RCB vs LSG: ಅಬ್ಬರಿಸಿ ಬೊಬ್ಬರಿದ ಕ್ಯಾಪ್ಟನ್ ಜಿತೇಶ್ ಶರ್ಮಾ! 228ರನ್​ಗಳ ದಾಖಲೆ ರನ್ ಚೇಸ್​ ಮಾಡಿ ಟಾಪ್​ 2 ಸ್ಥಾನ ಗಿಟ್ಟಿಸಿಕೊಂಡ RCB.

ಹಂಗಾಮಿ ನಾಯಕ ಜಿತೇಶ್ ಶರ್ಮಾ ಸಿಡಿಸಿದ ಅಜೇಯ 85 ರನ್​ಗಳ ಸ್ಫೋಟಕ ಇನ್ನಿಂಗ್ಸ್​ ನೆರವಿನಿಂದ ಆರ್​ಸಿಬಿ ಲಖನೌ ನೀಡಿದ್ದ 228ರನ್​ಗಳ ಬೃಹತ್ ಮೊತ್ತವನ್ನು ಇನ್ನು 8 ಎಸೆತಗಳಿರುವಂತೆ ಚೇಸ್ ಮಾಡಿ ಗೆದ್ದು, ಅಂಕಪಟ್ಟಿಯಲ್ಲಿ ಟಾಪ್​ 2 ಸ್ಥಾನವನ್ನ ಗಿಟ್ಟಿಸಿಕೊಂಡಿದೆ.

ಟಾಪ್ 2 ನಿರ್ಧರಿಸುವ ನಿರ್ಣಾಯಕ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು RCB) ತಂಡ ಅಮೋಘ ಆಟವಾಡಿ 6 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ.  ಲಖನೌ ಸೂಪರ್ ಜೈಂಟ್ಸ್ (LSG) ನೀಡಿದ 228 ರನ್​ಗಳ ಬೃಹತ್ ಗುರಿಯನ್ನ ಬೆನ್ನಟ್ಟಿದ ಆರ್​ಸಿಬಿ   18.4  ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು  ತಲುಪಿತು. ಹಂಗಾಮಿ ನಾಯಕ ಜಿತೇಶ್ ಶರ್ಮಾ (ಅಜೇಯ 85), ವಿರಾಟ್ ಕೊಹ್ಲಿ  ಅರ್ಧಶತಕ ಸಿಡಿಸಿದರೆ, ಮಯಾಂಕ್ ಅಗರ್ವಾಲ್ ಅಜೇಯ 41 ರನ್​ಗಳಿಸಿ ಆರ್​ಸಿಬಿಗೆ 6 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್​ಸಿಬಿ ಲೀಗ್​ನಲ್ಲಿ 9ನೇ ಗೆಲುವು ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿತು. 2016ರ ಬಳಿಕ ಇದೇ ಮೊದಲ ಬಾರಿಗೆ ಆರ್​ಸಿಬಿ ಟಾಪ್ 2ರಲ್ಲಿ ಸ್ಥಾನಪಡೆದುಕೊಂಡಿದೆ.

ಅಬ್ಬರಿಸಿದ ಓಪನರ್ಸ್, ಕೈಕೊಟ್ಟ  ಮಿಡಲ್ ಆರ್ಡರ್

ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ 228 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಮೊದಲ ವಿಕೆಟ್​ಗೆ 61 ರನ್​ಗಳ ಜೊತೆಯಾಟ ನೀಡಿತು. ಫಿಲ್ ಸಾಲ್ಟ್ 19 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 30 ರನ್​ಗಳಿಸಿ ಔಟ್​ ಆದರು ಆಕಾಶ್ ಸಿಂಗ್​​ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರಜತ್ ಪಾಟೀದಾರ್ 7 ಎಸೆತಗಳಲ್ಲಿ ತಲಾ 1 ಬೌಂಡರಿ, 1 ಸಿಕ್ಸರ್​ ಸಹಿತ 14 ರನ್​ಗಳಿಸಿ ಓರೂರ್ಕ್​ ಬೌಲಿಂಗ್​ನಲ್ಲಿ ಸಮದ್​ಗೆ ಕ್ಯಾಚ್ ನೀಡಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಅದೇ ಓವರ್​ನ  ನಂತರದ ಎಸೆತದಲ್ಲೇ ಬಹಳ ದಿನಗಳ ಬಳಿಕ ತಂಡದಲ್ಲಿ ಸ್ಥಾನ ಪಡೆದಿದ್ದ ಲಿಯಾಮ್ ಲಿವಿಂಗ್​ಸ್ಟೋನ್ (0) ಗೋಲ್ಡನ್ ಡಕ್ ಆಗಿ ತಮ್ಮ ದಯನೀಯ ವೈಫಲ್ಯವನ್ನು ಮುಂದುವರಿಸಿದರು.

ಪಂದ್ಯ ಮುಗಿಸಿದ ಜಿತೇಶ್- ಮಯಾಂಕ್

90ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಬಂದ ಕನ್ನಡಿಗ ಮಯಾಂಕ್​ ಅಗರ್ವಾಲ್ ಕೊಹ್ಲಿ ಜೊತೆ ಸೇರಿ 33 ರನ್ ಸೇರಿಸಿದರು. 30 ಎಸೆತಗಳಲ್ಲಿ 10 ಬೌಂಡರಿ ಸಹಿತ 54 ರನ್​ಗಳಿಸಿದ್ದ ಕೊಹ್ಲಿ ಆವೇಶ್​ ಖಾನ್​ಗೆ ವಿಕೆಟ್ ಒಪ್ಪಿಸಿದರು.  ಆದರೆ 5ನೇ ವಿಕೆಟ್​ಗೆ ಒಂದಾದ ಮಯಾಂಕ್ ಹಾಗೂ ನಾಯಕ ಜಿತೇಶ್ ಶರ್ಮಾ ಪಂದ್ಯದ ಗತಿಯನ್ನೇ ಬದಲಿಸಿದರು. ಇವರಿಬ್ಬರು ಕೇವಲ 45 ಎಸೆತಗಳಲ್ಲಿ ಅಜೇಯ 107 ರನ್​ಗಳಿಸಿ ತಂಡವನ್ನ ಇನ್ನು 8 ಎಸೆತಗಳಿರುವಂತೆ ಗೆಲುವಿನ ಗಡಿ ದಾಟಿಸಿದರು.

ಜಿತೇಶ್ ಶರ್ಮಾ 33 ಎಸೆತಗಳಲ್ಲಿ 8 ಬೌಂಡರಿ, 6 ಭರ್ಜರಿ ಸಿಕ್ಸರ್​ಗಳ ಸಹಿತ ಅಜೇಯ 85 ರನ್​ಗಳಿಸಿದರೆ, ಕನ್ನಡಿಗ ಮಯಾಂಕ್ ಅಗರ್ವಾಲ್ 23 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 41 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಲಖನೌ ಸೂಪರ್ ಜೈಂಟ್ಸ್ ತಂಡದ ಪರ ವಿಲಿಯಂ ಓ ರೋರ್ಕ್​ 74ಕ್ಕೆ2, ಆಕಾಶ್ ಸಿಂಗ್ 40ಕ್ಕೆ1, ಆವೇಶ್ ಖಾನ್ 32ಕ್ಕೆ1 ವಿಕೆಟ್ ಪಡೆದರು.

ಲಖನೌ ಸೂಪರ್ ಜೈಂಟ್ಸ್ ಇನ್ನಿಂಗ್ಸ್

ಪ್ಲೇ ಆಫ್​ ರೇಸ್​ನಿಂದ ಈಗಾಗಲೇ ಹೊರಬಿದ್ದಿರುವ ಲಖನೌ ತಂಡ ಕೇವಲ ಗೆಲುವಿನೊಂದಿಗೆ ಅಭಿಯಾನ ಅಂತ್ಯಗೊಳಿಸುವ ಪಂದ್ಯದಲ್ಲಿ ಅಕ್ಷರಃ ಅಬ್ಬರಿಸಿತು. ಇನ್ನಿಂಗ್ಸ್​ ಆರಂಭಿಸಿದ 3ನೇ ಓವರ್​ನಲ್ಲೇ ಮ್ಯಾಥ್ಯೂ ಬ್ರೀಡ್ಜ್ಕ್​ (14) ವಿಕೆಟ್ ಕಳೆದುಕೊಂಡಿತು. ಆದರೆ 2ನೇ  ವಿಕೆಟ್ ಜೊತೆಯಾಟದಲ್ಲಿ ಪಂತ್ ಮತ್ತು ಮಾರ್ಷ್​ 78 ಎಸೆತಗಳಲ್ಲಿ 152 ರನ್​ಗಳ ಜೊತೆಯಾಟ ನೀಡಿದರು.

ಆರ್​ಸಿಬಿಗೆ ಪಂಜಾಬ್ ಎದುರಾಳಿ

ಈ ಗೆಲುವಿನೊಂದಿಗೆ ಆರ್​ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಇದೀಗ ಕ್ವಾಲಿಫೈಯರ್​ 1ರಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ.  ಕ್ವಾಲಿಫೈಯರ್ ಪಂದ್ಯ ಮೇ 29ರಂದು ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ  ನಡೆಯಲಿದೆ.

News 18 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1





















Leave a Reply

Your email address will not be published. Required fields are marked *