IPL 2025: ಹೇಜಲ್​ವುಡ್ ಮಾರಕ ದಾಳಿ; ಬೆಂಗಳೂರಿನಲ್ಲಿ ಆರ್​ಸಿಬಿಗೆ ಮೊದಲ ಗೆಲುವು

RCB’s Thrilling Home Win: ಐಪಿಎಲ್ 2025ರಲ್ಲಿ ಆರ್​ಸಿಬಿ ತನ್ನ ಮನೆ ಮೈದಾನವಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಗೆಲುವನ್ನು ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್​ಗಳ ರೋಚಕ ಜಯ ಸಾಧಿಸಿದ ಆರ್​ಸಿಬಿಗೆ ಲೀಗ್​ನಲ್ಲಿ ಇದು 6ನೇ ಗೆಲುವಾಗಿದೆ. ಕೊಹ್ಲಿ ಮತ್ತು ಪಡಿಕಲ್ ಅವರ ಅದ್ಭುತ ಜೊತೆಯಾಟ ಮತ್ತು ಬೌಲರ್​ಗಳ ಕರಾರುವಕ್ಕಾದ ದಾಳಿಯಿಂದ ತಂಡಕ್ಕೆ ಗೆಲುವು ದೊರಕಿತು.

ಒಂದು ಗೆಲುವು.. ತವರಿನಲ್ಲಿ ಒಂದು ಗೆಲುವಿಗಾಗಿ ಕಾದು ಕುಳಿತಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಐಪಿಎಲ್ 2025 ರ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಿದ್ದ ಆರ್​ಸಿಬಿ ಕೊನೆಗೂ ತನ್ನ ತವರು ಮೈದಾನದಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಈ ಸೀಸನ್​ನಲ್ಲಿ 3 ತವರು ಪಂದ್ಯಗಳನ್ನು ಆಡಿದ್ದ ಆರ್​ಸಿಬಿ ಮೂರೂ ಪಂದ್ಯಗಳನ್ನು ಸೋತಿತ್ತು. ಆದರೆ ರಾಜಸ್ಥಾನ್ ವಿರುದ್ಧ ಸಾಂಘಿಕ ಹೋರಾಟ ನೀಡಿದ ಆರ್​ಸಿಬಿ ತವರಿನಲ್ಲಿ ಆಡಿದ 4ನೇ ಪಂದ್ಯದಲ್ಲಿ 11 ರನ್​​ಗಳ ರೋಚಕ ಜಯ ಸಾಧಿಸಿತು.

ಸತತ 4ನೇ ಪಂದ್ಯದಲ್ಲಿ ಟಾಸ್ ಸೋಲು

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸೀಸನ್​ನ ನಾಲ್ಕನೇ ಪಂದ್ಯ ಇದಾಗಿತ್ತು. ಕಳೆದ ಮೂರು ಪಂದ್ಯಗಳಂತೆ, ಮತ್ತೊಮ್ಮೆ ಆತಿಥೇಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಟಿದಾರ್ ನಾಲ್ಕನೇ ಬಾರಿಗೆ ಟಾಸ್ ಸೋತರು. ಹೀಗಾಗಿ ಸತತ ನಾಲ್ಕನೇ ಬಾರಿಗೆ ಆರ್​ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ಚಿನ್ನಸ್ವಾಮಿಯಲ್ಲಿ ನಡೆದ ಕಳೆದ 3 ಪಂದ್ಯಗಳಿಗಿಂತ ಭಿನ್ನವಾಗಿ, ಈ ಬಾರಿ ಆರ್​ಸಿಬಿ ಉತ್ತಮ ಆರಂಭವನ್ನು ಪಡೆಯಿತು.

ಕೊಹ್ಲಿ- ಪಡಿಕ್ಕಲ್ ಅರ್ಧಶತಕ

ಆರಂಭಿಕ ಜೋಡಿ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ 6.4 ಓವರ್‌ಗಳಲ್ಲಿ 61 ರನ್‌ಗಳ ಉತ್ತಮ ಆರಂಭವನ್ನು ನೀಡಿದರು. ಇದಾದ ನಂತರ, ಕೊಹ್ಲಿ ಮತ್ತು ದೇವದತ್ ಪಡಿಕಲ್ ಮತ್ತೊಮ್ಮೆ ರಾಜಸ್ಥಾನ ವಿರುದ್ಧದ ಅದ್ಭುತ ಜೊತೆಯಾಟವನ್ನಾಡಿ ಎರಡನೇ ವಿಕೆಟ್‌ಗೆ ಕೇವಲ 51 ಎಸೆತಗಳಲ್ಲಿ 95 ರನ್‌ ಸೇರಿಸಿದರು. ಈ ವೇಳೆ ಕೊಹ್ಲಿ ಈ ಆವೃತ್ತಿಯ ಐದನೇ ಅರ್ಧಶತಕವನ್ನು ಪೂರೈಸಿದರೆ, ಪಡಿಕಲ್ ಸತತ ಎರಡನೇ ಅರ್ಧಶತಕವನ್ನು ದಾಖಲಿಸಿದರು. ಇದಾದ ನಂತರ, ಟಿಮ್ ಡೇವಿಡ್ ಮತ್ತು ಜಿತೇಶ್ ಶರ್ಮಾ ಕೇವಲ 19 ಎಸೆತಗಳಲ್ಲಿ 42 ರನ್‌ಗಳ ತ್ವರಿತ ಪಾಲುದಾರಿಕೆಯನ್ನು ಮಾಡಿ ತಂಡವನ್ನು 205 ರನ್‌ಗಳ ಸ್ಕೋರ್‌ಗೆ ಕೊಂಡೊಯ್ದರು.

