IPL 2025 Playoff Scenario: ಐಪಿಎಲ್ನಲ್ಲಿ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ 16 ಅಂಕಗಳನ್ನು ಪಡೆದರೆ ಸಾಕಿತ್ತು. ಆದರೆ ಈ ಬಾರಿ ಎಲ್ಲಾ ತಂಡಗಳಿಂದ ಉತ್ತಮ ಪೈಪೋಟಿ ಕಂಡು ಬಂದಿದೆ. ಹೀಗಾಗಿ ಪ್ಲೇಆಫ್ ಖಚಿತಪಡಿಸಿಕೊಳ್ಳಲು ಕನಿಷ್ಠ 18 ಅಂಕಗಳನ್ನು ಪಡೆಯುವುದು ಅನಿವಾರ್ಯವಾಗಿ ಮಾರ್ಪಟ್ಟಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ 54 ಪಂದ್ಯಗಳು ಪೂರ್ಣಗೊಂಡಿದೆ. ಈಗಾಗಲೇ ಬಹುತೇಕ ಪಂದ್ಯಗಳು ಮುಗಿದರೂ ಯಾವುದೇ ತಂಡ ಅಧಿಕೃತವಾಗಿ ಪ್ಲೇಆಫ್ಗೆ ಪ್ರವೇಶಿಸಿಲ್ಲ ಎಂಬುದು ವಿಶೇಷ. ಅಂದರೆ 10 ತಂಡಗಳಲ್ಲಿ 8 ಟೀಮ್ಗಳು ಇನ್ನೂ ಸಹ ಪ್ಲೇಆಫ್ ರೇಸ್ನಲ್ಲಿದೆ. ಅದರಂತೆ ಯಾವ ತಂಡ ಎಷ್ಟು ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೇರಬಹುದು ಎಂದು ನೋಡುವುದಾದರೆ…
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಆರ್ಸಿಬಿ ತಂಡವು 11 ಪಂದ್ಯಗಳಲ್ಲಿ 8 ರಲ್ಲಿ ಗೆಲುವು ದಾಖಲಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ 3 ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಒಂದು ಜಯ ಸಾಧಿಸಿದರೆ 18 ಅಂಕಗಳೊಂದಿಗೆ ಪ್ಲೇಆಫ್ಗೇರಲಿದೆ.
ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿರುವ ಪಂಜಾಬ್ ಕಿಂಗ್ಸ್ 11 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿದೆ. ಇನ್ನುಳಿದಿರುವ 3 ಮ್ಯಾಚ್ಗಳಲ್ಲಿ 2 ಗೆಲುವು ದಾಖಲಿಸಿದರೆ, 19 ಅಂಕಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಲಿದೆ.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡವು ಈವರೆಗೆ 11 ಪಂದ್ಯಗಳನ್ನಾಡಿದ್ದು, ಈ ವೇಳೆ 7 ಜಯ ಸಾಧಿಸಿದೆ. ಇನ್ನುಳಿದ 3 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದರೆ 18 ಅಂಕಗಳೊಂದಿಗೆ ಪ್ಲೇಆಫ್ ಹಂತಕ್ಕೇರಬಹುದು.
ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್ ಮುಂದಾಳತ್ವದ ಗುಜರಾತ್ ಟೈಟಾನ್ಸ್ ತಂಡವು 10 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿದೆ. ಜಿಟಿ ಪಡೆಯು ಇನ್ನುಳಿದಿರುವುದು 4 ಮ್ಯಾಚ್ಗಳಲ್ಲಿ 2 ಜಯ ಸಾಧಿಸಿದರೆ 18 ಅಂಕಗಳನ್ನು ಪಡೆದು ಮುಂದಿನ ಹಂತಕ್ಕೇರಬಹುದು.
ಡೆಲ್ಲಿ ಕ್ಯಾಪಿಟಲ್ಸ್: ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 10 ಪಂದ್ಯಗಳನ್ನಾಡಿದ್ದು, ಈ ವೇಳೆ 6 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ ಮುಂದಿನ 4 ಪಂದ್ಯಗಳಲ್ಲಿ 3 ರಲ್ಲಿ ಜಯ ಸಾಧಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18 ಅಂಕಗಳೊಂದಿಗೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಲಿದೆ.
ಕೊಲ್ಕತ್ತಾ ನೈಟ್ ರೈಡರ್ಸ್: ಅಂಜಿಕ್ಯ ರಹಾನೆ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಕೆಕೆಆರ್ ತಂಡವು ಈವರೆಗೆ ಆಡಿದ 11 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಿದೆ. ಇನ್ನುಳಿದ 3 ಪಂದ್ಯಗಳಲ್ಲೂ ಜಯ ಸಾಧಿಸಿದರೆ 17 ಅಂಕಗಳೊಂದಿಗೆ ಟಾಪ್-4 ನಲ್ಲಿ ಕಾಣಿಸಿಕೊಳ್ಳಬಹುದು.
ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆಡಿದ 11 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ 3 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಸಾಧಿಸಿದರೆ, 16 ಅಂಕಗಳೊಂದಿಗೆ ಪ್ಲೇಆಫ್ನಲ್ಲಿ ಅವಕಾಶ ಸಿಗುವುದನ್ನು ಎದುರು ನೋಡಬಹುದು.
ಸನ್ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು ಈವರೆಗೆ ಆಡಿದ 10 ಪಂದ್ಯಗಳನ್ನಾಡಿದ್ದು, ಈ ವೇಳೆ ಗೆದ್ದಿರುವುದು ಕೇವಲ 3 ಮ್ಯಾಚ್ ಮಾತ್ರ. ಇನ್ನುಳಿದ 4 ಪಂದ್ಯಗಳಲ್ಲಿ ಎಸ್ಆರ್ಹೆಚ್ ತಂಡ ಎಲ್ಲಾ ಪಂದ್ಯಗಳಲ್ಲಿ ಗೆಲುವು ದಾಖಲಿಸಿ, ಅಂಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುವ ತಂಡ 14 ಅಂಕಗಳನ್ನು ಪಡೆದರೆ ಮಾತ್ರ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ಗೆ ಪ್ರವೇಶಿಸಬಹುದು.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವು 12 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದೆ. ಆರ್ಆರ್ ತಂಡಕ್ಕೆ ಇನ್ನೂ 2 ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಜಯ ಸಾಧಿಸಿದರೂ ಪ್ಲೇಆಫ್ಗೆ ಪ್ರವೇಶಿಸಲು ಅವಕಾಶವಿಲ್ಲ. ಅದರಂತೆ ಈಗಾಗಲೇ ಆರ್ಆರ್ ಪಡೆ ಐಪಿಎಲ್ 2025 ರಿಂದ ಹೊರಬಿದ್ದಿದೆ.
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಡಿದ 11 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ ಮಾತ್ರ. ಸಿಎಸ್ಕೆ ತಂಡಕ್ಕೆ ಇನ್ನೂ 3 ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೂ ಚೆನ್ನೈ ಪಡೆ ಪ್ಲೇಆಫ್ಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಿಎಸ್ಕೆ ಕೂಡ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.
Source : TV9 Kannada