IPL 2025: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ನೆರವಿನಿಂದ ಮುಂಬೈ 181 ರನ್ ಗಳಿಸಿತು. ಡೆಲ್ಲಿ ತಂಡ ಈ ಗುರಿಯನ್ನು ಬೆನ್ನಟ್ಟಲು ವಿಫಲವಾಗಿ ಪ್ಲೇಆಫ್‌ನಿಂದ ಹೊರಬಿದ್ದಿತು. ಮುಂಬೈ, ಗುಜರಾತ್ ಟೈಟನ್ಸ್, ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿವೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 (IPL 2025) ರ 63ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ (MI vs DC) ತಂಡಗಳು ಮುಖಾಮುಖಿಯಾಗಿದ್ದವು. ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಪ್ರಮುಖವಾಗಿತ್ತು. ಆದರೆ ಮುಂಬೈನ ಸಾಂಘಿಕ ಪ್ರದರ್ಶನದ ಮುಂದೆ ಮಂಡಿಯೂರಿದ ಡೆಲ್ಲಿ 60 ರನ್ಗಳಿಂದ ಸೋತು ಪ್ಲೇಆಫ್ ರೇಸ್ನಿಂದ ಹೊರಬಿದ್ದರೆ, ಇತ್ತ ಮುಂಬೈ ಅಗ್ರ ನಾಲ್ಕು ತಂಡಗಳಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರೊಂದಿಗೆ ಪ್ಲೇಆಫ್‌ಗೇರಿದ ಅಗ್ರ ನಾಲ್ಕು ತಂಡಗಳು ಯಾವುವು ಎಂಬುದು ಖಚಿತವಾಗಿದೆ.
12 ಎಸೆತಗಳಲ್ಲಿ 48 ರನ್
ವಾಂಖೆಡೆಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ಆಧಾರದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್‌ಗೆ 181 ರನ್‌ಗಳ ಗುರಿಯನ್ನು ನೀಡಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ ಮತ್ತು ನಮನ್ ಧೀರ್ ಕೊನೆಯ 12 ಎಸೆತಗಳಲ್ಲಿ 48 ರನ್ ಗಳಿಸಿದರು.
ಕಳಪೆ ಆರಂಭ
ವಾಸ್ತವವಾಗಿ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಮಾಜಿ ನಾಯಕ ರೋಹಿತ್ ಶರ್ಮಾ ಕೇವಲ ಐದು ರನ್ ಗಳಿಸಿ ಔಟಾದರು. ಇವರ ನಂತರ, ವಿಲ್ ಜ್ಯಾಕ್ಸ್ ಮತ್ತು ರಯಾನ್ ರಿಕಲ್ಟನ್ ಜವಾಬ್ದಾರಿ ವಹಿಸಿಕೊಳ್ಳಲು ಪ್ರಯತ್ನಿಸಿದರು, ಆದರೆ ಜ್ಯಾಕ್ಸ್ 13 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ರಿಕಲ್ಟನ್ ಕೂಡ ಕೇವಲ 25 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ತಿಲಕ್ ವರ್ಮಾ 27 ರನ್ಗಳಿಗೆ ಸುಸ್ತಾದರೆ, ನಾಯಕ ಹಾರ್ದಿಕ್ ಪಾಂಡ್ಯ ಮೂರು ರನ್ಗಳಿಗೆ ಸುಸ್ತಾದರು.
ಸೂರ್ಯ- ನಮನ್ ಆಟ
ಆದರೆ ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಾಯದಿಂದ ಅಜೇಯ 73 ರನ್ ಬಾರಿಸಿದರೆ, ನಮನ್ ಧೀರ್ ಎಂಟು ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಅಷ್ಟೇ ಸಿಕ್ಸರ್‌ಗಳ ಸಹಾಯದಿಂದ 24 ರನ್ ಗಳಿಸಿ ಅಜೇಯರಾಗಿ ಉಳಿದರು. ಇತ್ತ ಡೆಲ್ಲಿ ಪರ ಮುಖೇಶ್ ಕುಮಾರ್ ಎರಡು ವಿಕೆಟ್ ಪಡೆದರೆ, ದುಷ್ಮಂತ ಚಮೀರ, ಮುಸ್ತಾಫಿಜುರ್ ರೆಹಮಾನ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಡೆಲ್ಲಿಗೆ ಕಳಪೆ ಆರಂಭ
ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭವೂ ಉತ್ತಮವಾಗಿರಲಿಲ್ಲ. ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವಹಿಸಿದ್ದ ಫಾಫ್ ಡುಪ್ಲೆಸಿಸ್ ಎಂದಿನಂತೆ ತಮ್ಮ ಕಳಪೆ ಫಾರ್ಮ್ ಮುಂದುವರೆಸಿ 6 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ರಾಹುಲ್ ಮೇಲೆ ನಿರೀಕ್ಷೆಗಳಿದ್ದವು. ಆದರೆ ರಾಹುಲ್ ಕೂಡ 11 ರನ್ಗಳಿಗೆ ಸುಸ್ತಾದರು. ಮೂರನೇ ಕ್ರಮಾಂಕದಲ್ಲಿ ಬಂದ ಅಭಿಷೇಕ್ ಪೂರೆಲ್ ಕೂಡ 6 ರನ್ ಬಾರಿಸಿ ಬ್ಯಾಟ್ ಎತ್ತಿಟ್ಟರು.
ಕೈಕೊಟ್ಟ ಬ್ಯಾಟಿಂಗ್ ಆರ್ಡರ್
ನಾಲ್ಕನೇ ಕ್ರಮಾಂಕದಲ್ಲಿ ಬಂದ ಸಮೀರ್ ರಿಜ್ವಿ ತಂಡದ ಪರ ಕೊಂಚ ಹೋರಾಟ ನೀಡಿ ಅತ್ಯಧಿಕ 39 ರನ್ ಬಾರಿಸಿದರು. ಮುಂಬಡ್ತಿ ಪಡೆದು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ವಿಪ್ರಜ್ ನಿಗಮ್ 20 ರನ್ ಬಾರಿಸಿ ಔಟಾದರು. ಹೊಡಿಬಡಿ ಆಟಗಾರ ಅಶುತೋಶ್ ಶರ್ಮಾ ಅವರ ಆಟ ಕೂಡ 18 ರನ್ಗಳಿಗೆ ಅಂತ್ಯವಾಯಿತು. ಇವರ ವಿಕೆಟ್ ಪತನದೊಂದಿಗೆ ಡೆಲ್ಲಿ ತಂಡದ ಗೆಲುವಿನ ಆಸೆಯೂ ಕಮರಿತು. ಬಾಲಂಗೋಚಿಗಳು ಹೆಚ್ಚಿನದನ್ನು ಮಾಡಲಾಗದೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಹಾದಿ ಹಿಡಿದರು.
ಪ್ಲೇಆಫ್‌ಗೆ 4 ತಂಡಗಳು ಎಂಟ್ರಿ
ಡೆಲ್ಲಿ ವಿರುದ್ಧ ಮುಂಬೈ ಗೆಲುವು ಸಾಧಿಸಿರುವ ಪರಿಣಾಮವಾಗಿ ಲೀಗ್ ಹಂತದಲ್ಲಿ ಇನ್ನು ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇಆಫ್‌ಗೆ ಎಂಟ್ರಿಕೊಟ್ಟ 4 ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಆ ಪ್ರಕಾರ, ಗುಜರಾತ್ ಟೈಟನ್ಸ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ತಂಡಗಳು ನಾಕೌಟ್ ಸುತ್ತಿಗೆ ಅರ್ಹತೆ ಪಡೆದಿವೆ. ಇದೀಗ ಈ 4 ತಂಡಗಳ ನಡುವೆ ಟಾಪ್ 2 ಸ್ಥಾನಕ್ಕೆ ಪೈಪೋಟಿ ನಡೆಯಲಿದೆ.
TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1