
ಮುಲ್ಲಾನ್‌ಪುರ: ರನ್ ಮಳೆ ಸುರಿದ ಈ ಬಾರಿಯ ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟಾನ್ಸ್‌ನ 20 ರನ್‌ಗಳಿಂದ ಬಗ್ಗು ಬಡಿದ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಮತ್ತೊಂದು ಕಪ್ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ತಂಡ 18ನೇ ಆವೃತ್ತಿ ಐಪಿಎಲ್‌ನಲ್ಲಿ ಕ್ವಾಲಿಫೈಯರ್ -2 ಪ್ರವೇಶಿಸಿದ್ದು, ಟ್ರೋಫಿ ಗೆಲ್ಲಲು ಇನ್ನೆರಡೇ ಮೆಟ್ಟಿಲು ಹತ್ತಬೇಕಿದೆ.
ಟಾಸ್ ಗೆದ್ದು ಮುಂಬೈ ಬ್ಯಾಟಿಂಗ್ ಆಯ್ಕೆ ಮಾಡಿ ಅಚ್ಚರಿ ಮೂಡಿಸಿತು. ಆದರೆ ತಂಡದ ಸ್ಫೋಟಕ ಆಟ ನಾಯಕನ ನಿರ್ಧಾರ ಸಮರ್ಥಿಸುವಂತಿತ್ತು. 20 ಓವರ್‌ಗಳಲ್ಲಿ ತಂಡ 5 ವಿಕೆಟ್‌ಗೆ 228 ರನ್ ಕಲೆಹಾಕಿತು. ಬೃಹತ್ ಗುರಿ ಬೆನ್ನತ್ತಿದ ಗುಜರಾತ್, ಒಂದು ಹಂತದಲ್ಲಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಕೊನೆಯಲ್ಲಿ ಎಡವಿದ ತಂಡ 6 ವಿಕೆಟ್‌ಗೆ 208 ರನ್ ಗಳಿಸಿ ಸೋಲೊಪ್ಪಿಕೊಂಡಿತು.ಮೊದಲ ಓವರ್ ನಲ್ಲೇ ನಾಯಕ ಗಿಲ್ (01) ಔಟಾದ ಬಳಿಕ, ಸಾಯಿ ಸುದರ್ಶನ್-ಕುಸಾಲ್ ಮೆಂಡಿಸ್ (20) ಪವರ್-ಪ್ಲೇ ಅಂತ್ಯಕ್ಕೆ ಮೊತ್ತವನ್ನು 66ಕ್ಕೆ ಏರಿಸಿದರು. 7ನೇ ಓವರ್ ನಲ್ಲಿ ಮೆಂಡಿಸ್ ಹಿಟ್ ವಿಕೆಟ್ ಆಗಿ ನಿರ್ಗಮಿಸಿದರು. 3ನೇ ವಿಕೆಟ್‌ಗೆ ಸುದರ್ಶನ್-ವಾಷಿಂಗ್ಟನ್ ಸುಂದರ್ 84 ರನ್ ಸೇರಿಸಿ, ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹೊಡಿಬಡಿ ಆಟವಾಡಿದ ಸುಂದರ್ 24 ಎಸೆತಕ್ಕೆ 48 ರನ್ ಸಿಡಿಸಿದರು. 49 ಎಸೆತಗಳಲ್ಲಿ 80 ರನ್ ಸಿಡಿಸಿದ ಸುದರ್ಶನ್, 16ನೇ ಓವರ್‌ನಲ್ಲಿ ಗ್ರೀಸನ್ ಎಸೆತದಲ್ಲಿ ಬೌಲ್ಡ್ ಆಗುವುದರೊಂದಿಗೆ ತಂಡ ಸಂಕಷ್ಟಕ್ಕೊಳಗಾಯಿತು. ರುಥರ್‌ಫೋರ್ಡ್(24), ತೆವಾಟಿಯಾ (16)ಗೆ ತಂಡವನ್ನು ಗೆಲ್ಲಿಸಲಾಗಲಿಲ್ಲ.
ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ ಎರಡು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ಗ್ಲೀಷನ್, ಮಿಚೆಲ್ ಸ್ಯಾಂಟ್ನರ್ ಹಾಗೂ ಅಶ್ವನಿ ಕುಮಾರ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ರೋಹಿತ್ ಅಬ್ಬರ: ಇದಕ್ಕೂ ಮುನ್ನ ಗುಜರಾತ್‌ನ ಕಳಪೆ ಫೀಲ್ಡಿಂಗ್‌ನಿಂದಾಗಿಯೇ ಮುಂಬೈ ದೊಡ್ಡ ಮೊತ್ತ ಕಲೆಹಾಕಿತು. 2 ಬಾರಿ ಕ್ಯಾಚ್ ಕೈಬಿಟ್ಟಿದ್ದರಿಂದ ರೋಹಿತ್ 50 ಎಸೆತಕ್ಕೆ 81 ರನ್ ಗಳಿಸಿದರು. ಅವರು ಮೊದಲ ವಿಕೆಟ್‌ಗೆ ಬೇರ್‌ಸ್ಟೋವ್ ಜೊತೆ 84 ರನ್ ಜತೆಯಾಟವಾಡಿದರು.ಬೇರ್‌ಸ್ಟೋವ್ 22 ಎಸೆತಕ್ಕೆ 47 ರನ್ ಗಳಿಸಿದರು. ಸೂರ್ಯಕುಮಾರ್ 33, ತಿಲಕ್ ವರ್ಮಾ 25, ಹಾರ್ದಿಕ್ ಪಾಂಡ್ಯ 22 ರನ್ ಕೊಡುಗೆ ನೀಡಿದರು.
ಸ್ಕೋರ್: ಮುಂಬೈ 20 ಓವರಲ್ಲಿ 228/5 (ರೋಹಿತ್ 81, ಬೇರ್‌ಸ್ಟೋವ್ 47, ಕಿಶೋರ್ 2-42)
ಗುಜರಾತ್ 20 ಓವರಲ್ಲಿ 208/6 (ಸುದರ್ಶನ್ 80, ವಾಷಿಂಗ್ಟನ್ 48, ಬೌಲ್ಡ್ 2-56, 2, 1-27)
ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ
ಪಂಜಾಬ್ vs ಮುಂಬೈ ನಾಳೆ ಕ್ವಾಲಿಫೈಯರ್ 2
ಭಾನುವಾರ ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್ -2 ಪಂದ್ಯ ನಡೆಯಲಿದೆ. ಕ್ವಾಲಿಫೈಯರ್ -1ರಲ್ಲಿ ಸೋತ ಪಂಜಾಬ್ ಕಿಂಗ್ಸ್ ಹಾಗೂ ಎಲಿಮಿನೇಟರ್‌ನಲ್ಲಿ ಗೆದ್ದ ಮುಂಬೈ ತಂಡಗಳು ಸೆಣಸಾಡಲಿವೆ. ಅದರಲ್ಲಿ ಗೆದ್ದ ತಂಡ ಜೂ.3ರಂದು ಅಹಮದಾಬಾದ್‌ನಲ್ಲಿ ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಆಡಲಿದೆ. ಆರ್‌ಸಿಬಿ ತಂಡವು ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿದೆ. ಇದೀಗ ಎರಡನೇ ಕ್ವಾಲಿಫೈಯರ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ರೋಹಿತ್ ಶರ್ಮಾ 300 ಸಿಕ್ಸರ್
ಐಪಿಎಲ್‌ನಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 300 ಸಿಕ್ಸರ್ ಬಾರಿಸಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ, ಒಟ್ಟಾರೆ 2ನೇ ಕ್ರಿಕೆಟಿಗ. ಕ್ರಿಸ್ ಗೇಲ್ 357 ಸಿಕ್ಸರ್ ಸಿಡಿಸಿದ್ದಾರೆ.