ರಕ್ಷಣಾ ಸಚಿವಾಲಯವು ‘ಆಪರೇಷನ್ ಸಿಂಧೂರ್ʼ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧೆಯು ಜೂನ್ 1 ರಿಂದ 30 ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಗೆದ್ದ ಮೊದಲ ಮೂರು ಜನರಿಗೆ ತಲಾ 10 ಸಾವಿರ ರೂ. ಬಹುಮಾನ ಸಿಗಲಿದೆ. ಜೊತೆಗೆ, ಕೆಂಪು ಕೋಟೆಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಭಯೋತ್ಪಾದನೆ ವಿರುದ್ಧ ಭಾರತದ ನೀತಿಯನ್ನು ಎತ್ತಿ ತೋರಿಸುವ ಈ ಸ್ಪರ್ಧೆಯಲ್ಲಿ ಯುವಸಮೂಹ ಭಾಗವಹಿಸಿ ತಮ್ಮ ಅಭಿಪ್ರಾಯನ್ನು ತಿಳಿಸಬಹುದಾಗಿದೆ.
ಹೈಲೈಟ್ಸ್:
- ‘ಆಪರೇಷನ್ ಸಿಂಧೂರ್ʼ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ
- ಸ್ಪರ್ಧೆಯಲ್ಲಿ ಗೆದ್ದ ಮೊದಲ ಮೂರು ಜನರಿಗೆ ತಲಾ 10 ಸಾವಿರ ರೂ. ಬಹುಮಾನ
- ಭಯೋತ್ಪಾದನೆ ವಿರುದ್ಧ ಭಾರತದ ನೀತಿ ಬಗ್ಗೆ ಅಭಿಪ್ರಾಯ ತಿಳಿಸಲು ಅವಕಾಶ

ಹೊಸದಿಲ್ಲಿ: ರಕ್ಷಣಾ ಸಚಿವಾಲಯವು ‘ಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧೆಯು ಜೂನ್ 1 ರಿಂದ 30 ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಗೆದ್ದ ಮೊದಲ ಮೂರು ಜನರಿಗೆ ತಲಾ 10,000 ರೂಪಾಯಿ ಬಹುಮಾನ ಸಿಗಲಿದೆ. ಜೊತೆಗೆ, ಕೆಂಪು ಕೋಟೆಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಭಯೋತ್ಪಾದನೆ ವಿರುದ್ಧ ಭಾರತದ ನೀತಿಯ ಬಗ್ಗೆ, ಈ ಸ್ಪರ್ಧೆಯಲ್ಲಿ ಯುವಸಮೂಹ ಭಾಗವಹಿಸಿ ತಮ್ಮ ಅಭಿಪ್ರಾಯನ್ನು ತಿಳಿಸಬಹುದಾಗಿದೆ ಎಂದು ಸಚಿವಾಲಯ ಸೂಚಿಸಿದೆ.
ರಕ್ಷಣಾ ಸಚಿವಾಲಯವು ಎಕ್ಸ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ‘ರಕ್ಷಣಾ ಸಚಿವಾಲಯವು ಯುವ ಮನಸ್ಸುಗಳನ್ನು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆಹ್ವಾನಿಸುತ್ತದೆ! ದ್ವಿಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ಆಪರೇಷನ್ ಸಿಂಧೂರ್ ಕುರಿತು ಭಾಗವಹಿಸಿ – ಭಯೋತ್ಪಾದನೆ ವಿರುದ್ಧ ಭಾರತದ ನೀತಿಯನ್ನು ಮರು ವ್ಯಾಖ್ಯಾನಿಸಿʼ ಎಂದು ಹೇಳಿದೆ. ‘ಮೊದಲ 3 ವಿಜೇತರಿಗೆ ತಲಾ 10,000 ರೂಪಾಯಿ ಸಿಗುತ್ತದೆ. ಜೊತೆಗೆ, ದಿಲ್ಲಿಯ ಕೆಂಪು ಕೋಟೆಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆʼ ಎಂದು ತಿಳಿಸಿದೆ.
ರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾ, ‘ಸ್ಪರ್ಧೆಯ ಜೂನ್ 1 ಜೂ.30ರ ವರೆಗೆ ನಡೆಯುತ್ತದೆ. ಒಬ್ಬ ವ್ಯಕ್ತಿಗೆ ಒಂದು ಪ್ರವೇಶ ಮಾತ್ರ. ಆಸಕ್ತರು ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಪ್ರಬಂಧಗಳನ್ನು ಸಲ್ಲಿಸಬಹುದು. ಯುವಜನರ ಧ್ವನಿಯನ್ನು ಕೇಳಲು ಮತ್ತು ದೇಶದ ಭದ್ರತೆಗೆ ಅವರ ಆಲೋಚನೆಗಳನ್ನು ಪಡೆಯಲು ಈ ಸ್ಪರ್ಧೆಯನ್ನು ಆಯೋಜಿಸಿದೆʼ ಎಂದು ಮಾಹಿತಿ ನೀಡಿದೆ.
