ಒಳಮೀಸಲಾತಿ ಬಳಿಕ ಸಂಭ್ರಮಿಸೋಣ: ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ.

ಚಿತ್ರದುರ್ಗ: ಏ.13 : ಒಳಮೀಸಲಾತಿ 30 ವರ್ಷದ ಹೋರಾಟದ ಫಲ. ಆದರೆ, ಬಹಳಷ್ಟು ಗೊಂದಲ, ಕಾರಣದ ಕೈಗಳ ಕಾರಣಕ್ಕೆ ವಿಳಂಬ ಆಗಿದೆ. ಈ ಮಧ್ಯೆ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ಕಾರ್ಯ ಆರಂಭಗೊಂಡು, ಒಳಮೀಸಲಾತಿ ಜಾರಿಗೊಳ್ಳಲಿದೆ. ಅಲ್ಲಿಯವರೆಗೂ ನಾನು ಯಾವುದೇ ಹಬ್ಬ-ಹರಿದಿನ ಜೊತೆಗೆ ನನ್ನ ಜನ್ಮದಿನ ಕೂಡ ಆಚರಿಸುವುದಿಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಏ.15, 2025ಕ್ಕೆ ನನಗೆ 70 ವರ್ಷ ತುಂಬಲಿದ್ದು, ಈ ದಿನವನ್ನು ಸ್ಮರಣೀಯಗೊಳಿಸಲು ಹಿತೈಷಿಗಳು, ಅಭಿಮಾನಿಗಳು, ಬೆಂಬಲಿಗರು ಬೆಂಗಳೂರಿನ ಅರಮನೆ ಮೈದಾನ ಆವರಣದಲ್ಲಿನ ವಿಹಾರದಲ್ಲಿ ಕಾರ್ಯಕ್ರಮ ಸಿದ್ಧತೆ ಮಾಡಿಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದರು. ಈಗ ಅವರೆಲ್ಲರನ್ನೂ ಮನವೊಲಿಸಿ, ಜನ್ಮದಿನಾಚರಣೆ ಕಾರ್ಯಕ್ರಮವನ್ನು ರದ್ದುಗೊಳಿಸಿರುತ್ತೇನೆ ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಸಮುದಾಯದಲ್ಲಿನ ನೊಂದ ಜನರಿಗೆ ಒಳಮೀಸಲಾತಿ ಜಾರಿ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂಬುದು ನನ್ನ ಹಾಗೂ ಸಿದ್ದರಾಮಯ್ಯ ಅವರ ಗುರಿ ಆಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನಮ್ಮ ಧ್ವನಿಗೆ ಬೆಂಬಲವಾಗಿ ನಿಂತಿದ್ದು, ನಮ್ಮ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೂ ಕಾಣದ ಕೈಗಳು ಒಳಮೀಸಲಾತಿಗೆ ಬಹಳಷ್ಟು ಅಡ್ಡಿಪಡಿಸಿದ್ದು, ಇದರ ವಿರುದ್ಧ ಧ್ವನಿ ಕೂಡ ಎತ್ತಿರುವೆ. ಜೊತೆಗೆ ಮುಖ್ಯಮಂತ್ರಿಗಳ ಮೇಲೆ ನಿರಂತರ ಒತ್ತಡ ತರುವ ಕೆಲಸ ಮಾಡಲಾಗುತ್ತಿದೆ.

ಒಳಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆಯೆಂದು ಸುಪ್ರೀಂ ಕೋರ್ಟ್ ಆಗಸ್ಟ್ 1, 2024ರಂದು ತೀರ್ಪು ನೀಡುತ್ತಿದ್ದಂತೆ, ಕೆಲ ಕಾಣದ ಕೈಗಳು 10 ಸಾವಿರ ಹುದ್ದೆಗಳನ್ನು ತುಂಬಿಕೊಳ್ಳಲು ತರಾತರಿಯಲ್ಲಿ ಅರ್ಜಿ ಆಹ್ವಾನಿಸಿದ್ದವು. ಬಳಿಕ ರಾಜ್ಯ ಸರ್ಕಾರ ಅಕ್ಟೋಬರ್ 28ರಂದು ರಾಜ್ಯದಲ್ಲಿ ಯಾವುದೇ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆ ಕೈಗೊಳ್ಳದಂತೆ ಆದೇಶ ನೀಡಿದೆ. ನಾವುಗಳು ಕೂಡ ಬಹಳಷ್ಟು ಗೊಂದಲ ಮೂಡಿಸಲು ಯತ್ನಿಸದೆ, ಹಠಕ್ಕೆ ಬೀಳದೆ ಎಲ್ಲ ನೋವನ್ನು ನುಂಗಿಕೊಂಡು ಒಳಮೀಸಲಾತಿ ಜಾರಿಯತ್ತ ಆಸೆಗಣ್ಣಿನಿಂದ ನೋಡುತ್ತಿದ್ದೇವೆ.

ಜೊತೆಗೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ ಪತ್ರ ಬರೆದು, ನಿಯೋಗ ತೆರಳಿ ಸರ್ವೇ ಸಂದರ್ಭ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನು ಅವರುಗಳ ಗಮನಕ್ಕೆ ತರಲಾಗಿದೆ. ಎಲ್ಲಿಯೂ ಯಾವ ಸಮುದಾಯಗಳಿಗೂ ಅನ್ಯಾಯ ಆಗದ ರೀತಿ ಜಾತಿಗಣತಿ ಸರ್ವೇ ಪಾದರದರ್ಶಕವಾಗಬೇಕು, ಶೀಘ್ರ ಒಳಮೀಸಲಾತಿ ಜಾರಿಗೊಳ್ಳಬೇಕೆಂಬುದು ನಮ್ಮೆ ಬೇಡಿಕೆ ಆಗಿದೆ.

ಆದ್ದರಿಂದ ಜನ್ಮದಿನಾಚರಣೆ ಸಂಭ್ರಮಕ್ಕಿಂತಲೂ ನಾನು ಸೇರಿ ಎಲ್ಲರಿಗೂ ಒಳಮೀಸಲಾತಿ ಜಾರಿ ಮುಖ್ಯ ವಿಷಯವಾಗಬೇಕು. ಏ.15ರಂದು ನನಗೆ ಶುಭಾಷಯ ಕೋರಲು ನನ್ನನ್ನು ಹುಡುಕಿಕೊಂಡು ಬರುವ ಅಗತ್ಯ ಇಲ್ಲ. ತಾವುಗಳು ಇರುವ ಸ್ಥಳ, ಕಾಲೋನಿ, ಹಟ್ಟಿಗಳಲ್ಲಿ ಜಾತಿಗಣತಿ ಕಾರ್ಯದ ಸಂದರ್ಭ ಯಾವುದೇ ಕಾರಣಕ್ಕೂ ಆದಿಕರ್ನಾಟಕ, ಆದಿದ್ರಾವಿಡ ಎಂದು ಬರೆಸಬಾರದು. ಮೂಲ ಜಾತಿಯನ್ನು ಕಡ್ಡಾಯವಾಗಿ ಬರೆಸುವಂತೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೋರಿದ್ದಾರೆ.

ಒಳಮೀಸಲಾತಿ ಪರಿಶಿಷ್ಟ ಗುಂಪಿನಲ್ಲಿರುವ 101 ಜಾತಿಗೂ ನ್ಯಾಯ ಕಲ್ಪಿಸುವ ಏಕೈಕ ಮಾರ್ಗವಾಗಿದೆ. ಜೊತೆಗೆ ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪರಿಶಿಷ್ಟ ಜಾತಿಯಲ್ಲಿನ ಎಲ್ಲರಿಗೂ ನ್ಯಾಯ ಕೊಡಿಸಲು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ನಾವುಗಳು ಅವರ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕು. ಮುಖ್ಯವಾಗಿ ಜಾತ್ರೆ, ಹಬ್ಬ-ಹರಿದಿನ ಆಚರಣೆ ಮರೆತು ಜಾತಿಗಣತಿ ಕಾರ್ಯ ಯಶಸ್ವಿಗೆ ಅದರಲ್ಲೂ ಸರ್ವೇ ಸಂದರ್ಭ ಮೂಲ ಜಾತಿ ದಾಖಲು ಆಗುವ ರೀತಿ ಜನರಲ್ಲಿ ಜಾಗೃತಿ ವಹಿಸಬೇಕು. ಈ ನಿಟ್ಟಿನಲ್ಲಿ ನನ್ನ ಜನ್ಮದಿನ ಏ.15ರಂದು ಈ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ನೊಂದ ಜನರಿಗೆ ಹಕ್ಕು ಕೊಡಿಸಲು ಶ್ರಮಿಸಬೇಕೆಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.

 ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *