ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆ-2 ಫಲಿತಾಂಶ 2025 ಪ್ರಕಟ: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಇಂದು ಪ್ರಕಟಗೊಂಡಿದೆ. ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆ-2ನೇ ಫಲಿತಾಂಶವನ್ನು ವಿದ್ಯಾರ್ಥಿಗಳು karresults.nic.inನಲ್ಲಿ ನೋಡಬಹುದು. ದ್ವಿತೀಯ ಪಿಯುಸಿ ಪರೀಕ್ಷೆ-3ರ ದಿನಾಂಕ ಕೂಡ ಘೋಷಣೆಯಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ-3 ಯಾವಾಗಿನಿಂದ ಆರಂಭ? ಇಲ್ಲಿದೆ ಮಾಹಿತಿ.

ಬೆಂಗಳೂರು, ಮೇ 16: ಪದವಿ ಪೂರ್ವ ಶಿಕ್ಷಣ ಇಲಾಖೆ (PU Board) ದ್ವಿತೀಯ ಪಿಯುಸಿ ಪರೀಕ್ಷೆ-2 ಪಲಿತಾಂಶವನ್ನು ಶುಕ್ರವಾರ (ಮೇ. 16) ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಶೇಕಡಾ 31.27ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಏಪ್ರಿಲ್ 24ರಿಂದ ಮೇ 8ರವರೆಗೆ ನಡೆದಿದ್ದ ಎರಡನೇ ದ್ವಿತೀಯ ಪಿಯು ಪರೀಕ್ಷೆಗೆ 1,94,077 ವಿದ್ಯಾರ್ಥಿಗಳು ಹಾಜರಾಗಿದ್ದರು. 1,94,077 ವಿದ್ಯಾರ್ಥಿಗಳ ಪೈಕಿ 60,692 ವಿದ್ಯಾರ್ಥಿಗಳು ಉತ್ತೀರ್ಣರ್ಣಾಗಿದ್ದಾರೆ. ಪರೀಕ್ಷೆ-1ರಲ್ಲಿ ಉತ್ತೀರ್ಣರಾಗಿದ್ದ 71,964 ವಿದ್ಯಾರ್ಥಿಗಳು ಪರೀಕ್ಷೆ-2 ಅನ್ನೂ ಬರೆದಿದ್ದಾರೆ. ಇವರಲ್ಲಿ 41,719 ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆ-3 ಯಾವಾಗ?
ಜೂನ್ 9ರಿಂದ 20ರವರೆಗೆ ದ್ವಿತೀಯ ಪಿಯು ಪರೀಕ್ಷೆ-3 ನಡೆಯಲಿದೆ. ದ್ವಿತೀಯ ಪಿಯು ಪರೀಕ್ಷೆ-3 ತೆಗೆದುಕೊಳ್ಳುವವರಿಗೂ ಕೂಡ ಶುಲ್ಕ ಇರುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ದ್ವಿತೀಯ ಪಿಯು ಫಲಿತಾಂಶ ನೋಡುವುದು ಹೇಗೆ?
ದ್ವಿತೀಯ ಪಿಯು ಫಲಿತಾಂಶ ಘೋಷಣೆಯಾದ ಕೂಡಲೇ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿಯೂ ಅಪ್ಲೋಡ್ ಮಾಡಲಾಗುತ್ತದೆ. karresults.nic.in ಅಥವಾ kseab.karnataka.gov.in ವೆಬ್ಸೈಟ್ಗಳಲ್ಲಿ ಫಲಿತಾಂಶ ನೋಡಬಹುದಾಗಿದೆ.
ದ್ವಿತೀಯ ಪಿಯು ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ
- ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಬೇಕು.
- ಹೋಂ ಪೇಜ್ನಲ್ಲಿ, Second PU Results 2025 ಲಿಂಕ್ ಅನ್ನು ಕ್ಲಿಕ್ ಮಾಡಿ.
- ರಿಜಿಸ್ಟ್ರೇಷನ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಪಾಸ್‌ವರ್ಡ್ ಆಯ್ಕೆಮಾಡಿ.
- Second PU Results 2025 ಎಂಬುದು ಸ್ಕ್ರೀನ್ನಲ್ಲಿ ಕಾಣಿಸುತ್ತದೆ.
- ಈಗ ನೀವು ರಿಸಲ್ಟ್ ನೋಡಬಹುದು. ಅಲ್ಲಿಯೇ ಪಿಡಿಎಫ್ ಡೌನ್ಲೋಡ್ ಮಾಡಲು ಅವಕಾಶ ಇರುತ್ತದೆ.
ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ
“ದ್ವಿತೀಯ ಪಿಯುಸಿ ಪರೀಕ್ಷೆ- 2 ರಲ್ಲಿ ಉತ್ತೀರ್ಣರಾದ ಎಲ್ಲಾ 60,692 ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಫಲಿತಾಂಶದ ಸುಧಾರಣೆ ಬಯಸಿ ಮತ್ತೊಮ್ಮೆ ಪರೀಕ್ಷೆ ಎದುರಿಸಿದ್ದ 41,719 ವಿದ್ಯಾರ್ಥಿಗಳು ಕಳೆದ ಬಾರಿಗಿಂತ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ತೋರಿದ್ದಾರೆ. ನಿಮ್ಮೆಲ್ಲರ ಮುಂದಿನ ಶೈಕ್ಷಣಿಕ ಬದುಕು ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
“ಹಿಂದಿನ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳು ಆತಂಕ, ಹತಾಶೆಗೆ ಒಳಗಾಗುವ ಅಗತ್ಯವಿಲ್ಲ. ಯಾವುದೇ ಶುಲ್ಕವಿಲ್ಲದೆ ಪರೀಕ್ಷೆ -3 ಅನ್ನು ಬರೆದು ಉತ್ತೀರ್ಣರಾಗುವ ಅವಕಾಶವನ್ನು ಸರ್ಕಾರ ನಿಮಗೆ ಒದಗಿಸಿಕೊಟ್ಟಿದೆ. ಇದರ ಸದುಪಯೋಗ ಪಡೆದು ಭವಿಷ್ಯ ರೂಪಿಸಿಕೊಳ್ಳಿ” ಎಂದು ಕಿವಿಮಾತು ಹೇಳಿದ್ದಾರೆ.
TV9 Kannada