
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ (WTC 2025 final) ಪಂದ್ಯ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ (Australia vs South Africa) ಆಫ್ರಿಕಾ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ನಾಯಕ ಟೆಂಬಾ ಬವುಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಕಗಿಸೋ ರಬಾಡ (Kagiso Rabada) ಹಾಗೂ ಮಾರ್ಕೋ ಯಾನ್ಸನ್ ಅವರ ಮಾರಕ ದಾಳಿಗೆ ನಲುಗಿ ಕೇವಲ 212 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ 66 ರನ್‌ಗಳ ಇನ್ನಿಂಗ್ಸ್ ಆಡಿದರೆ, ಬ್ಯೂ ವೆಬ್‌ಸ್ಟರ್ 72 ರನ್‌ಗಳ ಕಾಣಿಕೆ ನೀಡಿದರು. ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 23 ರನ್ ಬಾರಿಸಿ ತಂಡವನ್ನು 200 ರನ್‌ಗಳ ಗಡಿ ದಾಟಿದರು. ಆಫ್ರಿಕಾ ಪರ ರಬಾಡ 5 ವಿಕೆಟ್ ಪಡೆದರೆ, ಯಾನ್ಸನ್ 3 ವಿಕೆಟ್ ಉರುಳಿಸಿದರು.
ಆಸೀಸ್ಗೆ ಆರಂಭಿಕ ಆಘಾತ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಕ್ಕೆ ಆರಂಭಿಕ ಆಘಾತ ಎದುರಾಯಿತು. ಉಸ್ಮಾನ್ ಖವಾಜಾ ಖಾತೆ ತೆರೆಯಲೂ ಸಾಧ್ಯವಾಗದೆ ರಬಾಡಗೆ ಬಲಿಯಾದರು. ಇದರ ನಂತರ, ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ಕ್ಯಾಮರೂನ್ ಗ್ರೀನ್ ಕೂಡ ಕೇವಲ ನಾಲ್ಕು ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಆಟಗಾರ ಲಬುಶೇನ್ ಕೂಡ ಹೆಚ್ಚು ಹೊತ್ತು ವಿಕೆಟ್‌ನಲ್ಲಿ ಉಳಿಯಲು ಸಾಧ್ಯವಾಗದೆ ಕೇವಲ 17 ರನ್‌ಗಳಿಗೆ ಸುಸ್ತಾದರೆ, ಟ್ರಾವಿಸ್ ಹೆಡ್ 11 ರನ್ ಗಳಿಸಿ ಔಟಾದರು.
ಸ್ಮಿತ್- ವೆಬ್‌ಸ್ಟರ್ ಅರ್ಧಶತಕ
ಹೀಗಾಗಿ ಮೊದಲ ಸೆಷನ್‌ನಲ್ಲಿ 67 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಬೃಹತ್ ಪಾಲುದಾರಿಕೆಯ ಅಗತ್ಯವಿತ್ತು. ಇದಕ್ಕೆ ಪೂರಕವಾಗಿ ಸ್ಟೀವ್ ಸ್ಮಿತ್ ಮತ್ತು ಬ್ಯೂ ವೆಬ್‌ಸ್ಟರ್ ಐದನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟ ನಡೆಸಿದರು. ಈ ಸಮಯದಲ್ಲಿ, ಸ್ಮಿತ್ 112 ಎಸೆತಗಳಲ್ಲಿ 66 ರನ್ ಬಾರಿಸಿ ಮಾರ್ಕ್ರಾಮ್ಗೆ ಬಲಿಯಾದರು. ಇದರ ನಂತರ, ವೆಬ್‌ಸ್ಟರ್ ಕೂಡ ಅರ್ಧಶತಕ ಪೂರೈಸಿ, 92 ಎಸೆತಗಳಲ್ಲಿ 72 ರನ್ ಬಾರಿಸಿ ಔಟಾದರು. ಈ ವಿಕೆಟ್ ನಂತರ, ಆಸ್ಟ್ರೇಲಿಯಾದ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ಕಾಲ ವಿಕೆಟ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅಲೆಕ್ಸ್ ಕ್ಯಾರಿ 23 ರನ್ ಗಳಿಸಿದರೆ, ನಾಯಕ ಪ್ಯಾಟ್ ಕಮ್ಮಿನ್ಸ್ ಒಂದು ರನ್, ಮಿಚೆಲ್ ಸ್ಟಾರ್ಕ್ ಒಂದು ರನ್ಗೆ ವಿಕೆಟ್ ಒಪ್ಪಿಸಿದರು.
ರಬಾಡಗೆ 5 ವಿಕೆಟ್
ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು ಐದು ವಿಕೆಟ್‌ಗಳನ್ನು ಪಡೆದ ರಬಾಡ ದಕ್ಷಿಣ ಆಫ್ರಿಕಾ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದುವರೆಗೆ 332 ವಿಕೆಟ್‌ಗಳನ್ನು ಪಡೆದಿರುವ ರಬಾಡ ಈ ವಿಷಯದಲ್ಲಿ 330 ವಿಕೆಟ್‌ಗಳನ್ನು ಪಡೆದಿದ್ದ ಅಲನ್ ಡೊನಾಲ್ಡ್‌ರನ್ನು ಹಿಂದಿಕ್ಕಿದ್ದಾರೆ.
TV9 kannada