MOCK DRILLS IN KARNATAKA : ಮಾಕ್ ಡ್ರಿಲ್ ಹೇಗಿರಲಿದೆ ಎನ್ನುವ ಕುರಿತು ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ನೀಡಿರುವ ಮಾಹಿತಿ ಇಲ್ಲಿದೆ.

ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವ ಈ ಹೊತ್ತಲ್ಲಿ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಕ್ ಡ್ರಿಲ್ ಮಾಡಲು ಕೇಂದ್ರ ಸರ್ಕಾರ ಆಜ್ಞೆ ಹೊರಡಿಸಿದೆ. ಆ ಹಿನ್ನೆಲೆ ದೇಶದ 259 ಸ್ಥಳಗಳಲ್ಲಿ ನಾಳೆ (ಮೇ 7) ಮಾಕ್ ಡ್ರಿಲ್ ನಡೆಯಲಿದೆ.
ಅದರಂತೆ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಈ ಮಾಕ್ ಡ್ರಿಲ್ ಹೇಗೆ ಮತ್ತು ಎಷ್ಟು ಗಂಟೆಗೆ ನಡೆಯಲಿದೆ ಎಂಬುದರ ಕುರಿತು ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ, ರಾಯಚೂರು, ಕಾರವಾರ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಬುಧವಾರ ಮಧ್ಯಾಹ್ನ 4 ಗಂಟೆಯಿಂದ ಮಾಕ್ ಡ್ರಿಲ್ ಶುರುವಾಗಲಿದೆ. ಬೆಂಗಳೂರಿನಲ್ಲಿ ಸುಮಾರು 5 ಸಾವಿರ ಜನ ಹಾಗೂ ಇತರೆ 8 ಜಿಲ್ಲೆಗಳಲ್ಲಿ 1 ಸಾವಿರ ಜನ ಸಿವಿಲ್ ಡಿಫೆನ್ಸ್ ಕುರಿತು ತರಬೇತಿ ಪಡೆದುಕೊಂಡಿದ್ದಾರೆ. ಆ ಎಲ್ಲರೂ ಸಹ ಬುಧವಾರ ನಡೆಯಲಿರುವ ಯುದ್ಧ ಕವಾಯತ್ನಲ್ಲಿ ಭಾಗಿಯಾಗಲಿದ್ದಾರೆ. ತರಬೇತಿ ಪಡೆದ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು. ಯಾವ ಪರಿಕರಣಗಳನ್ನು ಕೊಡಬಹುದು ಎಂಬುದನ್ನು ಚರ್ಚಿಸಿ ಮಾಕ್ ಡ್ರಿಲ್ ಮಾಡಲಾಗುತ್ತದೆ. ಮತ್ತು ಮಾಕ್ ಡ್ರಿಲ್ ಒಂದು ವಾರ ಕಾಲ ನಡೆಯಲಿದೆ ಎಂದು ತಿಳಿಸಿದರು.
ಮುಖ್ಯವಾಗಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆ ಹಾಗೂ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವುದು. ವೈದ್ಯಕೀಯ ಸಂದರ್ಭಗಳಲ್ಲಿ ತುರ್ತು ಸ್ಪಂದನೆಯ ಕುರಿತು ಸನ್ನದ್ಧವಾಗಿರುವುದು ಮಾಕ್ ಡ್ರಿಲ್‌ನ ಮುಖ್ಯ ಉದ್ದೇಶವಾಗಿದೆ. ಮಾಕ್ ಡ್ರಿಲ್‌ನಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸಿವಿಲ್ ಡಿಫೆನ್ಸ್ ಸರ್ವೀಸ್, ಸಿಆರ್ಪಿಎಫ್ ಪಡೆ, ಸಿವಿಲ್ ಪೊಲೀಸ್ ಸಿಬ್ಬಂದಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಸೈರನ್ ಹೇಗಿರಲಿದೆ? ಮಾಕ್ ಡ್ರಿಲ್ ಜಾರಿಯಲ್ಲಿರುವಾಗ ಒಟ್ಟು ಮೂರು ವಿಧದ ಸೈರನ್‌ಗಳು ಕೇಳಿಸಲಿವೆ. ಮೊದಲ ಸೈರನ್ ದಾಳಿ ನಡೆಯುವ ಸ್ಥಳದ ಕುರಿತು ಜನರಿಗೆ ಅಲರ್ಟ್ ನೀಡಲಿದೆ. ಎರಡನೇ ಸೈರನ್ ದಾಳಿ ಸಂದರ್ಭದಲ್ಲಿ ಆಗಲಿದೆ. ಮೂರನೇ ಸೈರನ್ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದಾಗ ಆಗಲಿದೆ ಎಂದು ವಿವರಿಸಿದರು.
