ಪ್ರತಿಯೊಬ್ಬ ಮಹಿಳೆಯೂ ತನ್ನ ಫೋನ್‌ನಲ್ಲಿ ಈ ನಂಬರ್‌ಗಳನ್ನು ಸೇವ್‌ ಮಾಡಿ ಇಟ್ಟುಕೊಳ್ಳಲೇಬೇಕು.

ನಮ್ಮ ಸುರಕ್ಷತೆ ಯಾವಾಗಲೂ ನಮ್ಮ ಮೊದಲ ಆದ್ಯತೆಯಾಗಿರಬೇಕು. ಅದರಲ್ಲೂ ಮಹಿಳೆಯರು ಒಂಟಿಯಾಗಿರಲಿ ಅಥವಾ ಮನೆಯಲ್ಲಿರಲಿ ಅಥವಾ ಹೊರಗೆಲ್ಲೋ ಹೋಗುವಾಗ ಹೆಚ್ಚಿನ ಸುರಕ್ಷತೆ (Women’s Safety) ವಹಿಸುವುದು ಅತ್ಯಗತ್ಯ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದಿಷ್ಟು ಸಹಾಯವಾಣಿ ಸಂಖ್ಯೆಗಳನ್ನು ಸಹ ಮಹಿಳೆಯರು ತಮ್ಮ ಮೊಬೈಲ್‌ನಲ್ಲಿ ಸೇವ್‌ ಮಾಡಿ ಇಟ್ಟುಕೊಳ್ಳುವುದು ಬಹಳ ಅವಶ್ಯಕ.

ದೌರ್ಜನ್ಯ, ಅಪಾಯಗಳು ಎದುರಾದ ಸಂದರ್ಭದಲ್ಲಿ ಈ ಸಹಾಯವಾಣಿ (Women’s Safety Helpline) ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ತುರ್ತು ಸಹಾಯವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ, ಯಾವೆಲ್ಲಾ ಸಹಾಯವಾಣಿ ಸಂಖ್ಯೆಗಳನ್ನು ಸೇವ್‌ ಮಾಡಿ ಇಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.

ಮಹಿಳೆಯರು ತಮ್ಮ ಮೊಬೈಲ್‌ನಲ್ಲಿ ಸೇವ್‌ ಮಾಡಿ ಇಟ್ಟುಕೊಳ್ಳಬೇಕಾದ ನಂಬರ್:

ಮಹಿಳೆಯರು ಅಪಾಯದಲ್ಲಿ ಇರುವಾಗ ಅಥವಾ ಕೆಲವೊಂದು ತುರ್ತು ಸಂದರ್ಭಗಳಲ್ಲಿ ಕೆಲವು ಟೋಲ್-ಫ್ರೀ ಸಂಖ್ಯೆಗಳು ನಿಮಗೆ ಸಹಾಯ ಮಾಡುತ್ತವೆ. ಆದಾಗ್ಯೂ, ಕೆಲವು ಜನರಿಗೆ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ. ಸರ್ಕಾರವು ಟೋಲ್-ಫ್ರೀ ಮೂಲಕ ಸಹಾಯವನ್ನು ಒದಗಿಸುವ ಆ ಸಹಾಯವಾಣಿ ಸಂಖ್ಯೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

100- ಪೊಲೀಸ್ ಸಹಾಯಕ್ಕಾಗಿ:

ಪೊಲೀಸ್ ತುರ್ತು ಸೇವೆಗಳಿಗಾಗಿ 100 ಸಂಖ್ಯೆಯನ್ನು ಸೇವ್‌ ಮಾಡಿ ಇಟ್ಕೊಳ್ಳಿ. ಈ ಮೂಲಕ ಯಾವುದೇ ತುರ್ತು ಸಂದರ್ಭದಲ್ಲಿ, ನೀವು ಸಹಾಯಕ್ಕಾಗಿ ಪೊಲೀಸರನ್ನು ಕರೆಯಬಹುದು. ಅಪರಾಧ ಚಟುವಟಿಕೆ ನಡೆಯುತ್ತಿರುವಾಗ ಅಥವಾ ಸಂಭವಿಸಿದಾಗ ನೀವು ಈ ಸಂಖ್ಯೆಗೆ ಕರೆ ಮಾಡಬಹುದು. ನೀವು ಕರೆ ಮಾಡುವ ಯಾವುದೇ ಸ್ಥಳದಿಂದ ನಿಮ್ಮ ಮಾಹಿತಿಯನ್ನು ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ರವಾನಿಸಲಾಗುತ್ತದೆ.

1091- ಮಹಿಳಾ ಸಹಾಯವಾಣಿ:

1091 ಸಹಾಯವಾಣಿ ಸಂಖ್ಯೆಯು ಮಹಿಳೆಯರಿಗೆ ಸೇವೆಗಳನ್ನು ಒದಗಿಸುತ್ತದೆ. ಮಹಿಳೆಯರು ಕಿರುಕುಳಕ್ಕೊಳಗಾದಾಗ, ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದಾಗ ಅಥವಾ ಯಾರಾದರೂ ನಿಮ್ಮನ್ನು ಹಿಂಬಾಲಿಸಿದಾಗ ಅಥವಾ ಬೆದರಿಕೆ ಹಾಕಿದಂತಹ ತುರ್ತು ಸಂದರ್ಭಗಳಲ್ಲಿ ಈ ಸಂಖ್ಯೆಗೆ ಕರೆ ಮಾಡಿ, ಸಹಾಯವನ್ನು ಪಡೆದುಕೊಳ್ಳಬಹುದು.

181 – ಮಹಿಳಾ ಸಹಾಯವಾಣಿ:

ರಾಷ್ಟ್ರೀಯ ಮಹಿಳಾ ಆಯೋಗದ (NCW) 181 ಸಹಾಯವಾಣಿ ಸಂಖ್ಯೆಯು ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆ ಮತ್ತು ಕಿರುಕುಳಕ್ಕೆ ಸ್ಪಂದಿಸುತ್ತದೆ ಮತ್ತು ಸಮಾಲೋಚನೆಯನ್ನು ಒದಗಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಇದು ರಕ್ಷಣೆಯನ್ನು ಸಹ ಒದಗಿಸುತ್ತದೆ. ಇದು ಟೋಲ್-ಫ್ರೀ ಸಂಖ್ಯೆಯಾಗಿದ್ದು, ಹಿಂಸಾಚಾರಕ್ಕೆ ಒಳಗಾದಾಗ ಈ ಸಂಖ್ಯೆಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದು.

1098- ಮಕ್ಕಳ ಸಹಾಯವಾಣಿ:

ಮಕ್ಕಳು ಅಪಾಯದಲ್ಲಿರುವಾಗ, ನೀವು 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದು. ಇದು ಮಕ್ಕಳಿಗೆ ಮಾತ್ರವಲ್ಲದೆ ಹದಿಹರೆಯದ ಹುಡುಗಿಯರಿಗೂ ಸಹಾಯವನ್ನು ಒದಗಿಸುತ್ತದೆ. ಇದು ಟೋಲ್-ಫ್ರೀ ತುರ್ತು ಸಹಾಯವಾಣಿ ಸಂಖ್ಯೆಯಾಗಿದೆ. ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ನಡೆಸುತ್ತಿದೆ. ಮಕ್ಕಳ ವಿರುದ್ಧ ದೈಹಿಕ, ಲೈಂಗಿಕ ಅಥವಾ ದೌರ್ಜನ್ಯ ನಡೆದ ಸಂದರ್ಭದಲ್ಲಿ ನೀವು ಈ ಸಂಖ್ಯೆಗೆ ಕರೆ ಮಾಡಬಹುದು. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳು ಕಾಣೆಯಾದ ಸಂದರ್ಭದಲ್ಲಿಯೂ ನೀವು ಈ ಸಂಖ್ಯೆಗೆ ಕರೆ ಮಾಡಬಹುದು.

108 – ಆಂಬ್ಯುಲೆನ್ಸ್ ಸೇವೆಗಳು:

ನಿಮಗೆ ವೈದ್ಯಕೀಯ ಸೇವೆ ಬೇಕಾದಾಗ, ನೀವು 108 ಗೆ ಕರೆ ಮಾಡಬಹುದು. ಅಪಘಾತಗಳು ಅಥವಾ ತುರ್ತು ಸಂದರ್ಭಗಳಲ್ಲಿ ಈ ಸಂಖ್ಯೆಗೆ ಕರೆ ಮಾಡುವುದರಿಂದ ತಕ್ಷಣದಲ್ಲಿ ನಿಮಗೆ ವೈದ್ಯಕೀಯ ನೆರವು ಪಡೆಯಬಹುದು.

1090 – ಸೈಬರ್ ಕ್ರೈಮ್ ಸಹಾಯವಾಣಿ:

ಇದು ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ. ಆನ್‌ಲೈನ್ ಕಿರುಕುಳ, ಆನ್‌ಲೈನ್ ನಿಂದನೆ, ಬ್ಲ್ಯಾಕ್‌ಮೇಲ್‌ನಂತಹ ದೂರುಗಳನ್ನು ಇಲ್ಲಿ ನೀವು ನೀಡಬಹುದು. ಇದರ ಜೊತೆಗೆ ಮಹಿಳೆಯರು ಸರ್ಕಾರಗಳು ಒದಗಿಸುವ ಸುರಕ್ಷತಾ ಅಪ್ಲಿಕೇಶನ್‌ಗಳನ್ನು ಸಹ ಡೌನ್‌ಲೋಡ್‌ ಮಾಡಿ ಇಟ್ಟುಕೊಳ್ಳುವುದು ಅತೀ ಅವಶ್ಯಕ. ನೀವು ತುರ್ತು ಪರಿಸ್ಥಿತಿಯಲ್ಲಿದ್ದಾಗ ಇವು ಹೆಚ್ಚಿನ ಸಹಾಯಕ್ಕೆ ಬರುತ್ತವೆ.

TV9 Kannada

Leave a Reply

Your email address will not be published. Required fields are marked *