ಜೆ ಎನ್ ಕೋಟೆ ಆಯುಷ್ ಕೇಂದ್ರದಿಂದ ಹರಿತ್ (ಹಸಿರು) ಯೋಗ ಕಾರ್ಯಕ್ರಮ.

ಚಿತ್ರದುರ್ಗ: ಜೂ.05 ವಿಶ್ವ ಪರಿಸರ ದಿನದ ಅಂಗವಾಗಿ ಜಿಲ್ಲಾ ಪಂಚಾಯತ್ ಚಿತ್ರದುರ್ಗ, ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಚಿತ್ರದುರ್ಗ ತಾಲ್ಲೂಕಿನ ಜೆ ಎನ್ ಕೋಟೆ ಸರ್ಕಾರಿ ಆಯುಷ್ಮಾನ್ ಆರೋಗ್ಯ ಮಂದಿರ(ಆಯುಷ್) ವತಿಯಿಂದ ಆಯುಷ್ ಚಿಕಿತ್ಸಾಲಯದ ಆಯುರ್ವೇದ ಸಸ್ಯತೋಟದಲ್ಲಿ ‘ಹರಿತ್ ಯೋಗ’ (ಹಸಿರು ಯೋಗ) ಎಂಬ ವಿಶಿಷ್ಟ ಕಾರ್ಯಕಮ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಆಯುರ್ವೇದ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜೆ ಎನ್ ಕೋಟೆ ಆಯುಷ್ ಚಿಕಿತ್ಸಾ ಕೇಂದ್ರದ ಆಡಳಿತಾಧಿಕಾರಿ ಡಾ|| ವಿಜಯಲಕ್ಷ್ಮೀ ಪಿ. ಮಾತನಾಡಿ ” ಹರಿತ್ ಯೋಗ” ಎಂಬುದು ಒಂದು ವಿಶೇಷ ಕಾರ್ಯಕ್ರಮವಾಗಿದ್ದು, ಇದು ಯೋಗವನ್ನು ಪರಿಸರ ಸಂರಕ್ಷಣೆಯೊಂದಿಗೆ ಜೋಡಿಸುತ್ತದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಮನ್ ಕಿ ಬಾತ್” ನಲ್ಲಿ ಘೋಷಿಸಿದಂತೆ, ಅಂತರರಾಷ್ಟ್ರೀಯ ಯೋಗ ದಿನ 2025 ರ ಥೀಮ್ “ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ”. ಈ ಥೀಮ್ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಅವುಗಳಲ್ಲಿ “ಹರಿತ್ ಯೋಗ” ಕೂಡ ಒಂದು. ಯೋಗದ ಜೊತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಮಹತ್ವವನ್ನು ತಿಳಿಸುವುದು ಇದರ ಉದ್ದೇಶವಾಗಿದೆ.ಎಂದು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಇದೇ ಸಂಧರ್ಭದಲ್ಲಿ ಗ್ರಾಮಸ್ಥರಿಗೆ ಯೋಗಭ್ಯಾಸ ತರಬೇತಿ ನೀಡಿ ಮಾತನಾಡಿದ ಆಯುಷ್ ಕೇಂದ್ರದ ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಮಾತನಾಡಿ ” ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮ ಪರಿಸರದ ಮೇಲೆ ಅವಲಂಬಿತವಾಗಿದೆ ಹರಿತ್ ಯೋಗ” ಎಂದರೆ ಯೋಗಾಭ್ಯಾಸದ ಜೊತೆಗೆ ಪರಿಸರವನ್ನು ಹಸಿರಾಗಿಸುವ ಮತ್ತು ಪರಿಸರ ನೈರ್ಮಲ್ಯತೆ ಕಾಪಾಡುವ ಚಟುವಟಿಕೆಗಳಲ್ಲಿ ಭಾಗವಹಿಸುವುದಾಗಿದೆ. ಇದು ನಮ್ಮ ಆರೋಗ್ಯ ಮತ್ತು ಪರಿಸರ ಎರಡಕ್ಕೂ ಒಳಿತನ್ನುಂಟು ಮಾಡುವ ಒಂದು ಉಪಯುಕ್ತ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಹಸಿರು ಗಿಡಮರಗಳ ನಡುವೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆ ಎನ್ ಕೋಟೆ ಗ್ರಾಮ ಪಂಚಾಯತ್ ಪಿಡಿಒ ಮಂಜುಳಾ ಕೆ ಎಸ್, ಹಾಗೂ ಸಿಬ್ಬಂದಿ ಪೂಜಾನಾಯಕ ದೊಡ್ಡಸಿದ್ಧವ್ವನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಬಾಗೇಶ್ ಉಗ್ರಾಣ, ಸಮುದಾಯ ಆರೋಗ್ಯಾಧಿಕಾರಿ ರಮೇಶ್ ಟಿ. ಗ್ರಾಮದ ಮುಖಂಡರಾದ ಚಿದಾನಂದಪ್ಪ, ನಂಜುಂಡಪ್ಪ, ಸಿದ್ಧೇಶ್ ಇನ್ನಿತರರು ಭಾಗವಹಿಸಿದ್ದರು.

Views: 38

Leave a Reply

Your email address will not be published. Required fields are marked *