
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 12 2014 ರಿಂದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮೂಲಮಂತ್ರದಡಿ, ಸವಲತ್ತು ಪಡೆದ ಕೆಲವರಿಗೆ ಮಾತ್ರವಲ್ಲದೆ ಎಲ್ಲರನ್ನೂ ಒಳಗೊಳ್ಳುವ ವಿಶಿಷ್ಟ ಅಭಿವೃದ್ಧಿ ಮಾದರಿಯನ್ನು ನರೇಂದ್ರ ಮೋದಿ ಸರ್ಕಾರÀ ಪರಿಚಯಿಸಿ, ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಕ್ರಿಯೆ ಆರಂಭಿಸಿತು. ಅಲ್ಲದೆ ಪ್ರತಿಯೊಂದು ಹೆಜ್ಜೆಯೂ ‘ಭಾರತ ಮೊದಲು’ ಎಂಬ ಬದ್ಧತೆಯೊಂದಿಗೆ ಮುನ್ನಡೆಯುತ್ತಿರುವ ನಿರ್ಣಾಯಕ ನಾಯಕತ್ವವನ್ನು ಜಗತ್ತಿಗೆ ಸಾರಿ ಹೇಳಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಚಿತ್ರದುರ್ಗ ನಗರದ ಖಾಸಗಿ ಹೋಟೆಲ್ನಲ್ಲಿ ಮೋದಿ ಸರ್ಕಾರದ 11 ವರ್ಷಗಳ ಸಾಧನೆಯ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 11 ವರ್ಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ದಶಕಗಳ ಜಡತ್ವ ಮುರಿದು, ದಿಟ್ಟ ನಿರ್ಧಾರಗಳ ಮೂಲಕ ‘ವಿಕಸಿತ ಭಾರತ’ಕ್ಕೆ ಭದ್ರ ಬುನಾದಿ ಹಾಕಿದೆ. ಒಂದು ಕಡೆ ಉSಖಿ, ನೋಟು ಅಮಾನೀಕರಣದಂತಹ ಆರ್ಥಿಕ ಸುಧಾರಣೆಗಳು, ಮತ್ತೊಂದೆಡೆ ಉರಿ-ಬಾಲಾಕೋಟ್ ನಂತಹ ಸರ್ಜಿಕಲ್ ಸ್ಟೈಸ್ ಮತ್ತು ಆಪರೇಷನ್ ಸಿಂಧೂರ್ಗಳಿಂದ ರಾಷ್ಟ್ರದ ಭದ್ರತೆಗೆ ಬಲ ನೀಡಲಾಗಿದೆ. ಹಾಗೆಯೇ, ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಲಾಗಿದೆ ಹಾಗೂ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮಮಂದಿರ ನಿರ್ಮಿಸಿ ಭಾರತೀಯರ ಶತಮಾನಗಳ ಕನಸನ್ನು ನನಸು ಮಾಡಿದ್ದು ಐತಿಹಾಸಿಕ ಸಾಧನೆಗಳಾಗಿವೆ ಎಂದರು.
ಇಂದು, ನಾವು ಜಲ ಜೀವನ್ ಮಿಷನ್ನ ಹರ್ ಘರ್ ಜಲ್ ಯೋಜನೆಯಡಿ ಕುಡಿಯುವ ನೀರು, ಹರ್ ಘರ್ ಬಿಜಲಿ ಯೋಜನೆಯಡಿ ವಿದ್ಯುತ್ ಸಂಪರ್ಕ, ಉತ್ತಮ ಆರೋಗ್ಯ ಸೇವೆಗಳು, ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛ ಶೌಚಾಲಯಗಳು, ಉಜ್ವಲ ಯೋಜನೆಯಡಿ ಎಲ್ಪಿಜಿ ಸಿಲಿಂಡರ್ಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಗುಣಮಟ್ಟದ ಶಿಕ್ಷಣ ಮತ್ತು ಸೂರು ಇಲ್ಲದವರಿಗೆ ವಸತಿ ಸೌಲಭ್ಯಗಳಂತಹ ಅಗತ್ಯ ಸೌಕರ್ಯಗಳನ್ನು ಪ್ರತಿಯೊಬ್ಬ ಭಾರತೀಯನಿಗೆ ಖಾತರಿಪಡಿಸಿದ್ದಾರೆ. ಇದು ಕೇವಲ ಒಂದು ಕನಸಾಗಿ ಉಳಿದಿಲ್ಲ. ಇದು ನಮ್ಮ ಮೋದಿ ಸರ್ಕಾರದ ಬದ್ಧತೆಯಾಗಿದೆ. ಗ್ಯಾರಂಟಿಯಾಗಿದೆ. ಆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಒಟ್ಟಾರೆ ಆರ್ಥಿಕ ಪ್ರಗತಿಗೆ ವ್ಯಾಪಕವಾಗಿ ಕೊಡುಗೆ ನೀಡಿದೆ. ವಿದೇಶಿ ನೇರ ಹೂಡಿಕೆ ಹರಿವನ್ನು ಹೆಚ್ಚಿಸುವುದು, ಉದ್ಯೋಗ ಸೃಷ್ಟಿ, ಹಣದುಬ್ಬರ ನಿಯಂತ್ರಣ, ತೀವ್ರ ಬಡತನ ನಿರ್ಮೂಲನೆ ಹಾಗೂ ತೆರಿಗೆ ಸಂಗ್ರಹಣೆಯ ಸುಧಾರಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ವಿಶೇಷವಾಗಿ, ಸವಾಲಿನ ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ, 2014ರಿಂದ ಭಾರತದ ಆರ್ಥಿಕತೆಯು ದೃಢವಾಗಿ ಮುನ್ನಡೆದಿದೆ ಎಂದು ತಿಳಿಸಿದರು.
ಕರ್ನಾಟಕಕ್ಕೆ ಕರ್ಮಯೋಗಿ ನರೇಂದ್ರ ಮೋದಿ ಸರ್ಕಾರ ಹಲವಾರು ಕೊಡುಗೆಗಳನ್ನು ನೀಡಿದೆ. ಇದರಲ್ಲಿ 2014-2024ರ ಅವಧಿಯಲ್ಲಿ, ಮೋದಿ ಸರ್ಕಾರವು ಕರ್ನಾಟಕದ ರಸ್ತೆ, ರೈಲ್ವೆ, ನಗರಾಭಿವೃದ್ಧಿ ಮತ್ತು ಇಂಧನ ಕ್ಷೇತ್ರಗಳಲ್ಲಿ 5 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆ ಮಾಡಿದೆ. ಕರ್ನಾಟಕದಲ್ಲಿ 1,860 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದ್ದು, ಇದು ರಾಜ್ಯದ ಒಟ್ಟು ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಗುಣಗೊಳಿಸಿದೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ 8,408 ಕೋಟಿ ರೂ. ಮತ್ತು ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ಗೆ 27 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ನೈಋತ್ಯ ರೈಲ್ವೆಗೆ ವಾರ್ಷಿಕ ಸರಾಸರಿ ಅನುದಾನವು ಯುಪಿಎ ಸರ್ಕಾರದ 835 ಕೋಟಿಯಿಂದ, ಮೋದಿ ಸರ್ಕಾರದ ಅವಧಿಯಲ್ಲಿ 3,424 ಕೋಟಿಗೆ ಏರಿಕೆಯಾಗಿದೆ. ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣದಲ್ಲಿ ಐತಿಹಾಸಿಕ ಪ್ರಗತಿ ಸಾಧಿಸಲಾಗಿದೆ. 2009-14ರ ಅವಧಿಯಲ್ಲಿ ವಾರ್ಷಿಕ ಸರಾಸರಿ ಕೇವಲ 18 ಕಿ.ಮೀ. ವಿದ್ಯುದ್ದೀಕರಣವಾಗುತ್ತಿದ್ದರೆ, 2014-25ರ ಅವಧಿಯಲ್ಲಿ ಇದು 16 ಪಟ್ಟು ಹೆಚ್ಚಾಗಿದೆ ವಾರ್ಷಿಕ ಸರಾಸರಿ 294 ಕಿ.ಮೀ. ಗೆ ಏರಿಕೆಯಾಗಿದೆ. ಇಂದು ಕರ್ನಾಟಕದ 96.5% ರೈಲ್ವೆ ಮಾರ್ಗ ವಿದ್ಯುದ್ದೀಕರಣಗೊಂಡಿದೆ.’ ಕರ್ನಾಟಕದಲ್ಲಿ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ ಮತ್ತು 56 ರೈಲು ನಿಲ್ದಾಣಗಳನ್ನು ಅಮೃತ ಭಾರತ ಯೋಜನೆಯಡಿ ಆಧುನೀಕರಣಗೊಳಿಸಲಾಗುತ್ತಿದೆ. ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ನಿರಂತರವಾಗಿ ಆದ್ಯತೆ ನೀಡುತ್ತಿದ್ದು, ಇದು ರಾಜ್ಯಕ್ಕೆ ನೀಡುವ ವಾರ್ಷಿಕ ಅನುದಾನದ ಹೆಚ್ಚಳದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. 2024-25ರ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 7,559 ಕೋಟಿ ಅನುದಾನ ನೀಡಲಾಗಿದ್ದರೆ, 2025-26ರ ಸಾಲಿಗೆ ಈ ಮೊತ್ತವನ್ನು 7,564 ಕೋಟಿಗಳಿಗೆ ಹೆಚ್ಚಿಸಲಾಗಿದೆ. ಬೆಂಗಳೂರಿನ ಸುತ್ತ 271 ಕಿ.ಮೀ. ಉದ್ದದ ವೃತ್ತಾಕಾರದ ರೈಲು ಸಂಪರ್ಕ ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.
ಆರ್ಥಿಕ ಸಹಾಯ ಹಾಗೂ ನಿಷ್ಪಕ್ಷಪಾತ ತೆರಿಗೆ ಹಂಚಿಕೆ ಕೇಂದ್ರ ಸರ್ಕಾರ ಮಾಡಿದೆ ಅನುದಾನದಲ್ಲಿ ಐತಿಹಾಸಿಕ ಹೆಚ್ಚಳವಾಗಿದ್ದು 2014-2024ರ ಅವಧಿಯಲ್ಲಿ, ಮೋದಿ ಸರ್ಕಾರವು ಕರ್ನಾಟಕಕ್ಕೆ ಒಟ್ಟು 2.36 ಲಕ್ಷ ಕೋಟಿ ರೂ.ಗಳ ಅನುದಾನ ನೀಡಿದೆ. ಇದು 2004-2014ರ ಯುಪಿಎ ಸರ್ಕಾರದ 60 ಸಾವಿರ ಕೋಟಿ ರೂ.ಗಳಿಗೆ ಹೋಲಿಸಿದರೆ 243% ಅಧಿಕವಾಗಿದೆ. ತೆರಿಗೆ ಪಾಲಿನಲ್ಲಿಯೂ ಸಹಾ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ 2.82 ಲಕ್ಷ ಕೋಟಿ ರೂ. ತೆರಿಗೆ ಪಾಲು ಸಿಕ್ಕಿದೆ. ಇದು ಯುಪಿಎ ಸರ್ಕಾರದ 10 ವರ್ಷಗಳ ಅವಧಿಯ 81 ಸಾವಿರ ಕೋಟಿ ರೂ.ಗಳಿಗಿಂತ 246% ಹೆಚ್ಚಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ 11 ವರ್ಷಗಳಿಂದ ದೇಶದನ್ನು ಆಳುವುದರ ಮೂಲಕ ಉತ್ತಮವಾದ ಸರ್ಕಾರವನ್ನು ನೀಡಿದ್ದಾರೆ. ಯಾವುದೇ ರೀತಿಯ ಕಳಂಕ ಇಲ್ಲದೆ ಭ್ರಷ್ಠಾಚಾರ ರಹಿತವಾದ ಆಡಳಿತವನ್ನು ನೀಡಿದ್ದಾರೆ. ಇದರ ಬಗ್ಗೆ ತಿಳಿದುಕೊಂಡು ಬೇರೆ ಪಕ್ಷದವರು ಹೇಳುವ ಸುಳ್ಳು ಮಾತಿಗಳಿಗೆ ಸರಿಯಾದ ಉತ್ತರವನ್ನು ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ನೀಡಬೇಕಿದೆ.
ಮೋದಿಯವರು ಮಾಡಿದ ಸಾಧನೆಗಳನ್ನು ನಾವುಗಳು ತಿಳಿದುಕೊಂಡಿದ್ದರೆ ಅದನ್ನು ಬೇರೆಯವರಿಗೆ ತಿಳಿಸಲು ಅನುಕೂಲವಾಗುತ್ತದೆ. ವಾಜಿಪೇಯಿಯವರು ಇದ್ದಾಗ ದೇಶದ ಕ್ರೀಡಾ ಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಕಾಮನ್ ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿದ್ದರು. ಯುಪಿಎ ಸರ್ಕಾರದಲ್ಲಿ ಇದರ ಮೇಲೆ ಭ್ರಷ್ಠಾಚಾರವನ್ನು ಮಾಡಲಾಯಿತು, ಇದ್ದಲ್ಲದೆ 2ಜಿ ಸ್ಪೆಟ್ರಂನಲ್ಲಿಯೂ ಸಹಾ ಸಾಕಷ್ಟು ಹಗರಣವನ್ನು ಮಾಡಲಾಯಿತು. ಭೂಮಿಯ ಒಳಗಡೆ, ಭೂಮಿಯ ಮೇಲೆ ಹಾಗೂ ಸಮುದ್ರದ ಒಳಗಡೆಯಲ್ಲಿಯೂ ಸಹಾ ಅಂದಿನ ಯುಪಿಎ ಸರ್ಕಾರ ಭ್ರಷ್ಠಾಚಾರವನ್ನು ಮಾಡಿದೆ. ದೇಶದಲ್ಲಿ ಎರಡು ಬಾರಿ ಯುಪಿಎ ಸರ್ಕಾರ ಅಧಿಕಾರವನ್ನು ನಡೆಸಿತ ಈ ಸಮಯದಲ್ಲಿ ಆದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಿಂತ ಹೆಚ್ಚು ಕಿಮೀ ದೂರದ ಹೆದ್ದಾರಿಯನ್ನು ನಮ್ಮ ಮೋದಿಯವರ ಸರ್ಕಾರದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಈ ಕಾರ್ಯಾಗಾರದಲ್ಲಿ ಜಿಲ್ಲಾಧ್ಯಕ್ಷರಾದ ಎ ಮುರುಳಿ, ನಿಯೋಜಿತ ಜಿಲ್ಲಾಧ್ಯಕ್ಷರಾದ ಕೆ ಟಿ ಕುಮಾರಸ್ವಾಮಿ, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಬಾಳೆಕಾಯಿ ರಾಮದಾಸ್, ಜಿ ಟಿ ಸುರೇಶ್, ಅಭಿಯಾನದ ಪ್ರಮುಖರಾದ ಡಾ ಮಂಜುನಾಥ್, ಜಿ ಹೆಚ್ ಮೋಹನ್ ಕುಮಾರ್, ಸಿಂಧು ಅಶೋಕ್, ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.