ರಾಜಸ್ಥಾನ್​ಗೆ ಸ್ಫೋಟಕ ಆರಂಭ

ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಸ್ಫೋಟಕ ಆರಂಭ ನೀಡಿದರು. ಜೈಸ್ವಾಲ್, ವೈಭವ್ ಸೂರ್ಯವಂಶಿ ಜೊತೆಗೂಡಿ, ಕೇವಲ 5 ನೇ ಓವರ್‌ನಲ್ಲಿ ತಂಡವನ್ನು 50 ರನ್‌ಗಳ ಗಡಿ ದಾಟಿಸಿದರು. ನಂತರ ನಿತೀಶ್ ರಾಣಾ ಕೂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಆರಂಭಿಸಿದರು. ಹೀಗಾಗಿ ಪವರ್‌ಪ್ಲೇನಲ್ಲಿಯೇ ರಾಜಸ್ಥಾನ್ 72 ರನ್ ಗಳಿಸಿತು. ಆದರೆ ಅದೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಜೈಸ್ವಾಲ್ ವಿಕೆಟ್ ಪಡೆಯುವ ಮೂಲಕ ರಾಜಸ್ಥಾನ್​ಗೆ ಆಘಾತ ನೀಡಿದರು. ಆದರೆ ನಿತೀಶ್ ಮತ್ತು ನಾಯಕ ರಿಯಾನ್ ಪರಾಗ್ ಕೂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ತಂಡವನ್ನು 9 ನೇ ಓವರ್ ವೇಳೆಗೆ 110 ರನ್‌ಗಳ ಗಡಿ ದಾಟಿಸಿದರು.

ಕೃನಾಲ್ ಪಾಂಡ್ಯ ಮ್ಯಾಜಿಕ್

ಈ ಹಂತದಲ್ಲಿ ದಾಳಿಗಿಳಿದ ಕೃನಾಲ್ ಪಾಂಡ್ಯ 10 ನೇ ಓವರ್‌ನಲ್ಲಿ ರಿಯಾನ್ ಪರಾಗ್ ಅವರ ವಿಕೆಟ್ ಪಡೆದರು. ನಂತರ ತಮ್ಮ ಮೂರನೇ ಓವರ್‌ನಲ್ಲೂ ಕೃನಾಲ್, ನಿತೀಶ್ ಅವರನ್ನು ಔಟ್ ಮಾಡಿದರು. ಇದರ ನಂತರ, ಕಳೆದ 2 ಪಂದ್ಯಗಳಲ್ಲಿ ಸೋಲಿನ ಖಳನಾಯಕರೆನಿಸಿಕೊಂಡಿದ್ದ ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ಮೇಲೆ ಜವಾಬ್ದಾರಿ ಬಿತ್ತು. ಇಬ್ಬರ ನಡುವಿನ ಪಾಲುದಾರಿಕೆ ಬೆಳೆಯುತ್ತಿರುವಂತೆ ತೋರುತ್ತಿತ್ತು ಆದರೆ 17 ನೇ ಓವರ್‌ನಲ್ಲಿ ಹ್ಯಾಜಲ್‌ವುಡ್ ಹೆಟ್ಮೆಯರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಹೇಜಲ್​ವುಡ್ ಗೆಲುವಿನ ಹೀರೋ

ನಂತರ 18 ನೇ ಓವರ್‌ ಎಸೆದ ಭುವನೇಶ್ವರ ಕುಮಾರ್ ಅವರ ಓವರ್‌ನಲ್ಲಿ ಜುರೆಲ್ 22 ರನ್ ಗಳಿಸುವ ಮೂಲಕ ತಂಡವನ್ನು ಮತ್ತೆ ಗೆಲುವಿನ ಲಯಕ್ಕೆ ಮರಳಿ ತಂದರು. ಆದರೆ ಪಂದ್ಯದ ಭವಿಷ್ಯ 19ನೇ ಓವರ್‌ನಲ್ಲಿ ನಿರ್ಧರಿಸಲ್ಪಟ್ಟಿತು. ಆಸ್ಟ್ರೇಲಿಯಾದ ಅನುಭವಿ ವೇಗಿ ಮೊದಲು ಜುರೆಲ್ ಮತ್ತು ನಂತರ ಜೋಫ್ರಾ ಆರ್ಚರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಕೇವಲ 1 ರನ್ ನೀಡಿದರು. ಹೀಗಾಗಿ 20 ನೇ ಓವರ್‌ನಲ್ಲಿ ರಾಜಸ್ಥಾನ್ ಗೆಲುವಿಗೆ  17 ರನ್‌ ಬೇಕಾಗಿದ್ದವು. ಈ ವೇಳೆ ದಾಳಿಗಿಳಿದ ಯಶ್ ದಯಾಳ್ ರಾಜಸ್ಥಾನವನ್ನು 194 ಕ್ಕೆ ಸೀಮಿತಗೊಳಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *