ಪ.ಜಾತಿ ಒಳಮೀಸಲಾತಿ: ಮೇ 5ರಿಂದ ಡೋರ್ ಟು ಡೋರ್ ಸಮೀಕ್ಷೆ; 58,960 ಗಣತಿದಾರರಿಂದ ಸಮೀಕ್ಷೆಗೆ ಸಿದ್ಧತೆ.

SC INTERNAL RESERVATION : ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗಕ್ಕೆ ಆರು ತಿಂಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಸೂಚನೆ ನೀಡಿತ್ತು.‌

ಬೆಂಗಳೂರು: ಎಸ್​ಸಿ ಸಮುದಾಯದ ಬಹುದಿನಗಳ ಬೇಡಿಕೆಯಾದ ಒಳಮೀಸಲಾತಿಗೆ ಸಮೀಕ್ಷೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ. ಮೇ 5ರಿಂದ ಮನೆ ಮನೆ ಸಮೀಕ್ಷೆ ಆರಂಭಿಸಲು ತಯಾರಿ ನಡೆಸಿದೆ.

ಒಳಮೀಸಲಾತಿ‌ ಎಸ್​ಸಿ ಸಮುದಾಯದ ದಶಕಗಳ ಬೇಡಿಕೆಯಾಗಿದೆ. ಎಸ್​ಸಿ ಸಮುದಾಯದಲ್ಲಿನ ಅತ್ಯಂತ ಹಿಂದುಳಿದ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ ದಶಕಗಳಿಂದ ಹೋರಾಟ ನಡೆಯುತ್ತಿದೆ. 2024ರ ಆ.1 ರಂದು ರಾಜ್ಯಗಳಿಗೆ ಎಸ್‌ಸಿ ಒಳಮೀಸಲು ಕಲ್ಪಿಸುವ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರುಳ್ಳ ಪೀಠ ಮಹತ್ವದ ತೀರ್ಪು ನೀಡಿತ್ತು. 2024ರ ನ.12ಕ್ಕೆ ಎಸ್‌ಸಿ ಮೀಸಲು ವರ್ಗೀಕರಣಕ್ಕೆ ಶಿಫಾರಸುಗಳ ಸಹಿತ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿತ್ತು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಒಟ್ಟು 101 ಜಾತಿಗಳಿವೆ. ಈ ಪೈಕಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಉಪ ಜಾತಿಗಳು ಯಾವ ಜಾತಿಗೆ ಸೇರಿವೆ ಎಂಬ ಗೊಂದಲವನ್ನೂ ಇತ್ಯರ್ಥಪಡಿಸಬೇಕಾಗಿದೆ. ದಾಖಲೆ, ಪುರಾವೆ, ಅಂತರ್ ಹಿಂದುಳಿದಿರುವಿಕೆ ಇನ್ನಿತರ ಮಾಹಿತಿ ಸಂಗ್ರಹಿಸಿ ವೈಜ್ಞಾನಿಕ ಮತ್ತು ತರ್ಕಬದ್ಧವಾಗಿ ಎಸ್‌ಸಿ ಮೀಸಲು ವರ್ಗೀಕರಣದ ವರದಿ ಸಿದ್ಧಪಡಿಸಬೇಕಾಗಿದೆ. ಎರಡು ತಿಂಗಳಲ್ಲಿ ವರದಿ ನೀಡಲು ಸೂಚಿಸಲಾಗಿತ್ತು.‌ ಆಯೋಗ ಬಳಿಕ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Dataಕ್ಕಾಗಿ ಸಮೀಕ್ಷೆ ನಡೆಸುವ ಶಿಫಾರಸು ಮಾಡಿತ್ತು.‌ ಅದರಂತೆ ರಾಜ್ಯ ಸಚಿವ ಸಂಪುಟ ಸಭೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗಕ್ಕೆ ಆರು ತಿಂಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚನೆ ನೀಡಿತ್ತು.‌

ಮೇ 5ರಿಂ ಡೋರ್ ಟು ಡೋರ್ ಸಮೀಕ್ಷೆ ಆರಂಭ: ಇದೀಗ ನಾಗಮೋಹನ್ ದಾಸ್ ಆಯೋಗ ಪರಿಶಿಷ್ಟ ಜಾತಿ ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಸಮುದಾಯದ ಉಪಜಾತಿಗಳು, ಪ್ರಾತಿನಿಧ್ಯತೆ ಕುರಿತು ಮನೆ ಮನೆಗೆ ತೆರಳಿ ಮೇ 5 ರಿಂದ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ.‌ ಮೇ 5ರಿಂದ ಮೇ 17ರ ವರೆಗೆ ಮನೆ ಮನೆಗೆ ತೆರಳಿ ಎಸ್​ಸಿ ಸಮುದಾಯದ ಉಪಜಾತಿಗಳು, ಪ್ರಾತಿನಿತ್ಯ, ಆರ್ಥಿಕ ಸ್ಥಿತಿಗತಿ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಲಿದೆ. ಈ ಸಂಬಂಧ ಪ್ರಶ್ನಾವಳಿಗಳೂ ಸಿದ್ಧವಾಗಿದ್ದು, ಸಮೀಕ್ಷೆಗಾಗಿ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗುತ್ತಿದೆ.

ಮೇ 19ರಿಂದ ಮೇ 21ರ ವರೆಗೆ ಪಂಚಾಯತ್ ಮಟ್ಟದಲ್ಲಿ ಕೇಂದ್ರಗಳನ್ನು ರಚಿಸಲಿದ್ದು, ಯಾರು ಡೋರ್ ಟು ಡೋರ್ ಸಮೀಕ್ಷೆಗೊಳಪಟ್ಟಿಲ್ಲ ಅವರು ಅಲ್ಲಿಗೆ ಹೋಗಿ ಮಾಹಿತಿ, ಉಪಜಾತಿಗಳ, ಆದಾಯ ಮುಂತಾದ ಅಂಶಗಳನ್ನು ಡಿಕ್ಲೇರ್ ಮಾಡಬಹುದಾಗಿದೆ. ಕೇಂದ್ರಗಳಿಗೆ ಹೋಗಲು ಸಾಧ್ಯವಾಗದೇ ಇರುವವರು ಮೇ 19ರಿಂದ ಮೇ 23ರಂದು ಆನ್ ಲೈನ್ ಮೂಲಕನೂ ಡಿಕ್ಲೇರ್ ಮಾಡುವ ಅವಕಾಶ ಕೊಡಲಾಗಿದೆ.‌ ಇದಕ್ಕಾಗಿ ವಿಶೇಷ ಆ್ಯಪ್, ವೆಬ್ ಪೋರ್ಟಲ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ತಿಳಿಸಿದ್ದಾರೆ.

58,960 ಗಣತಿದಾರರ ನೇಮಕ: ಪರಿಶಿಷ್ಟ ಜಾತಿಗಳ ಉಪಜಾತಿಗಳು, ಪ್ರಾತಿನಿಧ್ಯತೆ ಬಗ್ಗೆ ಸಮಗ್ರ ಸಮೀಕ್ಷೆ ನಡೆಸುವುದಕ್ಕಾಗಿ 58,960 ಗಣತಿದಾರರನ್ನು (Enumerators) ನೇಮಿಸಲಾಗಿದೆ. ಈ ಗಣತಿದಾರರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಸುಮಾರು 6,000 ಸೂಪರ್ ವೈಸರ್ಸ್ ಅನ್ನು ನಿಯೋಜಿಸಲಾಗಿದೆ. ಇವರು ಸಮೀಕ್ಷೆಯ ಮೇಲೆ ನಿಗಾ ವಹಿಸಲಿದ್ದಾರೆ.

ಈಗಾಗಲೇ ಗಣತಿದಾರರಿಗೆ ತರಬೇತಿ ಕಾರ್ಯ ಪ್ರಗತಿಯಲ್ಲಿದೆ. ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ಸ್​ಗಳಿದ್ದು, ಅವರು ಜಿಲ್ಲಾ ಮಟ್ಟದಲ್ಲಿ ಗಣತಿದಾರರಿಗೆ ತರಬೇತಿ ನೀಡಲಿದ್ದಾರೆ. ಬೆಂಗಳೂರಿನಲ್ಲಿ 150 ಮಾಸ್ಟರ್ ಟ್ರೈನರ್ಸ್​ಗೆ ತರಬೇತಿ ನೀಡಲಾಗಿದೆ.‌ ಇಂದಿನಿಂದ ಮೂರು ದಿನ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಿದ್ದಾರೆ. ಏ.30ರಿಂದ ಮೇ 4ರ ವರೆಗೆ ತರಬೇತಿ ನೀಡಲಾಗುವುದು. ಬಳಿಕ ಮೇ 5ರಿಂರ ಮನೆ ಮನೆಗೆ ತೆರಳಿ ಪ್ರಶ್ನಾವಳಿಗಳನ್ನು ಕೊಟ್ಟು ನಿಗದಿತ ನಮೂನೆಯಲ್ಲಿ ಮಾಹಿತಿ ಕಲೆಹಾಕಲಿದ್ದಾರೆ.