ಆಪರೇಷನ್ ಸಿಂಧೂರ್ ಮುಗಿದಿಲ್ಲ!
‘ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಪಾಕಿಸ್ತಾನಿ ಉಗ್ರರು ನಮ್ಮ ಸಹೋದರಿಯರ ಸಿಂದೂರ ಅಳಿಸಿದರು. ಉಗ್ರರನ್ನು ಸದೆ ಬಡಿದ ನಮ್ಮ ಯೋಧರು ಸಿಂದೂರದ ಮಹತ್ವ ಏನೆಂಬುದನ್ನು ಜಗತ್ತಿಗೆ ತೋರಿಸಿದರು. 140 ಕೋಟಿ ಜನರ ಪರವಾಗಿ ಹೇಳುತ್ತಿದ್ದೇನೆ, ‘ಆಪರೇಷನ್ ಸಿಂಧೂರ’ ಇನ್ನೂ ಮುಗಿದಿಲ್ಲ. ಭಾರತದ ಮೇಲೆ ದಾಳಿ ನಡೆಸುವ ದುಸ್ಸಾಹಸ ಮಾಡಿದರೆ ತಕ್ಕ ಶಾಸ್ತಿ ಮಾಡುತ್ತೇವೆ,’ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ. ‘ಉಗ್ರವಾದದ ವಿರುದ್ಧ ನಮ್ಮದು ಶೂನ್ಯ ಸಹಿಷ್ಟು ನೀತಿಯಾಗಿದೆ. ಭಾರತದ ಮೇಲೆ ಉಗ್ರರನ್ನು ಛೂ ಬಿಡುವ ಪರಿಪಾಠ ಬೆಳೆಸಿಕೊಂಡಿರುವ ಪಾಕಿಸ್ತಾನಕ್ಕೆ ಮೂರು ಬಾರಿ ಪೆಟ್ಟು ಕೊಡಲಾಗಿದೆ. ಸರ್ಜಿಕಲ್ ಸ್ಟ್ರೈಕ್ (2016) ಏರ್ಸ್ಟ್ರೈಕ್ (2019), ಆಪರೇಷನ್ ಸಿಂದೂರ ಮೂಲಕ ಉಗ್ರರ ಮೂಲನೆಲೆ ಸೌಕರ್ಯಗಳನ್ನು ಧ್ವಂಸಗೊಳಿಸಲಾಗಿದೆ,’ ಎಂದು ಹೇಳಿದರು.
ಆಪರೇಷನ್ ಸಿಂಧೂರ್ ವೇಳೆ ಭಾರತೀಯ ವಿಮಾನ ಪತನ?
ಪಾಕಿಸ್ತಾನದ ವಿರುದ್ಧ ನಡೆದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆ ವಿಮಾನಗಳು ಪತನವಾಗಿವೆ ಎಂಬ ಸಂಗತಿಯನ್ನು ತ್ರಿವಳಿ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಖಾಸಗಿ ಟಿವಿ ‘ಬ್ಲೂಮ್ಬರ್ಗ್’ಗೆ ನೀಡಿದ ಸಂದರ್ಶನಲ್ಲಿ ಅನಿಲ್ ಚೌಹಾಣ್, ‘ಯುದ್ಧ ಭೂಮಿಯಲ್ಲಿ ಎಷ್ಟು ನಷ್ಟವಾಯಿತು ಎಂಬುದು ಮುಖ್ಯವಲ್ಲ. ಏಕೆ ಮತ್ತು ಹೇಗೆ ನಷ್ಟವಾಯಿತು ಎಂಬುದನ್ನು ಅರ್ಥ ಮಾಡಿಕೊಂಡು, ನಮ್ಮ ಕಡೆಯಿಂದಾದ ತಪ್ಪನ್ನು ಸರಿಪಡಿಸಿಕೊಳ್ಳುವುದು ಮುಖ್ಯ. ಇಲ್ಲಿ ಸಂಖ್ಯೆಗಳು ಮುಖ್ಯವಲ್ಲ’ ಎಂದು ಹೇಳಿದ್ದಾರೆ. ಪಾಕಿಸ್ತಾನ ಜತೆಗಿನ ಸಂಘರ್ಷದಲ್ಲಿ ಭಾರತದ ಎಷ್ಟು ಯುದ್ಧ ವಿಮಾನಗಳು ಪತನವಾದವು ಎಂಬ ಸಂಗತಿಯನ್ನು ಸರಕಾರ ಬಹಿರಂಗಪಡಿಸಬೇಕು ಎಂಬ ಪ್ರತಿಪಕ್ಷಗಳ ಆಗ್ರಹದ ಹೊತ್ತಿನಲ್ಲಿ ಚೌಹಾಣ್ ಮಾತು ಹೊಸ ಸಂಚಲನ ಮೂಡಿಸಿದೆ.
Vijayakarnataka