INDIA PAKISTAN TENSION : ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ನಡೆದರೇ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನೂ ಕರೆಯಲಾಗುತ್ತದಾ ಎಂಬುದರ ಬಗ್ಗೆ ನಿವೃತ್ತ ಕರ್ನಲ್ ಸ್ಪಷ್ಟನೆ ನೀಡಿದ್ದಾರೆ.

ಹೈದರಾಬಾದ್: ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ಉಗ್ರ ಕೃತ್ಯದ ಬೆನ್ನಲ್ಲೇ ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ. ರಾತೋರಾತ್ರಿ ಪಾಕ್ ಮೇಲೆ ಕ್ಷಿಪಣಿ ದಾಳಿ ನಡೆಸಿ 9ಕ್ಕೂ ಹೆಚ್ಚು ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿ ಪ್ರತೀಕಾರ ತೀರಿಸಿಕೊಂಡಿದೆ.
ಇಷ್ಟಕ್ಕೆ ಸುಮ್ಮನಾಗದ ಪಾಕ್ ಭಾರತದ ಮೇಲೆ ಡ್ರೋನ್ ದಾಳಿ ಪ್ರಾರಂಭಿಸಿದೆ. ಭಾರತ ಕೂಡ ಪ್ರತಿ ದಾಳಿ ನಡೆಸಿ ಪಾಕ್ನ ಹಲವು ಸ್ಥಳಗಳನ್ನು ಧ್ವಂಸ ಮಾಡಿದೆ. ಸದ್ಯ ಎರಡೂ ದೇಶಗಳಲ್ಲಿ ಯುದ್ದದ ವಾತಾವರಣ ನಿರ್ಮಾಣವಾಗಿದೆ. ಭಾರತ ಕೂಡ ಎಲ್ಲಾ ರೀತಿಯಿಂದಲ್ಲೂ ಯುದ್ಧಕ್ಕೆ ಸಜ್ಜಾಗಿದೆ. ಇದರ ನಡುವೆಯೇ ಒಂದು ವೇಳೆ ಎರಡೂ ದೇಶಗಳ ಮಧ್ಯೆ ಯುದ್ಧ ಘೋಷಣೆಯಾದರೆ ಟೀಂ ಇಂಡಿಯಾದ ಮಾಜಿ ನಾಯಕ ಎಮ್ ಎಸ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಕರೆಯಲಾಗುತ್ತದಾ ಎಂಬ ಪ್ರಶ್ನೆಗಳು ಈಗ ಜನರಲ್ಲಿ ಹುಟ್ಟಿಕೊಂಡಿವೆ. ಈ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ.
ಕಾರಣ ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡುವವರನ್ನು ಗುರುತಿಸಿ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಹುದ್ದೆಗಳನ್ನು ನೀಡಿ ಗೌರವಿಸಲಾಗುತ್ತದೆ. ಅದರಂತೆ ಕ್ರಿಕೆಟ್ನಲ್ಲಿನ ಅತ್ಯುತ್ತಮ ಸಾಧನೆ ಮಾಡಿದ ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಿಗೆ ಸೇನೆಯಲ್ಲಿ ಉನ್ನತ ಹುದ್ದೆ ನೀಡಿ ಗೌರವಿಸಲಾಗಿದೆ. ಸಚಿನ್ ತೆಂಡೂಲ್ಕರ್ಗೆ 2010 ರಲ್ಲಿ ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಗೌರವ ಹುದ್ದೆ ನೀಡಲಾಗಿದೆ.

ಅದರಂತೆ ಧೋನಿಗೆ ಭಾರತೀಯ ಭೂ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿದೆ. ಇದೀಗ ಭಾರತ ಮತ್ತು ಪಾಕ್ ಯುದ್ದ ನಡೆದರೇ ಸಚಿನ್ ಮತ್ತು ಧೋನಿ ಕೂಡ ಯುದ್ದದಲ್ಲಿ ಭಾಗಿಯಾಗುತ್ತಾರಾ ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ. ಇದರ ಬಗ್ಗೆ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸ್ಪಷ್ಟನೆ ನೀಡಿದ್ದಾರೆ.
ನಿವೃತ್ತ ಕರ್ನಲ್ ಹೇಳುವುದೇನು?: ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಸೇನೆಯು ಗೌರವ ಪದವಿಗಳು ಮತ್ತು ಶ್ರೇಣಿಗಳನ್ನು ನೀಡುತ್ತದೆ. ಇದು ಗೌರವ ಶ್ರೇಣಿಯಾಗಿದ್ದರೂ, ಯುದ್ಧದಂತಹ ಪರಿಸ್ಥಿತಿ ಎದುರಾದಾಗ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಮತ್ತು ಅಭಿನವ್ ಬಿಂದ್ರಾ ಸೇರಿದಂತೆ ಪ್ರತಿಯೊಬ್ಬರು ಮೀಸಲು ಪಡೆಗಳ ಬೆಂಬಲಕ್ಕೆ ನಿಲ್ಲುವ ಅಗತ್ಯ ಇರುತ್ತದೆ. ಇಂತಹ ಸಮಯದಲ್ಲಿ ಪ್ರಾದೇಶಿಕ ಸೈನ್ಯವನ್ನು ಸಹಾಯಕ್ಕೆ ಕರೆಯಲಾಗುತ್ತದೆ. ಈ ವೇಳೆ ಸೇನೆ ಜೊತೆ ಸೇರಿ ಇವರೆಲ್ಲರೂ ಕರ್ತವ್ಯ ನಿಭಾಯಿಸಬೇಕಾಗುತ್ತದೆ ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಡಾ. ಸತೀಶ್ ಡಗೆ ಸ್ಪಷ್ಟನೆ ನೀಡಿದ್ದಾರೆ.

ಪ್ರಾದೇಶಿಕ ಸೈನ್ಯವನ್ನು ಯುದ್ಧಕ್ಕೆ ಕರೆತರುವುದು ತುಂಬಾ ವಿರಳ. ಈ ಹಿಂದೆ 1962, 1965, 1971 ಮತ್ತು 1999 ರ ಕಾರ್ಗಿಲ್ ಯುದ್ಧಗಳಂತಹ ಸಮಯದಲ್ಲಿ ಪ್ರಾದೇಶಿಕ ಸೇನೆ ಭಾಗವಹಿಸಿತ್ತು. ಈ ಯುದ್ಧಗಳಲ್ಲಿ ಪ್ರಾದೇಶಿಕ ಸೇನೆಯು ಪ್ರಮುಖ ಪಾತ್ರ ವಹಿಸಿತ್ತು. ಸದ್ಯ ಭಾರತ ಯುದ್ದಕ್ಕೆ ಬೇಕಾದ ಎಲ್ಲ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಕಾರಣ ಪ್ರಾದೇಶಿಕ ಸೈನ್ಯದ ಅಗತ್ಯ ಬೀಳುವ ಸಾಧ್ಯತೆ ಕಡಿಮೆ.
Source : ETV Bharat