India First Nuclear Test: ಮೇ 18ಕ್ಕೆ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪರಮಾಣು ಪರೀಕ್ಷೆ ನಡೆದು 51 ವರ್ಷಗಳು ಕಳೆದಿವೆ. ದೇಶದಲ್ಲಿ ಮೊದಲ ಬಾರಿಗೆ ನಡೆದ ಪರಮಾಣು ಪರೀಕ್ಷೆಯ ಕುರಿತಾದ ಮಾಹಿತಿ ಇಲ್ಲಿದೆ.

India First Nuclear Test: ನಿನ್ನೆ ಅಂದರೆ ಮೇ 18ರಂದು ಭಾರತದ ಮೊದಲ ಪರಮಾಣು ಪರೀಕ್ಷೆಯ 51ನೇ ವಾರ್ಷಿಕೋತ್ಸವ. 1974ರ ಮೇ 18ರಂದು ದೇಶವು ಪೋಖ್ರಾನ್ನಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆ ನಡೆಸಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಈ ಯಶಸ್ವಿ ಪರೀಕ್ಷೆ ಕೈಗೊಳ್ಳಲಾಗಿತ್ತು.
ಮಹತ್ವದ ದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ನಾಯಕತ್ವವನ್ನು ಶ್ಲಾಘಿಸಿದ್ದು, ಪ್ರತಿಕೂಲ ಸಂದರ್ಭಗಳಲ್ಲಿಯೂ ಅಂದಿನ ಪ್ರಧಾನಿಯವರು ಧೈರ್ಯ ತೋರಿದ್ದರು ಎಂದು ಹೇಳಿದೆ. ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ದೇಶವು ತನ್ನ ಮೊದಲ ಯಶಸ್ವಿ ಪರಮಾಣು ಪರೀಕ್ಷೆ ನಡೆಸಿದ್ದರಿಂದ 1974ರ ಮೇ 18 ಭಾರತಕ್ಕೆ ಸುವರ್ಣ ದಿನವಾಗಿತ್ತು. ಈ ಕಾರ್ಯಾಚರಣೆಯನ್ನು ‘ಆಪರೇಷನ್ ಸ್ಮೈಲಿಂಗ್ ಬುದ್ಧ’ ಎಂದು ಕರೆಯಲಾಗಿತ್ತು. ಅಲ್ಲದೆ, ಈ ಪರೀಕ್ಷೆಯು ದೇಶದ ವೈಜ್ಞಾನಿಕ ಸಾಮರ್ಥ್ಯ ಮತ್ತು ಪ್ರಬಲ ರಾಜಕೀಯ ನಾಯಕತ್ವದ ಸಂಕೇತ ಎಂದು ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಮಲ್ಲಿಕಾರ್ಜುನ ಖರ್ಗೆ ಪೋಸ್ಟ್: 51 ವರ್ಷಗಳ ಹಿಂದೆ ಭಾರತ ತನ್ನ ಮೊದಲ ಪರಮಾಣು ಪರೀಕ್ಷೆ ನಡೆಸಿತು. ಅದನ್ನು ನಡೆಸುವ ಮೂಲಕ ಭಾರತವು ವಿಶ್ವದ ಆರನೇ ರಾಷ್ಟ್ರವಾಯಿತು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದಿದ್ದಾರೆ. ”ನಮ್ಮ ವಿಜ್ಞಾನಿಗಳ ಪ್ರತಿಭೆ ಮತ್ತು ಸಮರ್ಪಣೆ ಇಲ್ಲದೆ ಈ ಸಾಧನೆ ಅಸಾಧ್ಯ. ನಾವೆಲ್ಲರೂ ಅವರಿಗೆ ಕೃತಜ್ಞರಾಗಿರುತ್ತೇವೆ” ಎಂದು ಬರೆದುಕೊಂಡಿದ್ದಾರೆ. ”ಅಲ್ಲದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾರ್ಯವನ್ನು ಶ್ಲಾಘಿಸಿರುವ ಖರ್ಗೆ, ಪ್ರತಿಕೂಲ ಪರಿಸ್ಥಿತಿಯಲ್ಲೂ ಸಹ ಅವರು ಧೈರ್ಯ ಪ್ರದರ್ಶಿಸಿದರು. ಈ ಪರೀಕ್ಷೆಯನ್ನು ಯಶಸ್ವಿಗೊಳಿಸಿದರು” ಎಂದು ಪೋಸ್ಟ್ ಮಾಡಿದ್ದಾರೆ.
ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ರಾಹುಲ್ ಗಾಂಧಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ, ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಭಾರತವು 51 ವರ್ಷಗಳ ಹಿಂದೆ ಪೋಖ್ರಾನ್ನಲ್ಲಿ ತನ್ನ ಪರೀಕ್ಷಾರ್ಥ ಕಾರ್ಯಾಚರಣೆ ಸ್ಮೈಲಿಂಗ್ ಬುದ್ಧವನ್ನು ಯಶಸ್ವಿಯಾಗಿ ನಡೆಸಿತ್ತು. ಇದನ್ನು ಸಾಧ್ಯವಾಗಿಸಿದ ಪ್ರತಿಭಾನ್ವಿತ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಏಳು ವರ್ಷಗಳ ಕಠಿಣ ಪರಿಶ್ರಮಕ್ಕೆ ಫಲ: ಈ ಪರಮಾಣು ಪರೀಕ್ಷೆ ಯಶಸ್ವಿಯಾಗಲು ಅನೇಕ ವರ್ಷಗಳೇ ಬೇಕಾಯಿತು. ಅದರ ಯಶಸ್ಸಿನ ಎಲ್ಲಾ ಶ್ರೇಯಸ್ಸು ದೇಶದ ವಿಜ್ಞಾನಿಗಳಿಗೆ ಸಲ್ಲುತ್ತದೆ. ವಿಜ್ಞಾನಿಗಳು ಮತ್ತು ರಾಜಕಾರಣಿಗಳ ಅವಿಶ್ರಾಂತ ಪರಿಶ್ರಮದಿಂದಾಗಿಯೇ ದೇಶವು ಪರಮಾಣು ಪರೀಕ್ಷೆ ನಡೆಸುವಲ್ಲಿ ಯಶಸ್ವಿಯಾಯಿತು. 75 ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳ ತಂಡವು 1967ರಿಂದ 1974ರವರೆಗೆ ಏಳು ವರ್ಷಗಳ ಕಾಲ ಶ್ರಮಿಸಿತು. ಇದಕ್ಕೂ ಮುನ್ನ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಾದ ಅಮೆರಿಕ, ರಷ್ಯಾ, ಫ್ರಾನ್ಸ್, ಯುಕೆ ಮತ್ತು ಚೀನಾ ಮಾತ್ರ ಪರಮಾಣು ಶಕ್ತಿಯನ್ನು ಹೊಂದಿದ್ದವು.
ಅಂತಾರಾಷ್ಟ್ರೀಯ ಪ್ರತಿಕ್ರಿಯೆ ಮತ್ತು ಭಾರತದ ನಿಲುವು: ಈ ಪರಮಾಣು ಪರೀಕ್ಷೆ ಬಳಿಕ, ಭಾರತವು ಪ್ರಬಲ ಅಂತಾರಾಷ್ಟ್ರೀಯ ವಿರೋಧ ಮತ್ತು ನಿರ್ಬಂಧಗಳನ್ನು ಎದುರಿಸಿತು. ಅಮೆರಿಕ ಸೇರಿದಂತೆ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತದ ಮೇಲೆ ಕಠಿಣ ಆರ್ಥಿಕ ಮತ್ತು ತಾಂತ್ರಿಕ ನಿರ್ಬಂಧ ವಿಧಿಸಿದವು. ಆದರೂ ತನ್ನ ಆತ್ಮವಿಶ್ವಾಸ ಮತ್ತು ವಿಜ್ಞಾನದ ಬಲದಿಂದ ಭಾರತವು ಈ ಸವಾಲುಗಳನ್ನು ಎದುರಿಸಿ ಮುಂದುವರೆಯಿತು. ಈ ಪರೀಕ್ಷೆಯೊಂದಿಗೆ ಭಾರತವು ಪರಮಾಣು ಶಕ್ತಿ ಹೊಂದಿರುವ ವಿಶ್ವದ ಆರನೇ ರಾಷ್ಟ್ರವಾಯಿತು.
ಸ್ಥಳೀಯ ಜನರ ಹೆಮ್ಮೆ: ಜೈಸಲ್ಮೇರ್ನ ಹಿರಿಯ ನಾಗರಿಕ ಸುಮರ್ ಖಾನ್ ಮಾತನಾಡಿ, ಪೋಖ್ರಾನ್ ಮತ್ತು ಜೈಸಲ್ಮೇರ್ನ ಜನರು ಈ ಐತಿಹಾಸಿಕ ಸಾಧನೆಯನ್ನು ಇಂದಿಗೂ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ. ಪರೀಕ್ಷೆಯ ಸಮಯದಲ್ಲಿ ನನಗೆ ಕೇವಲ 15 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ಸ್ಫೋಟದ ಬಗ್ಗೆ ನಾವೆಲ್ಲರೂ ಭಯಭೀತರಾಗಿದ್ದೆವು. ಭಾರತವು ಪರಮಾಣು ಶಕ್ತಿಯಾಗುವತ್ತ ಮೊದಲ ಹೆಜ್ಜೆ ಇಡಲು ನಮ್ಮ ಊರು ವೇದಿಕೆ ಒದಗಿಸಿದೆ ಎಂದು ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದರು. ಇಂದಿಗೂ ಸಹ ಪರಮಾಣು ತಾಣವು ಹೆಮ್ಮೆ, ಶೌರ್ಯ ಮತ್ತು ವೈಜ್ಞಾನಿಕ ಸಾಧನೆಯ ಸಂಕೇತವಾಗಿ ಪರಿಗಣಿಸಲ್ಪಟ್ಟಿದೆ.
ಸ್ವಾವಲಂಬಿಗಳಾಗುವ ಇಚ್ಛಾಶಕ್ತಿಗೆ ಜೀವಂತ ಉದಾಹರಣೆ: ಸ್ಥಳೀಯ ಯುವಕ ರುಗ್ದಾನ್ ಝಿಬಾ ಮಾತನಾಡಿ, ಪೋಖ್ರಾನ್ನ ಈ ಐತಿಹಾಸಿಕ ಪರೀಕ್ಷೆಯು ಭಾರತದ ವೈಜ್ಞಾನಿಕ ಸಾಮರ್ಥ್ಯ, ಕಾರ್ಯತಂತ್ರದ ಚಿಂತನೆ ಮತ್ತು ಜಾಗತಿಕವಾಗಿ ಸ್ವಾವಲಂಬಿಗಳಾಗುವ ಇಚ್ಛಾಶಕ್ತಿಗೆ ಜೀವಂತ ಉದಾಹರಣೆಯಾಗಿದೆ ಎಂದು ಶ್ಲಾಘಿಸಿದರು.
ETV Bharat