
IPL 2025 Qualifier 2: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 203 ರನ್ ಗಳಿಸಿತು. ಆದರೆ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರ ಅದ್ಭುತ ಬ್ಯಾಟಿಂಗ್ನಿಂದಾಗಿ ಪಂಜಾಬ್ ಗೆದ್ದು ಫೈನಲ್ಗೆ ಪ್ರವೇಶ ಪಡೆಯಿತು. ಮಂಗಳವಾರ ನಡೆಯುವ ಫೈನಲ್ ಪಂದ್ಯದಲ್ಲಿ ಪಂಜಾಬ್ ಆರ್ಸಿಬಿಯನ್ನು ಎದುರಿಸಲಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಐಪಿಎಲ್ 2025 (IPL 2025) ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ (MI vs PBKS) ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಗೆದ್ದುಕೊಳ್ಳುವ ಮೂಲಕ 2014 ರ ನಂತರ ಎರಡನೇ ಬಾರಿಗೆ ಐಪಿಎಲ್ ಫೈನಲ್ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 203 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರ ಏಕಾಂಗಿ ಹೋರಾಟದ ಫಲವಾಗಿ ಇನ್ನೊಂದು ಓವರ್ ಬಾಕಿ ಇರುವಂತೆಯೇ ದಾಖಲೆಯ ಗೆಲುವು ಸಾಧಿಸಿತು. ಇದೀಗ ಮಂಗಳವಾರ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಪಂಜಾಬ್, ಆರ್ಸಿಬಿಯನ್ನು ಎದುರಿಸಲಿದೆ.
ಪಂದ್ಯಕ್ಕೆ ಮಳೆ ಅಡ್ಡಿ
ಮಳೆ ಪೀಡಿತ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತು. ಮಳೆಯಿಂದಾಗಿ ಪಂದ್ಯ ಎರಡು ಗಂಟೆ 15 ನಿಮಿಷ ತಡವಾಗಿ ಆರಂಭವಾದರೂ, ಓವರ್ಗಳನ್ನು ಕಡಿಮೆ ಮಾಡಲಿಲ್ಲ. ಆದಾಗ್ಯೂ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಮಾಜಿ ನಾಯಕ ರೋಹಿತ್ ಶರ್ಮಾ ಕೇವಲ 8 ರನ್ ಬಾರಿಸಿ ಔಟಾದರು. ಜಾನಿ ಬೈರ್ಸ್ಟೋವ್ ಮತ್ತೊಮ್ಮೆ ಉತ್ತಮವಾಗಿ ಬ್ಯಾಟಿಂಗ್ ಮಾಡಿ 38 ರನ್ಗಳ ಕಾಣಿಕೆ ನೀಡಿದರು. ಇದಾದ ನಂತರ, ಸೂರ್ಯಕುಮಾರ್ ಮತ್ತು ತಿಲಕ್ ಮೂರನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟ ನಡೆಸಿ ಮುಂಬೈ ಇನ್ನಿಂಗ್ಸ್ನ ಜವಾಬ್ದಾರಿಯನ್ನು ವಹಿಸಿಕೊಂಡರು.
ತಿಲಕ್- ಸೂರ್ಯ ಜೊತೆಯಾಟ
ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ, ಇಬ್ಬರೂ ಬ್ಯಾಟ್ಸ್ಮನ್ಗಳು ಅರ್ಧಶತಕದಿಂದ ಕೂದಲೆಳೆ ಅಂತರದಲ್ಲಿ ವಂಚಿತರಾದರು. ಈ ಇಬ್ಬರು ಬ್ಯಾಟ್ಸ್ಮನ್ಗಳು ಔಟಾದ ನಂತರ, ಮುಂಬೈ ಇನ್ನಿಂಗ್ಸ್ ನಿಧಾನವಾಯಿತು. ಆದಾಗ್ಯೂ, ಕೊನೆಯಲ್ಲಿ ನಮನ್ ಧೀರ್ ತಮ್ಮ ಹೊಡಿಬಡಿ ಆಟದ ಮೂಲಕ ಮುಂಬೈ ತಂಡದ ಸ್ಕೋರ್ ಅನ್ನು 200 ದಾಟಿಸಿದರು. ನಮನ್ 37 ರನ್ ಗಳಿಸಿ ಔಟಾದರೆ, ನಾಯಕ ಹಾರ್ದಿಕ್ ಪಾಂಡ್ಯ 15 ರನ್ ಗಳಿಸಿ ಔಟಾದರು. ಪಂಜಾಬ್ ಪರ ಅಜ್ಮತುಲ್ಲಾ ಎರಡು ವಿಕೆಟ್ ಪಡೆದರೆ, ಜೇಮಿಸನ್, ಸ್ಟೊಯಿನಿಸ್, ವಿಶಾಕ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.
ಪಂಜಾಬ್ಗೆ ಗೆಲುವು ತಂದ ಶ್ರೇಯಸ್
ಈ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ಗೂ ಉತ್ತಮ ಆರಂಭ ಸಿಗಲಿಲ್ಲ. ತಂಡವು ಕೇವಲ 72 ರನ್ಗಳಿಗೆ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಇದಾದ ನಂತರ, ಶ್ರೇಯಸ್ ಮತ್ತು ನೆಹಾಲ್ ವಧೇರಾ ನಾಲ್ಕನೇ ವಿಕೆಟ್ಗೆ 84 ರನ್ಗಳ ಜೊತೆಯಾಟ ನಡೆಸಿದರು. ಈ ಸಮಯದಲ್ಲಿ, ಶ್ರೇಯಸ್ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶ್ರೇಯಸ್ ಮತ್ತು ವಧೇರಾ ನಡುವಿನ ಜೊತೆಯಾಟವನ್ನು ಅಶ್ವಿನಿ ಕುಮಾರ್ 48 ರನ್ ಬಾರಿಸಿದ್ದ ವಧೇರಾ ಅವರನ್ನು ಔಟ್ ಮಾಡುವ ಮೂಲಕ ಮುರಿದರು. ಆದರೆ, ನಾಯಕನ ಇನ್ನಿಂಗ್ಸ್ ಆಡಿದ ಶ್ರೇಯಸ್ ಕೊನೆಯವರೆಗೂ ಅಜೇಯರಾಗಿ ಉಳಿದು 19ನೇ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಶ್ರೇಯಸ್ 41 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎಂಟು ಸಿಕ್ಸರ್ಗಳ ಸಹಾಯದಿಂದ 87 ರನ್ ಗಳಿಸಿ ಅಜೇಯರಾಗುಳಿದರು.
ಆರ್ಸಿಬಿ- ಪಂಜಾಬ್ ಫೈಟ್
2014 ರ ನಂತರ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಿಸಿದೆ. ಈಗ, ಜೂನ್ 3 ರಂದು ಅಹಮದಾಬಾದ್ನ ಅದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ಪಂಜಾಬ್ ತಂಡವನ್ನು ಸೋಲಿಸುವ ಮೂಲಕ ಆರ್ಸಿಬಿ ಫೈನಲ್ಗೆ ತಲುಪಿತ್ತು. ಪಂಜಾಬ್ ಮತ್ತು ಆರ್ಸಿಬಿ ಇಲ್ಲಿಯವರೆಗೆ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ, ಆದ್ದರಿಂದ ಈಗ ಟೂರ್ನಮೆಂಟ್ಗೆ ಹೊಸ ಚಾಂಪಿಯನ್ ಸಿಗುವುದು ಖಚಿತ.
TV9 Kannada