CSK vs SRH: ತವರಿನಲ್ಲೇ 4ನೇ ಹೀನಾಯ ಸೋಲು! ಚೆಪಾಕ್​​ನಲ್ಲಿ ಇತಿಹಾಸ ಸೃಷ್ಟಿಸಿದ ಸನ್​ರೈಸರ್ಸ್ ಹೈದರಾಬಾದ್​.

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್​ಕೆ ತಂಡ ಸನ್​​ರೈಸರ್ಸ್ ಹೈದರಾಬಾದ್ ವಿರುದ್ಧ 154 ರನ್​ಗಳಿಗೆ ಆಲೌಟ್ ಆಗಿ ಸೋಲು ಕಂಡಿತು. ಹೈದರಾಬಾದ್ 155 ರನ್​ಗಳ ಗುರಿ 18.4 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಸಾಧಿಸಿತು.

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ (MA Chidambaram Stadium) ನಡೆದ ಪಂದ್ಯದಲ್ಲಿ ಸಿಎಸ್​ಕೆ ತಂಡ ಸನ್​​ರೈಸರ್ಸ್ ಹೈದರಾಬಾದ್​ ವಿರುದ್ಧ ಹೀನಾಯ ಸೋಲು ಕಂಡಿದೆ. ಪ್ಲೇ ಆಫ್ ರೇಸ್​​ನಲ್ಲಿ ಉಳಿಯಬೇಕಾದರೆ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಸಿಎಸ್​ಕೆ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿತು. 19.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 154ಕ್ಕೆ ಆಲೌಟ್ ಆಗಿತ್ತು. 155 ರನ್​ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಹೈದರಾಬಾದ್ ತಂಡ 18.4 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿ ಪ್ಲೇ ಆಫ್ ರೇಸ್​​​ನಲ್ಲಿ ಉಳಿದುಕೊಂಡಿದೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಚೆಪಾಕ್ ಮೈದಾನದಲ್ಲಿ ಇದು ಸನ್​ರೈಸರ್ಸ್ ಹೈದರಾಬಾದ್ ತಂಡದ ಮೊದಲ ಜಯವಾಗಿದೆ.

155 ರನ್​ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಮೊದಲ ಓವರ್​​ನ 2ನೇ ಎಸೆತದಲ್ಲೇ ಸ್ಫೋಟಕ ಆಟಗಾರ ಅಭಿಷೇಕ್ ಶರ್ಮಾ (0) ವಿಕೆಟ್ ಕಳೆದುಕೊಂಡಿತು. ಟ್ರಾವಿಸ್ ಹೆಡ್​ ಹಾಗೂ ಇಶಾನ್ ಕಿಶನ್ 31 ಎಸೆತಗಳಲ್ಲಿ 37 ರನ್​ ಸೇರಿಸಿದರು. ಕಳೆದ ಕೆಲವು ಪಂದ್ಯಗಳಿಂದ ಕಳಪೆ ಪ್ರದರ್ಶನ ತೋರುತ್ತಿರುವ ಹೆಡ್​ (19) ಇಂದೂ ಕೂಡ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ನಂತರ ಸತತ 7 ಪಂದ್ಯಗಳಲ್ಲಿ ವಿಫಲರಾಗಿದ್ದ ಇಶಾನ್ ಕಿಶನ್ ಇಂದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 34 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 44 ರನ್​ಗಳಿಸಿದರು.  ಆದರೆ ಕಳೆದ ಪಂದ್ಯದಲ್ಲಿ 70 ರನ್​ಗಳಿಸಿ ಅಬ್ಬರಿಸಿದ್ದ ಕ್ಲಾಸೆನ್ ಇಂದು ಕೇವಲ 7 ರನ್​ಗಳಿಸಿದರೆ, ಅನಿಕೇತ್ ವರ್ಮಾ 19 ಎಸೆತಗಳಲ್ಲಿ 19 ರನ್​ಗಳಿಸಿ ಔಟ್ ಆದರು.

ಕಮಿಂಡು ಮೆಂಡಿಸ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 6ನೇ ವಿಕೆಟ್ ಜೊತೆಯಾಟದಲ್ಲಿ ಮುರಿಯದ 49 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಇದು ಚೆಪಾಕ್​​​ನಲ್ಲಿ ಹೈದರಾಬಾದ್​ಗೆ ಐಪಿಎಲ್ ಇತಿಹಾಸದಲ್ಲೇ ಮೊದಲ ಗೆಲುವಾಗಿದೆ. ನಿತೀಶ್ 13 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 19 ರನ್​ಗಳಿಸಿದರೆ, ಕಮಿಂಡು ಮೆಂಡಿಸ್ 22 ಎಸೆತಗಳಲ್ಲಿ 3 ಬೌಂಡರಿ ಅಜೇಯ 32 ರನ್​ಗಳಿಸಿದರು. ಇದು ಹೈದರಾಬಾದ್​ಗೆ 18ನೇ ಆವೃತ್ತಿಯಲ್ಲಿ 3ನೇ ಗೆಲುವಾಗಿದೆ. ಪ್ಲೇ ಆಫ್ ಪ್ರವೇಶಿಸಬೇಕಾದರೆ ಉಳಿದ 5 ಪಂದ್ಯಗಳನ್ನೂ ಗೆಲ್ಲಬೇಕಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ನೂರ್ ಅಹ್ಮದ್ 42ಕ್ಕೆ 2 ವಿಕೆಟ್ ಪಡೆದರೆ, ಅನ್ಶುಲ್ ಕಾಂಬೋಜ್ 16ಕ್ಕೆ1, ಖಲೀಲ್ ಅಹ್ಮದ್ 21ಕ್ಕೆ1, ರವೀಂದ್ರ ಜಡೇಜಾ 22ಕ್ಕೆ 1 ಮತ್ತು ಕಾಂಬೋಜ್ 16ಕ್ಕೆ1 ವಿಕೆಟ್ ಪಡೆದರಾದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಸಿಎಸ್​ಕೆ ಈ ಸೋಲಿನ ಮೂಲಕ ಬಹುತೇಕ ಟೂರ್ನಿಯಿಂದ ಹೊರಬಿದ್ದಿತು.

ಟಾಸ್​ ಸೋತು ಬ್ಯಾಟಿಂಗ್​​ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಖಾತೆ ತೆರಯುವ ಮುನ್ನವೇ ಶೇಕ್ ರಶೀದ್​(0) ವಿಕೆಟ್ ಕಳೆದುಕೊಂಡಿತು. 3ನೇ ಕ್ರಮಾಂಕದಲ್ಲಿ ಬಂದ ಸ್ಯಾಮ್​ ಕರನ್ 9 ಎಸೆತಗಳಲ್ಲಿ 9 ರನ್​​ಗಳಿಸಿ ಔಟ್ ಆದರೇ ಪವರ್​​ ಪ್ಲೇನ ಕೊನೆಯ ಓವರ್​​ನಲ್ಲಿ 19 ಎಸೆತಗಳಲ್ಲಿ 6 ಬೌಂಡರಿ ಸಹಿತ 30 ರನ್​ಗಳಿಸಿದ್ದ ಆಯುಷ್ ಮ್ಹಾತ್ರೆ ಕಮಿನ್ಸ್​ಗೆ ವಿಕೆಟ್ ಒಪ್ಪಿಸಿದರು.

4ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರವೀಂದ್ರ ಜಡೇಜಾ ಹಾಗೂ ಡೆವಾಲ್ಡ್ ಬ್ರೆವಿಸ್​ 4ನೇ ವಿಕೆಟ್​​ಗೆ 27 ರನ್ ಸೇರಿಸಿದರು. ಜಡೇಜಾ 17 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 21 ರನ್​ಗಳಿಸಿ ಕುಮಿಂದು ಮೆಂಡಿಸ್​​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.

ಮಿಂಚಿದ ಬ್ರೆವಿಸ್

5ನೇ ವಿಕೆಟ್​ಗೆ ಒಂದಾದ ಬ್ರೆವಿಸ್​ ಹಾಗೂ ದುಬೆ 20 ಎಸೆತಗಳಲ್ಲಿ 40 ರನ್​ ಸೇರಿಸಿದರು. ಸಿಎಸ್​ಕೆ ಪರ ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ ಬ್ರೆವಿಸ್ 25 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್​ಗಳ ಸಹಿತ 42 ರನ್​ಗಳಿಸಿ ಔಟ್ ಆದರು. ಈ ಪಂದ್ಯದಲ್ಲಿ ಇದೇ ದೊಡ್ಡ ಜೊತೆಯಾಟ ಮತ್ತು ಬ್ರೆವಿಸ್​​ ಸಿಡಿಸಿದ 42 ರನ್​ಗಳೇ ಗರಿಷ್ಠ ಸ್ಕೋರ್ ಆಯಿತು.

ದಿಢೀರ್ ಕುಸಿತ ಕಂಡ ಸಿಎಸ್​ಕೆ

ದುಬೆ 9 ಎಸೆತಗಳಲ್ಲಿ 12ರನ್​ಗಳಿಸಿದ ಔಟ್ ಆದರೆ, ಕೊನೆಯ ಓವರ್​​ನಲ್ಲಿ ಔಟ್ ಆದ ದೀಪಕ್ ಹೂಡಾ 21 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸೇರಿದಂತೆ 22 ರನ್​ಗಳಿಸಿ 3ನೇ  ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಎಂಎಎಸ್ ಧೋನಿ 10 ಎಸೆತಗಳಲ್ಲಿ 6 ರನ್, ಅನ್ಶುಲ್ ಕಾಂಬೋಜ್ 2, ನೂರ್ ಅಹ್ಮದ್ 2 ರನ್​ಗಳಿಸಿ ಔಟ್ ಆದರು.

ಹರ್ಷಲ್ ಪಟೇಲ್ 4 ವಿಕೆಟ್​

ಸನ್​ರೈಸರ್ಸ್ ಹೈದರಾಬಾದ್ ಪರ ಹರ್ಷಲ್ ಪಟೇಲ್ 28ಕ್ಕೆ 4 ವಿಕೆಟ್ ಪಡೆದು ಸಿಎಸ್​ಕೆ ಪತನಕ್ಕೆ ಕಾರಣರಾದರು. ನಾಯಕ ಪ್ಯಾಟ್ ಕಮಿನ್ಸ್ 21ಕ್ಕೆ2, ಜಯದೇವ್ ಉನಾದ್ಕಟ್ 21ಕ್ಕೆ 2, ಮೊಹಮ್ಮದ್ ಶಮಿ 28ಕ್ಕೆ1 ಹಾಗೂ ಕಮಿಂದು ಮೆಂಡಿಸ್ 26ಕ್ಕೆ1 ವಿಕೆಟ್ ಪಡೆದು ಮಿಂಚಿದರು.

Source:News 18 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1



















Leave a Reply

Your email address will not be published. Required fields are marked *