ಜಾಹೀರಾತು ನೋಡಿ ಜ್ಯೋತಿಷಿಗೆ ಕರೆ ಮಾಡಿದ ಕೊಪ್ಪಳದ ಮಹಿಳೆಗೆ 8 ಲಕ್ಷ ರೂ. ಪಂಗನಾಮ!

ಜಾಹೀರಾತು ನೋಡಿ ಜ್ಯೋತಿಷಿಗೆ ಕರೆ ಮಾಡಿದ್ದ ಮಹಿಳೆಯೊಬ್ಬರಿಗೆ ಆ ಜ್ಯೋತಿಷಿ ಸುಮಾರು 8 ಲಕ್ಷ ರೂ. ನಾಮ ಹಾಕಿರುವ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಠಾಣಾ ವ್ಯಾಪ್ತಿಯ ಮಿಯಾಪುರ ಗ್ರಾಮದ ಮಹಿಳೆಯೊಬ್ಬರು 2025ರ ಜನವರಿಯಲ್ಲಿ ಫೇಸ್ ಬುಕ್ ನಲ್ಲಿ ಒಬ್ಬ ಜ್ಯೋತಿಷಿಯ ಜಾಹೀರಾತು ನೋಡಿದ್ದರು. ಅಲ್ಲಿರುವ ಸಂಖ್ಯೆಗೆ ಕರೆ ಮಾಡಿ ತಮ್ಮ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಆತ ಮಾತನಾಡಿ, ಕುಟುಂಬದಲ್ಲಿ ದೋಷವಿದ್ದು, ಅದಕ್ಕೆ ಪೂಜೆಯೊಂದನ್ನು ಮಾಡಿಸಬೇಕು. ಇಲ್ಲದಿದ್ದರೆ ಕುಟುಂಬಸ್ಥರಿಗೆ ಸಾವು ಬರುತ್ತದೆ” ಎಂದು ಹೇಳಿದ್ದ. ಅದರಿಂದ ಹೆದರಿದ್ದ ಮಹಿಳೆಯು 7,94,500 ರೂ.ಗಳನ್ನು ಹಂತಹಂತವಾಗಿ ಜ್ಯೋತಿಷಿಗೆ ಆನ್ ಲೈನ್ ಮೂಲಕ ಕಳುಹಿಸಿದ್ದರು. ಕಡೆಗೊಂದು ದಿನ ಆಕೆ ತಾನು ಮೋಸ ಹೋಗಿರುವುದು ಖಚಿತವಾಗಿದ್ದು ಪೊಲೀಸರಿಗೆ ದೂರು ಕೊಟ್ಟಿದ್ದರು. ಆಗ ಪೊಲೀಸರು ಕಾರ್ಯಾಚರಣೆ ನಡೆಸಿ ಜ್ಯೋತಿಷಿಯನ್ನು ಬಂಧಿಸಿದ್ದಾರೆ.

ಹೈಲೈಟ್ಸ್‌:

  • ಫೇಸ್ ಬುಕ್ ಜಾಹೀರಾತು ನೋಡಿ ಜ್ಯೋತಿಷಿಗೆ ಮಹಿಳೆಯಿಂದ ಕರೆ.
  • ಆಕೆಯ ಕುಟುಂಬಕ್ಕೆ ಗಂಡಾಂತರ ಎಂದು ಹೇಳಿ ಆಕೆಗೆ ಅಂದಾಜು 8 ಲಕ್ಷ ರೂ. ವಂಚಿಸಿರುವ ಜ್ಯೋತಿಷಿ.
  • ಪೊಲೀಸರಿಗೆ ನೀಡಿದ ದೂರಿನನ್ವಯ ಹಣದ ಸಮೇತ ಜ್ಯೋತಿಷಿ ಬಂಧನ.

ಹನುಮಸಾಗರ (ಕೊಪ್ಪಳ): ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಜ್ಯೋತಿಷಿಯೊಬ್ಬರ ಮಾತು ನಂಬಿದ ಮಹಿಳೆಯೊಬ್ಬರು 7,94,500 ರೂ. ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಕುಷ್ಟಗಿ ಠಾಣೆ ವ್ಯಾಪ್ತಿಯ ಮಿಯಾಪುರ ಗ್ರಾಮದ ಮಹಿಳೆಯೊಬ್ಬರು 2025, ಜ.25ರಂದು ಫೇಸ್‌ಬುಕ್‌ನಲ್ಲಿ ಜ್ಯೋತಿಷಿಯೊಬ್ಬರ ಪೇಜ್‌ನಲ್ಲಿದ್ದ ಜಾಹೀರಾತು ಗಮನಿಸಿದ್ದಾರೆ.

ಅಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆಮಾಡಿ ತನ್ನ ಕುಟುಂಬದ ಸಮಸ್ಯೆಗಳನ್ನು ತಿಳಿಸಿದ್ದಾರೆ. ಆ ಮೂಲಕ ಆ ಮಹಿಳೆಗೆ ಜ್ಯೋತಿಷಿಯ ಪರಿಚಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಜ್ಯೋತಿಷಿ, ‘‘ಮಹಿಳೆಯ ಕುಟುಂಬದಲ್ಲಿದೋಷವಿದ್ದು, ಪರಿಹಾರ ಮಾಡಬೇಕಾಗಿದೆ. ಅದಕ್ಕೆ ಕೆಲವು ಪೂಜೆ ಮಾಡಿಸಬೇಕು. ಒಂದು ವೇಳೆ ಪೂಜೆ ಮಾಡಿಸದಿದ್ದರೆ ಕುಟುಂಬದವರಿಗೆ ಸಾವು ಬರುತ್ತದೆ,’’ ಎಂದಿದ್ದಾನೆ.

ಭಯಗೊಂಡ ಮಹಿಳೆ, ಮಾ.19 ರಂದು ಜ್ಯೋತಿಷಿಯ ಖಾತೆಗೆ 5,94,500 ರೂ.ಗಳನ್ನು ಆನ್‌ಲೈನ್‌ ಮೂಲಕ ಪಾವತಿಸಿದ್ದಾರೆ. ನಂತರ ಬೆಂಗಳೂರಿನಿಂದ ಆಗಮಿಸಿದ್ದ ಜ್ಯೋತಿಷಿ, ಮತ್ತಷ್ಟು ಪೂಜೆಗಳನ್ನು ಕೈಗೊಳ್ಳಬೇಕೆಂದು ನಂಬಿಸಿ, ಹನುಮಸಾಗರ ಹೊರವಲಯದಲ್ಲಿ2 ಲಕ್ಷ ರೂ. ನಗದು ಪಡೆದಿದ್ದಾನೆ. ಇದಾದ ಒಂದು ವಾರದ ನಂತರ ಮಹಿಳೆ ತಾನು ಮೋಸ ಹೋಗಿರುವುದು ಮನವರಿಕೆಯಾಗಿದೆ. ಏ.3ರಂದು ಹನುಮಸಾಗರ ಠಾಣೆಗೆ ದೂರು ನೀಡಿದ್ದಾರೆ.

ದೂರು ಆಧರಿಸಿ, ಆರೋಪಿ ಪತ್ತೆಗೆ ಮುಂದಾದ ಪೊಲೀಸರು, ಜ್ಯೋತಿಷಿಯ ಬ್ಯಾಂಕ್‌ ಖಾತೆಯ ವಹಿವಾಟು ಸ್ಥಗಿತಗೊಳಿಸುವಂತೆ ಸಂಬಂಧಿಸಿದ ಬ್ಯಾಂಕ್‌ಗೆ ತಿಳಿಸಿದರು. ನಂತರ ಬೆಂಗಳೂರಿಗೆ ತೆರಳಿದ ಪೊಲೀಸರು ವಂಚಕ ಜ್ಯೋತಿಷಿ ಇರುವ ಸ್ಥಳ ತಿಳಿಯಲು 2 ದಿನ ಅಲ್ಲಿಯೇ ಠಿಕಾಣಿ ಹೂಡಿದ್ದರು.

ಏ.6ರಂದು ಆರೋಪಿಯನ್ನು ಬಂಧಿಸಿ, ಏ.7 ರಂದು ಹನುಮಸಾಗರ ಠಾಣೆಗೆ ಕರೆತಂದರು. ಆರೋಪಿಯನ್ನು ಹಣದ ಸಮೇತ ಕುಷ್ಟಗಿ ಕೋರ್ಟ್‌ಗೆ ಹಾಜರು ಪಡಿಸುವಲ್ಲಿಯಶಸ್ವಿಯಾದರು. ಈ ಕಾರ್ಯಾಚರಣೆಗೆ ಪಿಎಸ್‌ಐ ಧನುಂಜಯ ಎಂ., ಎಎಸ್‌ಐ ಬಸನಗೌಡ ಪಾಟೀಲ್‌, ಪೊಲೀಸ್‌ ಕಾನ್ಸ್‌ಸ್ಟೇಬಲ್ ಚಂದ್ರಶೇಖರ ಪೂಜಾರಿ ಸಾಥ್‌ ನೀಡಿದ್ದರು.

Source : Vijayakarnataka

Views: 28

Leave a Reply

Your email address will not be published. Required fields are marked *