ಜನ ಗಣತಿ ಜೊತೆ ಜಾತಿ ಗಣತಿಗೆ ದಿನಾಂಕ ಪ್ರಕಟಿಸಿದ ಕೇಂದ್ರ ಸರ್ಕಾರ: ಯಾವಾಗ, ಎಲ್ಲಿ ಮೊದಲು?

POPULATION CENSUS 2027: ನನೆಗುದಿಗೆ ಬಿದ್ದಿರುವ ಜನ ಗಣತಿಯನ್ನು ನಡೆಸಲು ಕೇಂದ್ರ ಸರ್ಕಾರ ಕೊನೆಗೂ ಮುಹೂರ್ತ ನಿಗದಿ ಮಾಡಿದೆ.

ನವದೆಹಲಿ : ಜನ ಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ. ಗಣತಿ ನಡೆಸುವ ದಿನಾಂಕವನ್ನು ಇಂದು (ಬುಧವಾರ) ಪ್ರಕಟಿಸಿತು. ದೇಶದಲ್ಲಿ ಎರಡು ಹಂತದಲ್ಲಿ ಗಣತಿ ನಡೆಯಲಿದೆ ಎಂದು ಕೇಂದ್ರ ಹೇಳಿದೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಗೃಹ ಸಚಿವಾಲಯ, ಹವಾಮಾನ ಮತ್ತು ಪ್ರದೇಶಗಳಿಗೆ ಅನುಗುಣವಾಗಿ ಗಣತಿ ನಡೆಯಲಿದೆ. ಲಡಾಖ್​, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅಕ್ಟೋಬರ್​ 1, 2026 ರಿಂದ ಮತ್ತು ದೇಶದ ಉಳಿದ ಭಾಗಗಳಲ್ಲಿ ಮಾರ್ಚ್ 1,​ 2027 ರಿಂದ ಜನ ಗಣತಿಯೊಂದಿಗೆ ಜಾತಿ ಗಣತಿಯೂ ನಡೆಯಲಿದೆ ಎಂದು ತಿಳಿಸಿದೆ.

1948ರ ಜನಗಣತಿ ಕಾಯ್ದೆಯ ಪ್ರಕಾರ ದೇಶದಲ್ಲಿ 10 ವರ್ಷಗಳಿಗೊಮ್ಮೆ ಗಣತಿ ನಡೆಯಲಿದೆ. ಅದರ ಅನುಸಾರವೇ ಈ ಬಾರಿ ಗಣತಿ ಆಗಲಿದೆ. ಅಧಿಸೂಚನೆಯನ್ನು ಜೂನ್ 16 ರಂದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಗಣತಿಗೆ ಅಡ್ಡಿಯಾಗಿದ್ದ ಕೋವಿಡ್​: 2021 ರಲ್ಲಿ ನಡೆಯಬೇಕಿದ್ದ ಜನಗಣತಿಯು ಕೋವಿಡ್​ -19 ಸಾಂಕ್ರಾಮಿಕದಿಂದಾಗಿ ಸ್ಥಗಿತಗೊಂಡಿತ್ತು. ಕೋವಿಡ್​ ಹರಡುವುದಕ್ಕೂ ಮೊದಲು, ಜಾತಿ ಗಣತಿ ನಡೆಸಲು ನಿರ್ಧರಿಸಿದ್ದ ಕೇಂದ್ರವು ಅದಕ್ಕಾಗಿ ಮುಹೂರ್ತವನ್ನು ನಿಗದಿ ಮಾಡಿತ್ತು. ಎರಡು ಹಂತದಲ್ಲಿ ಅಂದರೆ, 2020 ರ ಏಪ್ರಿಲ್-ಸೆಪ್ಟೆಂಬರ್​​ನಿಂದ ಮೊದಲ ಹಂತ, 2021ರ ಫೆಬ್ರವರಿಯಿಂದ ಎರಡನೇ ಹಂತ ಘೋಷಿಸಲಾಗಿತ್ತು.

ಕೊನೆಯ ಜನ ಗಣತಿಯು 2011 ರಲ್ಲಿ ಎರಡು ಹಂತಗಳಲ್ಲಿ ನಡೆದಿತ್ತು.

ಜಾತಿ ಗಣತಿಗೆ ಹೆಚ್ಚಿದ ಒತ್ತಡ: ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ರಾಷ್ಟ್ರವ್ಯಾಪಿ ಜಾತಿ ಜನಗಣತಿ ನಡೆಸಲು ಒತ್ತಾಯಿಸುತ್ತಿವೆ. ಇದು ಕೆಲವೆಡೆ ಚುನಾವಣಾ ವಿಷಯವೂ ಆಗಿದೆ. ಬಿಹಾರ, ತೆಲಂಗಾಣ ಮತ್ತು ಕರ್ನಾಟಕದಂತಹ ಕೆಲವು ರಾಜ್ಯಗಳು ಈಗಾಗಲೇ ಜಾತಿ ಸಮೀಕ್ಷೆಗಳನ್ನು ನಡೆಸಿವೆ.

ಜಾತಿ ಗಣತಿ ಕುರಿತಂತೆ ಸರ್ವಪಕ್ಷ ಸಭೆ ಕರೆಯಲು ಕಾಂಗ್ರೆಸ್ ಆಗ್ರಹಿಸುತ್ತಿದೆ. ಮೀಸಲಾತಿಗೆ ಇರುವ ಶೇ.50ರ ಮಿತಿಯನ್ನು ತೆಗೆದುಹಾಕಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಹೆಚ್ಚಿನ ಮೀಸಲಾತಿ ಒದಗಿಸುವ ಸಂವಿಧಾನದ ವಿಧಿ 15 (5) ಅನ್ನು ತಕ್ಷಣ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ETV Bharat

Leave a Reply

Your email address will not be published. Required fields are marked *