ಜಾತಿಗಣತಿ ವರದಿ ನೀಡುವಂತೆ ನಾಗಮೋಹನ್ ದಾಸ್ ಪತ್ರ: ಇತ್ತ ಜಾತಿ ಗಣತಿ ವರದಿಯಲ್ಲಿನ ಎಸ್​ಸಿ ಸಮುದಾಯದ ಅಂಕಿಅಂಶವನ್ನು ಪಡೆಯಲು ನಾಗಮೋಹನ್ ದಾಸ್ ಆಯೋಗ ಮುಂದಾಗಿದೆ. ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2015ರ (ಜಾತಿ ಜನಗಣತಿ) ದತ್ತಾಂಶಗಳ ಅಧ್ಯಯನ ವರದಿಯನ್ನು ಏ.11ರಂದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗವು ಈ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ 2024ರ ಫೆ. 29ರಂದು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿರುವ ನಾಗಮೋಹನ್ ದಾಸ್, ಜಾತಿ ಗಣತಿ ವರದಿ ದತ್ತಾಂಶ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.

ಸೋರಿಕೆಯಾದ ಜಾತಿಗಣತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಜನಸಂಖ್ಯೆ 1,09,29,347 ಇದೆ. ಈ ಪೈಕಿ ನಗರದಲ್ಲಿ 28,47,232 ಇದ್ದರೆ, ಗ್ರಾಮೀಣ ಪ್ರದೇಶದಲ್ಲಿ 80,82,115 ಇದ್ದಾರೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಎಸ್​ಸಿ ಸಮುದಾಯದಲ್ಲಿನ ಅಧಿಕೃತ ಉಪಜಾತಿ ಇರುವುದು 101. ಆದರೆ, ಜಾತಿ ಗಣತಿಯಲ್ಲಿ ಈ ಉಪಜಾತಿ ಸಂಖ್ಯೆ 182ಕ್ಕೆ ಏರಿಕೆಯಾಗಿದೆ. ಹೀಗಾಗಿ ಒಳ ಮೀಸಲಾತಿ ಕಲ್ಪಿಸಲು ದತ್ತಾಂಶ ಸಂಗ್ರಹಕ್ಕಾಗಿ ರಚಸಲಾಗಿರುವ ನಾಗಮೋಹನ್ ದಾಸ್ ಆಯೋಗ ಈ ಜಾತಿ ಗಣತಿ ದತ್ತಾಂಶ ಪಡೆದು ಪರಿಶೀಲಿಸಲು ಮುಂದಾಗಿದೆ.

ಎಚ್.ಎನ್.ನಾಗಮೋಹನ್‌ದಾಸ್ ಅವರು ಜಾತಿ ಜನಗಣತಿ ಸಮೀಕ್ಷಾ ವರದಿ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಇನ್ನೂ ಸರ್ಕಾರ ಈ ದತ್ತಾಂಶವನ್ನು ನಾಗಮೋಹನ್ ದಾಸ್ ಅವರಿಗೆ ನೀಡಿಲ್ಲ. ಸರ್ಕಾರ ಆ ವರದಿಯನ್ನು ನೀಡಿದರೆ ಅದರಲ್ಲಿನ ಎಸ್​ಸಿ ಉಪಜಾತಿ ದತ್ತಾಂಶಗಳನ್ನು ಪರಿಶೀಲನೆ ನಡೆಸಲಾಗುವುದು. ಆದರೆ, ಈವರೆಗೆ ವರದಿಯನ್ನು ಸರ್ಕಾರ ನೀಡಿಲ್ಲ ಎಂದು ತಿಳಿಸಿದ್ದಾರೆ.

“ಮೇ 5-17ರ ವರೆಗೆ ಡೋರ್ ಟು ಡೋರ್ ಸಮೀಕ್ಷೆ ನಡೆಯಲಿದೆ. ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಲಾಗಿದೆ. 58,960 ಗಣತಿದಾರರನ್ನು ನೇಮಕ ಮಾಡಲಾಗಿದೆ. ಆನ್ ಲೈನ್ ಮೂಲಕವೂ ಮಾಹಿತಿ ನೀಡಬಹುದಾಗಿದೆ. ಈ ಸಂಬಂಧ ಪ್ರಶ್ನಾವಳಿಯನ್ನೂ ಸಿದ್ಧಪಡಿಸಲಾಗಿದೆ. ಎಸ್ ಸಿ ಸಮುದಾಯದ ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಖರ ಮಾಹಿತಿಯನ್ನು ನೀಡಬೇಕು. ಇದರಿಂದ ಆದಷ್ಟು ಬೇಗ ಒಳಮೀಸಲಾತಿಯನ್ನು ಕಲ್ಪಿಸಲು ಸಾಧ್ಯವಾಗಲಿದೆ” ಎಂದು ಎಚ್.ಎನ್. ನಾಗಮೋಹನ್‌ದಾಸ್ ತಿಳಿಸಿದ್ದಾರೆ.

Source : ETV Bharat

Leave a Reply

Your email address will not be published. Required fields are marked *