ಮಾಕ್ ಡ್ರಿಲ್ ಸಂದರ್ಭದಲ್ಲಿ ಏನೇನು ನಡೆಯಲಿದೆ?
ಯುದ್ಧ ಸನ್ನಿವೇಶಗಳಲ್ಲಿ ಸ್ವಯಂ ರಕ್ಷಣೆಯ ಅರಿವು: ಮಾಕ್ ಡ್ರಿಲ್ ಮೂಲಕ ಇಂದಿನ ಪೀಳಿಗೆಯವರಿಗೆ ಯುದ್ಧ ಸನ್ನಿವೇಶಗಳಲ್ಲಿ ಶತ್ರುಗಳಿಂದ ಸ್ವಯಂ ರಕ್ಷಣೆ ಪಡೆಯುವುದರ ಕುರಿತು ತಿಳಿಸಲಾಗುತ್ತದೆ. ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಶತ್ರುಗಳಿಂದ ನಡೆಯಬಹುದಾದ ವಾಯುದಾಳಿಯ ಸಾಧ್ಯತೆ, ಮತ್ತು ಅದರ ಕುರಿತು ಸೈರನ್ ಮೊಳಗಿಸುವ ಮೂಲಕ ಮಾಹಿತಿ ನೀಡಲಾಗುತ್ತದೆ. ದಾಳಿ ವೇಳೆ ಸ್ವಯಂ ರಕ್ಷಣೆಯ ತರಬೇತಿ ನೀಡಲಾಗುತ್ತದೆ.
ವಿದ್ಯುತ್ ದೀಪ ಬಂದ್: ವಾಯು ದಾಳಿಯಂತಹ ಸಂದರ್ಭಗಳಲ್ಲಿ ಶತ್ರುಗಳಿಗೆ ನಮ್ಮಲ್ಲಿನ ಜನಸಂಖ್ಯೆಯಿರುವ ಸ್ಥಳಗಳ ಗುರುತು ಸಿಗದಂತೆ ತಡೆಯಲು ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ದೀಪಗಳು ಸಂಪೂರ್ಣ ಬಂದ್ ಆಗಿರಲಿವೆ. ಹಾಗೂ ರಾತ್ರಿ ವಾಹನ ಸಂಚಾರ ಸ್ಥಗಿತವಾಗಿರಲಿದೆ. ಅದರಂತೆ ಮಾಕ್ ಡ್ರಿಲ್ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿದ್ಯುತ್ ದೀಪಗಳು ಬಂದ್ ಆಗಲಿವೆ.
ಪ್ರಮುಖ ಸ್ಥಾವರಗಳ ಮರೆಮಾಚುವಿಕೆ: ಯುದ್ಧ ಸಂದರ್ಭದಲ್ಲಿ ದೇಶದ ಪ್ರಮುಖ ಸ್ಥಾವರಗಳನ್ನು ಶತ್ರುಗಳಿಂದ ಕಾಪಾಡುವುದು ಮುಖ್ಯವಾಗಿರಲಿದೆ. ಅವುಗಳ ಮೇಲೆ ದಾಳಿ ಆಗದಂತೆ ಮರೆಮಾಚಿಕೊಳ್ಳಬೇಕಾದ ಅಗತ್ಯವಿರುವುದರಿಂದ ಈ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
ರಕ್ಷಣಾ ಕಾರ್ಯಾಚರಣೆ ಕುರಿತು ತರಬೇತಿ: ಯುದ್ಧ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಯನ್ನು ಹೇಗೆ ಮಾಡಬೇಕು ಎಂಬುದರ ಕುರಿತು ಅಣಕು ಕಾರ್ಯಾಚರಣೆಯ ಮೂಲಕ ತಿಳಿಸಲಾಗುತ್ತದೆ.
Source : ETV Bharat