. ತಾಮ್ರದ ದರ ಶೇ. 6.5, ಸತು ಶೇ. 2 ಮತ್ತು ಅಲ್ಯೂಮಿನಿಯಂ ಬೆಲೆ ಶೇ. 3.2ರಷ್ಟು ಇಳಿಕೆ ಕಂಡಿದೆ. ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆ ಮತ್ತು ಆರ್ಥಿಕ ಹಿಂಜರಿತದ ಕಳವಳಗಳು ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸಿವೆ.
5. ಬೆಳವಣಿಗೆ ಕುಂಠಿತದ ಭಯ

ಡೊನಾಲ್ಡ್ ಟ್ರಂಪ್ ಸುಂಕಗಳಿಂದ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಲಿದ್ದು, ಇದರಿಂದ ಜಾಗತಿಕ ಮಟ್ಟದಲ್ಲಿ ಕಾರ್ಪೊರೇಟ್ ಕಂಪನಿಗಳ ಲಾಭದ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ. ಇದಕ್ಕೆ ಭಾರತೀಯ ಕಂಪನಿಗಳೂ ಹೊರತಲ್ಲ. ಅದರಲ್ಲೂ ಅಮೆರಿಕದಿಂದ ಹೆಚ್ಚಿನ ಆದಾಯ ಗಳಿಸುತ್ತಿರುವ ಕಂಪನಿಗಳ ಆದಾಯದ ಮೇಲೆ ದೊಡ್ಡ ಮಟ್ಟದ ಹೊಡೆತ ಬೀಳಲಿದೆ.
ಭಾರತದ ಮೇಲೆ ವಿಧಿಸಿರುವ ಸುಂಕವನ್ನು ಟ್ರಂಪ್ ಸ್ವಲ್ಪ ಕಡಿಮೆ ಮಾಡುವ ನಿರೀಕ್ಷೆ ಇದೆ. ಅಮೆರಿಕವು ಭಾರತದ ಮೇಲೆ ಶೇ. 26ರಷ್ಟು ಸುಂಕ ವಿಧಿಸಿದ ನಂತರ ಗೋಲ್ಡ್‌ಮನ್ ಸ್ಯಾಕ್ಸ್ ದೇಶದ ಬೆಳವಣಿಗೆಯ ಅಂದಾಜನ್ನು ಶೇ. 6.3 ರಿಂದ 6.1ಕ್ಕೆ ಇಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1